ಉಚಿತವಾಗಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡುವ ಗಡುವು ವಿಸ್ತರಣೆ – ಸೆ. 14ರವರೆಗೆ ಅಪ್‌ಡೇಟ್ ಮಾಡಲು ಕಾಲಾವಕಾಶ
ನವದೆಹಲಿ: ಹತ್ತು ವರ್ಷಗಳ ಹಿಂದೆ ನೀಡಲಾದ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ತಿದ್ದುಪಡಿ ಮಾಡಿಸಿಕೊಳ್ಳಲು ಜೂ.14 ವರೆಗೆ ಕಾಲಾಕಾಶ ನೀಡಲಾಗಿತ್ತು. ಇದೀಗ ಉಚಿತವಾಗಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಸಿಕೊಳ್ಳುವ ಅವಧಿಯನ್ನು ವಿಸ್ತರಿಸಲಾಗಿದೆ. ಇನ್ನೂ ಮೂರು ತಿಂಗಳ ಕಾಲ ಉಚಿತವಾಗಿ ತಿದ್ದುಪಡಿ ಮಾಡಿಸಿಕೊಳ್ಳಬಹುದು.
ಅನೇಕ ಜನರ ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹಿಂದಿನದ್ದಾದರೂ ಒಮ್ಮೆಯೂ ಅಪ್ಡೇಟ್ ಮಾಡಿಲ್ಲ. ಈ ರೀತಿ 10 ವರ್ಷದಿಂದ ಯಥಾಸ್ಥಿತಿಯಲ್ಲಿ ಇರುವ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಬೇಕು ಎಂದು ಸರ್ಕಾರ ಮನವಿ ಮಾಡಿದೆ. ಇದೀಗ ಆಧಾರ್ ಕಾರ್ಡ್ನಲ್ಲಿ ನಮ್ಮ ದಾಖಲೆಗಳನ್ನು ಉಚಿತವಾಗಿ ತಿದ್ದುಪಡಿ ಮಾಡಿಸಿಕೊಳ್ಳಲು 2023 ಸೆಪ್ಟೆಂಬರ್ 14ರವರೆಗೆ ಅವಕಾಶ ನೀಡಲಾಗಿದೆ. ಆಧಾರ್ ಕಾರ್ಡ್ ಅನ್ನು ಆನ್ಲೈನ್ನಲ್ಲಿ ಉಚಿತವಾಗಿ ಅಪ್ಡೇಟ್ ಮಾಡಿಸಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಆಧಾರ್ ವಿವರಗಳನ್ನ ಅಪ್ಡೇಟ್ ಮಾಡಿಸಲು ಜೂನ್ 14 ಕೊನೆಯ ದಿನ – ನಂತರ ಎಷ್ಟು ಶುಲ್ಕ ಪಾವತಿ ಮಾಡಬೇಕು?
ಡೆಮೋಗ್ರಾಫಿಕ್ ಮಾಹಿತಿಯ ನಿಖರತೆ ಕಾಪಾಡಲು ದಯವಿಟ್ಟು ಆಧಾರ್ ಅಪ್ಡೇಟ್ ಮಾಡಿ ಎಂದು ಯುಐಡಿಎಐ ಕರೆ ನೀಡಿದೆ. ಯುಐಡಿಎಐನ ಮೈ ಆಧಾರ್ ಪೋರ್ಟಲ್ ಮೂಲಕ ಸುಲಭವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಬಹುದು. ಆಧಾರ್ ಕಾರ್ಡ್‌ನಲ್ಲಿರುವ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಫೋನ್ ಸಂಖ್ಯೆ, ಇ-ಮೇಲ್ ಅನ್ನು ಉಚಿತವಾಗಿ ನವೀಕರಿಸಬಹುದು. ಫೋಟೋ, ಐರಿಸ್ ಮತ್ತು ಬಯೋಮೆಟ್ರಿಕ್ ವಿವರಗಳಿಗಾಗಿ ಆಧಾರ್ ಕೇಂದ್ರದಲ್ಲಿ 50 ರೂ. ಶುಲ್ಕ ಪಾವತಿಸಿ ನವೀಕರಿಸಬೇಕು.
ಆನ್ಲೈನ್ನಲ್ಲಿ ಆಧಾರ್ ಅಪ್ಡೇಶನ್ ಹೇಗೆ ಮಾಡುವುದು?
ಆಧಾರ್ನ ಅಧಿಕೃತ ಪೋರ್ಟಲ್ ಮೈ ಆಧಾರ್ಗೆ ಹೋಗಿ ಆಧಾರ್ ನಂಬರ್ ಮತ್ತು ಮೊಬೈಲ್ ನಂಬರ್ ನೆರವಿನಿಂದ ಲಾಗಿನ್ ಆಗಿ. ಹೆಸರು, ಲಿಂಗ, ಜನ್ಮದಿನಾಂಕ, ವಿಳಾಸ ಅಪ್ಡೇಟ್ ಮಾಡಿ ಅಪ್ಡೇಟ್ ಆಧಾರ್ ಆನ್ಲೈನ್ ಎಂಬ ಆಪ್ಷನ್ ಆಯ್ದುಕೊಳ್ಳಿ ಅಲ್ಲಿ ಕೊಟ್ಟಿರುವ ಸೂಚನೆಗಳ ಪ್ರಕಾರ ಕ್ರಮ ಕೈಗೊಂಡು, ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿ ಈಗ ಸರ್ವಿಸ್ ರಿಕ್ವೆಸ್ಟ್ ನಂಬರ್ (ಎಸ್ಆರ್ಎನ್) ಜನರೇಟ್ ಆಗುತ್ತದೆ. ಅದನ್ನು ಸೇವ್ ಮಾಡಿಟ್ಟುಕೊಂಡಿರಿ. ಆಧಾರ್ ಅಪ್ಡೇಶನ್ ಪೂರ್ಣಗೊಂಡಿದೆಯಾ ಎಂಬುದನ್ನು ತಿಳಿದುಕೊಳ್ಳಲು ಯುಐಡಿಎಐನ 1947 ನಂಬರ್ಗೆ ಕರೆ ಮಾಡಬಹುದು. ಇದು ಟಾಲ್ಫ್ರೀ ಆಗಿದ್ದು, ಐವಿಆರ್ಎಸ್ ಸಿಸ್ಟಂ ಆಗಿದೆ. ಆಧಾರ್ ಸ್ಟೇಟಸ್ ಮಾತ್ರವಲ್ಲ, ಆಧಾರ್ ಎನ್ರೋಲ್ಮೆಂಟ್, ಪಿವಿಸಿ ಕಾರ್ಡ್ ಸ್ಟೇಟಸ್ ಅನ್ನೂ ಇಲ್ಲಿ ಪಡೆಯಬಹುದು. ಎಸ್ಸೆಮ್ಮೆಸ್ ಮೂಲಕ ಮಾಹಿತಿಯನ್ನೂ ಪಡೆಯಬಹುದು.