ಫ್ರೀ ಬಸ್ ಎಫೆಕ್ಟ್ – ಅಪ್ಪು ಸಮಾಧಿ ದರ್ಶನಕ್ಕೆ ಹರಿದು ಬರುತ್ತಿದೆ ಜನಸಾಗರ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಹೆಸರು ಕೇಳುತ್ತಿದ್ದಂತೆ ಏನೋ ರೋಮಾಂಚನ. ಅಪ್ಪು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿ ಎರಡು ವರ್ಷಗಳಾಗುತ್ತಾ ಬಂತು. ಆದರೂ ಕೂಡ ಪರಮಾತ್ಮನ ಮೇಲಿನ ಪ್ರೀತಿ, ಅಭಿಮಾನ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿಯೇ ದಿವಂಗತ ಪುನೀತ್ ಸಮಾಧಿ ಸ್ಥಳವನ್ನ ದೇಗುಲದಂತೆ ಜನ ಪೂಜಿಸುತ್ತಾರೆ. ಇದೀಗ ರಾಜ್ಯದಲ್ಲಿ ಉಚಿತ ಬಸ್ ಸೇವೆಯಿಂದ ಅಪ್ಪು ದರ್ಶನಕ್ಕೆ ಬರುವ ಮಹಿಳೆಯರ ಸಂಖ್ಯೆ ಭಾರಿ ಏರಿಕೆ ಕಂಡಿದೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಮದುವೆ ಆಗುವವರೆಗೂ ತಾನು ಚಪ್ಪಲಿ ಹಾಕಲ್ಲ ಎಂದು ಶಪಥ ಮಾಡಿದ ರಾಖಿ ಸಾವಂತ್
ಜೀವಿತಾವಧಿಯಲ್ಲೊಮ್ಮೆ ಪರಮಾತ್ಮ ಚಿರನಿದ್ರೆಗೆ ಜಾರಿರುವ ಆ ಜಾಗವನ್ನ ಕಣ್ಣಾರೆ ನೋಡಬೇಕೆಂಬ ಹಲವು ಅಭಿಮಾನಿಗಳು ಕನಸು ಕಂಡಿದ್ದಾರೆ. ಈ ಕನಸು ಫ್ರೀ ಬಸ್ ನಿಂದಾಗಿ ನನಸಾಗುತ್ತಿದೆ. ಶಕ್ತಿ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಅಪ್ಪು ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಅಪ್ಪು ಸಮಾಧಿ ನೋಡಲು ಬರುತ್ತಿರುವವ ಸಂಖ್ಯೆ ಅಧಿಕವಾಗುತ್ತಿದೆ. ಆಶ್ಚರ್ಯ ಅನ್ನುವ ರೀತಿಯಲ್ಲಿ ಈ ಒಂದು ತಿಂಗಳಲ್ಲಿ ಅಪ್ಪು ಸಮಾಧಿಗೆ ಭೇಟಿ ಕೊಡುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ಭಾಗದ ಮಹಿಳೆಯರು ತಂಡೋಪತಂಡವಾಗಿ ಅಪ್ಪು ಸಮಾಧಿ ದರ್ಶನಕ್ಕೆ ಬರುತ್ತಿದ್ದಾರೆ.
ರಾಜ್ಯದಲ್ಲಿ ಫ್ರೀ ಬಸ್ ಆರಂಭವಾದಾಗಿಂದ ಅಪ್ಪು ಸಮಾಧಿಗೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿನಿತ್ಯ ಎರಡು ಸಾವಿರದಿಂದ ಐದು ಸಾವಿರದವರೆಗೂ ಅಭಿಮಾನಿಗಳು ಬರುತ್ತಾರೆ. ವೀಕೆಂಡ್‌ನಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಅಪ್ಪು ಸಮಾಧಿ ನೋಡಲು ಆಗಮಿಸುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಸಮಾಧಿ ನೋಡಲು ಜನಸಾಗರ ಹರಿದು ಬರುತ್ತಿರುವುದರಿಂದ ಕಂಠೀರವ ಸ್ಟುಡಿಯೋದ ಸುತ್ತಮುತ್ತ ವ್ಯಾಪಾರ ವಹಿವಾಟು ಹೆಚ್ಚಾಗುತ್ತಿದೆ. ಫುಡ್ ಸ್ಟ್ರೀಟ್, ಆಟಿಕೆಗಳು, ಹೂವುಹಣ್ಣು, ಜ್ಯೂಸ್, ಗಿಫ್ಟ್ ಐಟಮ್ಸ್ ಗಳು ಭಾರಿ ಸೇಲ್ ಆಗುತ್ತಿದೆ ಎಂದು ಅಲ್ಲಿನ ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ ಕಂಠೀರವ ಸ್ಟುಡಿಯೋ ಯಾವ ಪ್ರವಾಸಿ ಸ್ಥಳಕ್ಕೂ ಕಮ್ಮಿ ಇಲ್ಲದಂತಾಗಿದೆ.