ಫೈನಲ್‌ಗೆ ಲಗ್ಗೆಯಿಟ್ಟ ಫ್ರಾನ್ಸ್ – ಅರ್ಜೆಂಟೀನಾ ವಿರುದ್ಧ ವಿಶ್ವಕಪ್‌ಗಾಗಿ ಸೆಣಸಾಟ

ಫೈನಲ್‌ಗೆ  ಲಗ್ಗೆಯಿಟ್ಟ ಫ್ರಾನ್ಸ್ – ಅರ್ಜೆಂಟೀನಾ ವಿರುದ್ಧ ವಿಶ್ವಕಪ್‌ಗಾಗಿ ಸೆಣಸಾಟ

ಕತಾರ್‌: ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಈಗ ರೋಚಕ ಘಟ್ಟ ತಲುಪಿದೆ. ವಿಶ್ವಕಪ್ ಟ್ರೋಪಿಗಾಗಿ ಬಲಿಷ್ಠ ತಂಡಗಳಾದ ಫ್ರಾನ್ಸ್ ಮತ್ತು ಅರ್ಜೆಂಟೀನಾ ತಂಡ ಸೆಣಸಾಟ ನಡೆಸಲಿವೆ. ಬುಧವಾರ ತಡರಾತ್ರಿ ನಡೆದ ರೋಚಕ ಸೆಣಸಾಟದಲ್ಲಿ ಮೊರಾಕ್ಕೊ ತಂಡವನ್ನು 2-0 ಗೋಲುಗಳಿಂದ ಫ್ರಾನ್ಸ್ ತಂಡ ಮಣಿಸಿದೆ. ಪಂದ್ಯ ಶುರುವಾದ ಐದೇ ನಿಮಿಷದಲ್ಲಿ ಗೋಲು ಹೊಡೆದ ಫ್ರಾನ್ಸ್ ಆರಂಭದಲ್ಲೇ ಗೆಲುವಿನ ಹುಮ್ಮಸ್ಸಲ್ಲಿ ಆಟವಾಡಿ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಇದನ್ನೂ ಓದಿ:  ಫೈನಲ್ ಪ್ರವೇಶಿಸಿದ ಅರ್ಜೆಂಟೀನಾ – ನಾಯಕ ಮೆಸ್ಸಿ ಮ್ಯಾಜಿಕ್‌ಗೆ ಒಲಿದ ಗೆಲುವು

ಅಲ್ ಬಯಾತ್ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಸೆಮಿಫೈನಲ್ ಹಣಾಹಣಿಯಲ್ಲಿ ಮೊರಾಕ್ಕೊ ತಂಡ ಪ್ರಬಲ ಫ್ರಾನ್ಸ್‌ ವಿರುದ್ಧ ಪ್ರಬಲ ಹೋರಾಟ ನಡೆಸಿತ್ತು. ಸೆಮೀಸ್ ಪಂದ್ಯದಲ್ಲಿ ಫ್ರಾನ್ಸ್ ಪರ ಥಿಯೊ ಹೆರ್ನಾಂಡೀಸ್ ಮತ್ತು ಬದಲಿ ಆಟಗಾರನಾಗಿ ಬಂದ ರಂಡಲ್ ಕೊಲೊ ಮೌನಿ ತಲಾ ಒಂದು ಗೋಲು ಸಿಡಿಸಿ ಗೆಲುವಿಗೆ ಕಾರಣರಾದರು. ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಫ್ರಾನ್ಸ್ ಪಂದ್ಯದ 5ನೇ ನಿಮಿಷದಲ್ಲೇ ಮೊದಲ ಗೋಲು ಗಳಿಸಿತು. ಫ್ರಾನ್ಸ್ ಪರ ಥಿಯೋ ಹೆರ್ನಾಂಡೆಜ್ ಮೊದಲು ಗೋಲು ಗಳಿಸಿದರು. ಬಳಿಕ ಮೊರಾಕ್ಕೊ ಸಾಕಷ್ಟು ಬಾರಿ ಗೋಲು ಗಳಿಸಿದರು ಪ್ರಯತ್ನಿಸಿದರೂ ಫ್ರಾನ್ಸ್ ಆಟಗಾರರು ರಕ್ಷಣಾತ್ಮಕ ಆಟದ ಮೊರೆ ಹೋಗಿ ಮೊರಾಕ್ಕೊಗೆ ಗೋಲು ಗಳಿಸಲು ಅವಕಾಶ ನೀಡಲೇ ಇಲ್ಲ.

ಫೈನಲ್‌ಗೆ ಲಗ್ಗೆಯಿಟ್ಟ ಹುಮ್ಮಸ್ಸಲ್ಲಿರುವ ಫ್ರಾನ್ಸ್ , ವಿಶ್ವಕಪ್‌ಗಾಗಿ ಅರ್ಜೆಂಟೀನಾ ವಿರುದ್ಧ ಹೋರಾಟ ನಡೆಸಲಿದೆ. ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್‌ ಮೆಸ್ಸಿ ಅವರು ಅಂತರರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ನೀಡುವ ಬಗ್ಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಭಾನುವಾರ ನಡೆಯುವ ಫೈನಲ್‌ ಪಂದ್ಯ ತಮ್ಮ ಪಾಲಿಗೆ ಕೊನೆಯದು ಎಂದು ಸ್ವತಃ ಮೆಸ್ಸಿ ಅವರೇ ಖಚಿತಪಡಿಸಿದ್ದಾರೆ. ಹೀಗಾಗಿ ಈ ಬಾರಿಯ ವಿಶ್ವಕಪ್ ಫೈನಲ್ ಕಾದಾಟ ಹತ್ತು ಹಲವು ವಿಶೇಷತೆಗೆ ಕಾರಣವಾಗಲಿದೆ.

suddiyaana