ಫ್ಲ್ಯಾಟ್‌ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ಲಕ್ಷಾಂತರ ರೂಪಾಯಿ ದೋಖಾ!

ಫ್ಲ್ಯಾಟ್‌ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ಲಕ್ಷಾಂತರ ರೂಪಾಯಿ ದೋಖಾ!

ನಗರ ಪ್ರದೇಶದಲ್ಲಿ ಬಾಡಿಗೆ ಮನೆ ಹುಡುಕುವುದು, ಫ್ಲ್ಯಾಟ್‌ ಖರೀದಿಸುವುದು ದೊಡ್ಡ ತಲೆನೋವಾಗಿದೆ. ಹೀಗಾಗಿ ಕೆಲವರು ವೆಸ್‌ಸೈಟ್‌ಗಳಲ್ಲಿ ಫ್ಲ್ಯಾಟ್ ಹುಡುಕಿದ್ರೆ ಇನ್ನೂ ಕೆಲವರು ಬ್ರೋಕರ್‌ಗಳ ಮೊರೆ ಹೋಗುತ್ತಾರೆ. ತಮಗೆ ಹುಡುಕಿ ಕೊಡುವಂತೆ ಕೇಳುತ್ತಾರೆ. ಇದೀಗ ಇಲ್ಲೊಬ್ಬ ಫ್ಲ್ಯಾಟ್‌ ಕೊಡಿಸುವುದಾಗಿ ಹೇಳಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾನೆ.

ಮಂಗಳೂರಿನಲ್ಲಿ ಫ್ಲ್ಯಾಟ್ ಕೊಡಿಸುವುದಾಗಿ ನಂಬಿಸಿದ ಇಬ್ಬರು ವ್ಯಕ್ತಿಗಳು ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಹಿಳೆಯೊಬ್ಬರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಮಾಡಿದ್ದಾರೆ. ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಸುಂದರ ಹುಡುಗಿಯರಿಗೆ ಗಾಳ, ಪ್ರೀತಿ ಹೆಸರಲ್ಲಿ ಲೈಂಗಿಕ ದೌರ್ಜನ್ಯ – ಪ್ರೇಯಸಿಯರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಾಮುಕ ಪ್ರೇಮಿ

ಅಶ್ರಫ್‌ ಹಸನ್‌ ಹಾಗೂ ಮಹಮ್ಮದ್‌ ಸಲಾಂ ಎಂಬವರು 2015ರಲ್ಲಿ ತಮ್ಮನ್ನು ಪ್ರಾಪರ್ಟಿ ಡೆವಲಪರ್‌ಗಳೆಂದು ಪರಿಚಯಿಸಿಕೊಂಡಿದ್ದಾರೆ. ನಂತರ ನಗರದ ಜೆಪ್ಪುವಿನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ ನಿರ್ಮಿಸುವುದಾಗಿ ಹಾಗೂ ಒಂದು ಫ್ಲ್ಯಾಟ್ ಕೊಡಿಸುವುದಾಗಿ ನಂಬಿಸಿ 30 ಲಕ್ಷ ರೂಪಾಯಿ ವಂಚಿಸಿದ್ದಾಗಿ ಮಹಿಳೆ ರುಚಿಯಾಬಿ ಮೂಡಂಬೈಲ್‌ ದೂರಿನಲ್ಲಿ ಆರೋಪಿಸಿದ್ದಾರೆ.

ಆರೋಪಿಗಳು 2017ರಲ್ಲಿ ಫ್ಲ್ಯಾಟ್ ನಿರ್ಮಾಣದ ಯೋಜನೆ ಪೂರ್ಣಗೊಳಿಸಲು ಒಪ್ಪಿಕೊಂಡು ರುಚಿಯಾಬಿ ಅವರಿಗೆ ನಗರದಲ್ಲಿ ನಿವೇಶನವೊಂದನ್ನು ತೋರಿಸಿದ್ದರು. ಅದರಂತೆ, ಆರೋಪಿಗಳು ರುಚಿಯಾಬಿ ಅವರಿಂದ 2015ರ ಜುಲೈ 15 ಮತ್ತು 2016 ರ ನವೆಂಬರ್ 21 ರ ನಡುವೆ ಕ್ರಮವಾಗಿ 20 ಲಕ್ಷ ಮತ್ತು 10 ಲಕ್ಷ ರೂ.ಗಳ ಚೆಕ್ ಪಡೆದಿದ್ದಾರೆ. ಆದರೆ ಒಪ್ಪಂದದಂತೆ 2017 ರಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ವಿಫಲರಾದ ಅಶ್ರಫ್ ಹಸನ್ ಮತ್ತು ಮೊಹಮ್ಮದ್ ಸಲಾಂ ಅವರು ರುಚಿಯಾಬಿ ಅವರಿಗೆ ತಲಾ 10 ಲಕ್ಷ ರೂ.ಗಳ ಮೂರು ಚೆಕ್‌ಗಳನ್ನು ನೀಡಿದ್ದಾರೆ. ಆದರೆ, ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ ಚೆಕ್ ಬೌನ್ಸ್ ಆಗಿದೆ. ಸದ್ಯ, ವಂಚನೆ ಸಂಬಂಧ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Shwetha M