ಲಕ್ಷ ಲಕ್ಷ ವಂಚಿಸಿದ್ರಾ ಧೋನಿ, ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್? – ಐವರು ಅರೆಸ್ಟ್!

ಲಕ್ಷ ಲಕ್ಷ ವಂಚಿಸಿದ್ರಾ ಧೋನಿ, ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್? – ಐವರು ಅರೆಸ್ಟ್!

ನವದೆಹಲಿ: ಬಾಲಿವುಡ್ ನಟರು, ಕ್ರಿಕೆಟಿಗರ ಮೇಲೆ ಈಗ ಸೈಬರ್ ಕಳ್ಳರ ವಕ್ರ ದೃಷ್ಟಿ ಬಿದ್ದಿದೆ. ಇದೀಗ ಕೆಲ ನಟ- ನಟಿಯರ, ಕ್ರಿಕೆಟ್ ಆಟಗಾರರ ಹೆಸರಿನಲ್ಲಿ ನಕಲಿ ಪಾನ್ ಕಾರ್ಡ್ ಪಡೆದು ವಂಚಿಸುತ್ತಿದ್ದ ಜಾಲವನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಆನ್ ಲೈನ್ ನಲ್ಲಿ ಲಭ್ಯವಿರುವ ಬಾಲಿವುಡ್ ನಟರು ಹಾಗೂ ಕ್ರಿಕೆಟಿಗರ ಜಿಎಸ್ ಟಿ ಗುರುತಿನ ಸಂಖ್ಯೆಗಳಿಂದ ಪಾನ್ ಕಾರ್ಡ್ ವಿವರಗಳನ್ನು ಪಡೆದುಕೊಂಡು  ಅವುಗಳನ್ನು ಬಳಸಿ ಪುಣೆ ಮೂಲದ ಫಿನ್‌ಟೆಕ್ ಸ್ಟಾರ್ಟ್‌ಅಪ್ ‘ಒನ್ ಕಾರ್ಡ್’ನಿಂದ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ ಎಂದು ತನಿಖೆ ವೇಳೆ ಬಹಿರಂಗವಾಗಿದೆ.

ಇದನ್ನೂ ಓದಿ:‘ಫಿಫಾ’ ಬಳಿಕ ‘ಆಸ್ಕರ್’ ಅಂಗಳಕ್ಕೆ ದೀಪಿಕಾ ಪಡುಕೋಣೆ – ಹಾಲಿವುಡ್ ಮಂದಿ ಜತೆ ಮಿಂಚಲಿದ್ದಾರೆ ಬಾಲಿವುಡ್ ಬೆಡಗಿ!

ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ, ಬಾಲಿವುಡ್ ತಾರೆಯರಾದ ಅಭಿಷೇಕ್ ಬಚ್ಚನ್, ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್, ಇಮ್ರಾನ್ ಹಶ್ಮಿ ಅವರ ಹೆಸರು ಮತ್ತು ವಿವರಗಳನ್ನು ಸೈಬರ್ ಕಳ್ಳರು ಕದ್ದಿದ್ದಾರೆ. ಇಷ್ಟೇ ಅಲ್ಲದೇ ಈ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ 50 ಲಕ್ಷ ರೂಪಾಯಿ ವಂಚಿಸಲಾಗಿದೆ. ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ ಎಂದು ಶಹಾದ್ರಾ ಡಿಸಿಪಿ ರೋಹಿತ್ ಮೀನಾ ಹೇಳಿದ್ದಾರೆ.

ಬಂಧಿತ ಆರೋಪಿಗಳನ್ನು ಸುನಿಲ್ ಕುಮಾರ್, ಮೊಹಮದ್ ಆಸಿಫ್, ಪುನೀತ್, ಪಂಕಜ್, ವಿಶ್ವ ಭಾಸ್ಕರ್ ಶರ್ಮಾ ಎಂದು ಗುರುತಿಸಲಾಗಿದೆ.

‘ವಿಚಾರಣೆ ವೇಳೆ ವಂಚನೆಗೆ ಸಂಬಂಧಿಸಿದ ಕಾರ್ಯಾಚರಣೆಯ ವಿಧಾನವನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಈ ಸೆಲೆಬ್ರಿಟಿಗಳ ಜಿಎಸ್‌ಟಿ ವಿವರಗಳನ್ನು ಆರೋಪಿಗಳು ಗೂಗಲ್‌ನಲ್ಲಿ ಪಡೆಯುತ್ತಿದ್ದರು. ಜಿಎಸ್‌ಟಿಯ ಮೊದಲೆರಡು ಸಂಖ್ಯೆಗಳು ಸ್ಟೇಟ್ ಕೋಡ್ ಮತ್ತು ನಂತರದ ಸಂಖ್ಯೆಗಳು ಪಾನ್ ಕಾರ್ಡ್ ಸಂಖ್ಯೆಗಳು ಎಂಬುದು ಆರೋಪಿಗಳಿಗೆ ತಿಳಿದಿತ್ತು’ ಎಂದು ಪೊಲೀಸರು ಹೇಳಿದ್ದಾರೆ.

ಕಳ್ಳ ಮಾರ್ಗದ ಮೂಲಕ ಪಾನ್ ಕಾರ್ಡ್‌ಗಳನ್ನು ತಯಾರಿಸಿ ಅವುಗಳ ಮೇಲೆ ತಮ್ಮ ಚಿತ್ರಗಳನ್ನು ಹಾಕಿಕೊಳ್ಳುತ್ತಿದ್ದೆವು. ವಿಡಿಯೋ ಪರಿಶೀಲನೆಯ ಸಮಯದಲ್ಲಿ ಚಿತ್ರ ಹೊಂದಿಕೆಯಾಗುತ್ತಿತ್ತು ಎಂದು ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ.

suddiyaana