ಸೊಳ್ಳೆ ಕಾಟ ಎಂದು ಕಾಯಿಲ್‌ ಹಾಕಿದ್ರೆ ಹುಷಾರ್‌..! – ಮಲಗಿದ್ದಲ್ಲೇ ಹೋಯ್ತು ನಾಲ್ವರ ಪ್ರಾಣ

ಸೊಳ್ಳೆ ಕಾಟ ಎಂದು ಕಾಯಿಲ್‌ ಹಾಕಿದ್ರೆ ಹುಷಾರ್‌..! – ಮಲಗಿದ್ದಲ್ಲೇ ಹೋಯ್ತು ನಾಲ್ವರ ಪ್ರಾಣ

ಮಳೆ ಹೆಚ್ಚಾಗುತ್ತಿದ್ದಂತೆ ಸೊಳ್ಳೆಗಳ ಕಾಟ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವ ಸೊಳ್ಳೆ ಬತ್ತಿ, ರಿಪಲೆಂಟ್ ಮೆಶಿನ್​ ಮುಂತಾದವುಗಳ ಮೊರೆ ಹೋಗುತ್ತೇವೆ. ರಾತ್ರಿ ಹೊತ್ತಲ್ಲಿ ಮಲಗುವ ವೇಳೆ ಇದನ್ನು ಉರಿಸಿ ಸೊಳ್ಳೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುತ್ತೇವೆ. ಆದರೆ ಇಲ್ಲೊಂದು ಕುಟುಂಬದ ನಾಲ್ವರನ್ನು ಸೊಳ್ಳೆ ರಿಪಲೆಂಟ್ ಮೆಶಿನ್​ ಬಲಿ ತೆಗೆದುಕೊಂಡಿದೆ.

ಚೆನ್ನೈನ ಮನಾಲಿಯಲ್ಲಿರುವ ಮಥುರ್​ ಎಂಎಂಡಿಯ ಏರಿಯಾದಲ್ಲಿ ಈ ದುರ್ಘಟನೆ ನಡೆದಿದೆ. ಮೂವರು ಮಕ್ಕಳು ಸಹ ರಾತ್ರಿ ಅಜ್ಜಿಯ ಜತೆ ಮಲಗಿದ್ದರು. ಅವರು ವಾಸಿಸುತ್ತಿದ್ದ ಪ್ರದೇಶದಲ್ಲಿ ಸೊಳ್ಳೆಗಳು ಹೆಚ್ಚಾಗಿದ್ದರಿಂದ ಸೊಳ್ಳೆ ನಿವಾರಕ ರಿಪಲೆಂಟ್ ಮೆಶಿನ್​ ಅನ್ನು ಆನ್​ ಮಾಡಿ ಮಲಗಿದ್ದರು. ಗಾಢ ನಿದ್ರೆಯಲ್ಲಿ ಇರುವಾಗ ಸೊಳ್ಳೆ ನಿವಾರಕ ರಿಪಲೆಂಟ್ ಮೆಶಿನ್​ ಓವರ್​ಹೀಟ್​ನಿಂದ ಮೆಲ್ಟ್​ ಆಗಿ ಹತ್ತಿರದಲ್ಲಿ ಇದ್ದ ಕಾರ್ಡ್​ಬೋರ್ಡ್​ ಬಾಕ್ಸ್​ ಮೇಲೆ ಬಿದ್ದಿದೆ. ಇದರಿಂದ ಉಂಟಾದ ಹೊಗೆಯಿಂದ ಉಸಿರಾಡಲು ಆಗದೇ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಬೇಸಿಗೆ ರಜೆ ಎಂದು ವಿದ್ಯಾರ್ಥಿನಿ ಮನೆಯಲ್ಲಿ ಬಾಡಿಗೆಗೆ ಇದ್ದ ಶಿಕ್ಷಕ – 15 ವರ್ಷದ ಬಾಲಕಿಯನ್ನ ಪುಸಲಾಯಿಸಿ ತಾಳಿ ಕಟ್ಟಿದ ಭೂಪ

ಶನಿವಾರ ಬೆಳಗ್ಗೆ ಅಕ್ಕ ಪಕ್ಕದ ಮನೆಯವರು ನೋಡಿದಾಗ ಮನೆಯ ಕಿಟಕಿಗಳಿಂದ ಹೊಗೆ ಆಚೆ ಬರುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ನಾಲ್ವರು ಮೃತಪಟ್ಟಿರುವು ಬೆಳಕಿಗೆ ಬಂದಿದೆ. ಈ ಘಟನೆ ಆ ಗ್ರಾಮದ ಜನರನ್ನು ಆತಂಕಕ್ಕೆ ದೂಡಿದೆ.

ಮೃತರನ್ನು ಸಂತಾನಲಕ್ಷ್ಮೀ ಮತ್ತು ಆಕೆಯ ಮೂವರು ಮಕ್ಕಳಾದ ಸಂಧ್ಯಾ (10), ಪ್ರಿಯಾ ರಕ್ಷಿತಾ (8) ಮತ್ತು ಪವಿತ್ರಾ (8) ಎಂದು ಗುರುತಿಸಲಾಗಿದೆ.

ಕುಟುಂಬದ ಯಜಮಾನ, ಒಡೆಯಾ ಎಂಬಾತ ಆನ್​ಲೈನ್​ ಫುಡ್​ ಡೆಲಿವರಿಬಾಯ್​ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಅವರ ಕಾಲಿಗೆ ಏಟು ಬಿದ್ದು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತನನ್ನು ನೋಡಿಕೊಳ್ಳಲೆಂದು ಪತ್ನಿ ಆಸ್ಪತ್ರೆಗೆ ಬಂದಿದ್ದರು. ಆಕೆಯ ತಾಯಿ, ಮನೆಯಲ್ಲಿದ್ದ ಮೂವರು ಮೊಮಕ್ಕಳನ್ನು ನೋಡಿಕೊಳ್ಳಲೆಂದು ವಾಪಸ್ಸಾಗಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಇತ್ತ ಆಸ್ಪತ್ರೆಯಲ್ಲಿರುವ ಒಡೆಯ ಮತ್ತು ಆತನ ಪತ್ನಿಗೆ ಈ ಸುದ್ದಿ ಬರ ಸಿಡಿಲು ಬಡಿದಂತಾಗಿದೆ. ಇನ್ನು ಈ ಘಟನೆಗೆ ಸೊಳ್ಳೆ ನಿವಾರಕ ರಿಪಲೆಂಟ್ ಮೆಶಿನ್​ ಕಾರಣ ಎಂದು ಹೇಳಲಾಗಿದ್ದರೂ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇದು ಕೂಡ ಸಂಭಾವ್ಯ ಕಾರಣ ಆಗಿರಬಹುದೆಂದು ತಿಳಿಸಿದ್ದಾರೆ. ಅಲ್ಲದೆ, ಮನೆಯಲ್ಲಿ ಬಳಸದ ಸಿಲಿಂಡರ್​ ಸಹ ಇತ್ತೆಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

suddiyaana