2 ದಿನ.. 4 ಜಿಂಕೆ ಸಾ*ವು – ದಾವಣಗೆರೆ ಮೃಗಾಲಯದ ಜಿಂಕೆಗಳ ಸರಣಿ ಸಾವಿನ ರಹಸ್ಯ ಬಯಲು!

2 ದಿನ.. 4 ಜಿಂಕೆ ಸಾ*ವು – ದಾವಣಗೆರೆ ಮೃಗಾಲಯದ ಜಿಂಕೆಗಳ ಸರಣಿ ಸಾವಿನ ರಹಸ್ಯ ಬಯಲು!

ದಾವಣಗೆರೆ ಜಿಲ್ಲೆಯ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ನಾಲ್ಕು ಚುಕ್ಕೆ ಜಿಂಕೆಗಳ ಸಾವಿಗೆ ಕಾರಣವೇನು ಅನ್ನೋದು ಬಹಿರಂಗ. ಹೆಮರಾಜಿಕ್ ಸೆಪ್ಟಿಸೆಮಿಯಾ  ಸಾಂಕ್ರಾಮಿಕ ರೋಗ ಕಾರಣ ಎಂದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಮೃಗಾಲಯದಲ್ಲಿ ಜನವರಿ 16ರಿಂದ ’18ರ ನಡುವೆ ಮೂರು ದಿನಗಳಲ್ಲಿ ನಾಲ್ಕು ಚುಕ್ಕೆ ಜಿಂಕೆಗಳು ಸಾವನ್ನಪ್ಪಿದ್ದವು. ಇದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಅರಣ್ಯ ಇಲಾಖೆಯ ವೈದ್ಯರು ಮೃತ ಜಿಂಕೆಗಳ ದೇಹದ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇದೀಗ ಪ್ರಯೋಗಾಲಯದ ವರದಿ ಅರಣ್ಯ ಇಲಾಖೆ ಅಧಿಕಾರಿಗಳ ಕೈಸೇರಿದೆ.

ಇದನ್ನೂ ಓದಿ: ಬೈಕ್‌ ಶೋರೂಂ ಅಗ್ನಿ ಅವಘಡ! – 13 ಎಲೆಕ್ಟ್ರಿಕ್ ಬೈಕ್ ಸುಟ್ಟು ಭಸ್ಮ!

‘ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ವನ್ಯಜೀವಿಗಳಿಗೆ ನೀಡುತ್ತಿದ್ದ ನೀರು ಮತ್ತು ಆಹಾರ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸುರಕ್ಷತೆಯ ಬಗ್ಗೆ ವರದಿಯಲ್ಲಿ ಖಚಿತವಾಗಿದೆ. ಮೃಗಾಲಯದ ಜಿಂಕೆಗಳು ಸಾಂಕ್ರಾಮಿಕ ಕಾಯಿಲೆಯಿಂದ ಮೃತಪಟ್ಟಿವೆ ಎಂಬುದು ಪ್ರಯೋಗಾಲಯದ ವರದಿಯಿಂದ ಖಚಿತವಾಗಿದೆ. ರೋಗಲಕ್ಷಣಗಳನ್ನು ಗಮನಿಸಿ ಉಳಿದ ಜಿಂಕೆಗಳಿಗೆ ನೀಡುತ್ತಿದ್ದ ಚಿಕಿತ್ಸೆಯನ್ನು ಮುಂದುವರೆಸಲಾಗುತ್ತಿದೆ. ಪಶು ವೈದ್ಯಕೀಯ ತಂಡ ಮೃಗಾಲಯದಲ್ಲಿ ಬೀಡುಬಿಟ್ಟಿದೆ. ಉಳಿದ ಜಿಂಕೆಗಳ ಮೇಲೆ ತಂಡ ನಿಗಾ ವಹಿಸಿದೆ” ಎಂದು ಡಿಎಫ್ಓ ಪಿ.ಎನ್‌.ಹರ್ಷವರ್ಧನ್‌  ಮಾಹಿತಿ ನೀಡಿದ್ದಾರೆ.

​ಜನವರಿ 16ರಂದು ಮೊದಲ ಚುಕ್ಕೆ ಜಿಂಕೆಯ ಸಾವು ದಾಖಲಾಯಿತು. ತಕ್ಷಣವೇ ವಿಭಾಗೀಯ ಅಧಿಕಾರಿಗಳು ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು (SOP) ಜಾರಿಗೆ ತಂದರು. ​ಜ.17ರಂದು ಮತ್ತೆರಡು ಜಿಂಕೆಗಳು ಮೃತಪಟ್ಟವು. ತಕ್ಷಣವೇ ಪ್ರಾಣಿ ಆರೋಗ್ಯ ಸಲಹಾ ಸಮಿತಿಯ ಸದಸ್ಯರನ್ನು ಸ್ಥಳಕ್ಕೆ ಭೇಟಿ ನೀಡಲು ಕೋರಲಾಯಿತು. ​ಜನವರಿ 18ರಂದು ಮತ್ತೊಂದು ಜಿಂಕೆ ಮೃತಪಟ್ಟಿರುವುದು ಕಂಡುಬಂದಿದೆ. ಸಮಿತಿಯ ಸದಸ್ಯರು ಸ್ಥಳ ಪರಿಶೀಲನೆ ನಡೆಸಿ, ನಿಖರ ಕಾರಣ ತಿಳಿಯಲು ರಕ್ತದ ಮಾದರಿ ಮತ್ತು ಅಂಗಾಂಗಗಳನ್ನು ಲ್ಯಾಬ್‌ಗೆ ಕಳುಹಿಸಿದ್ದರು.

 ಹಿರಿಯ ಪಶುವೈದ್ಯರು ಮತ್ತು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಮೃಗಾಲಯದಾದ್ಯಂತ ಕಟ್ಟುನಿಟ್ಟಿನ ಜೈವಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ​ಮೃಗಾಲಯದಲ್ಲಿ 94 ಹೆಣ್ಣು, 58 ಗಂಡು ಹಾಗೂ 18 ಮರಿಗಳು ಸೇರಿ ಒಟ್ಟು 170 ಚುಕ್ಕೆ ಜಿಂಕೆಗಳಿವೆ. ಉಳಿದ ಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ” ಎಂದು ತಿಳಿಸಿದ್ದರು.

Kishor KV