ಕಾಡುಮೃಗಗಳ ನಡುವೆ ಬದುಕಿಗಾಗಿ 40 ದಿನಗಳ ಸಾಹಸ – ಅಮೆಜಾನ್ ಅರಣ್ಯದಲ್ಲಿ ನಾಲ್ವರು ಮಕ್ಕಳ ರಕ್ಷಣೆಯ ರೋಚಕ ಕಥೆ

ಕಾಡುಮೃಗಗಳ ನಡುವೆ ಬದುಕಿಗಾಗಿ 40 ದಿನಗಳ ಸಾಹಸ – ಅಮೆಜಾನ್ ಅರಣ್ಯದಲ್ಲಿ ನಾಲ್ವರು ಮಕ್ಕಳ ರಕ್ಷಣೆಯ ರೋಚಕ ಕಥೆ

ಜಗತ್ತಿನ ಅತ್ಯಂತ ಮತ್ತು ನಿಗೂಢ ಕಾಡು ಅಂದ್ರೆ ಅದು ಅಮೆಜಾನ್. ಅಮೆಜಾತ್ ಗಾತ್ರವನ್ನ ಒಂದೇ ವಾಕ್ಯದಲ್ಲಿ ಹೇಳೋದಾದ್ರೆ ಇದು ಇಡೀ ಭಾರತದಷ್ಟು ದೊಡ್ಡ ಗಾತ್ರದಲ್ಲಿ ಹರಡಿರುವ ಕಾಡು. ಈ ದೈತ್ಯ ಅಮೆಜಾನ್​ನಲ್ಲಿ ಏನೆಲ್ಲಾ ಜೀವಿಗಳಿವೆ ಅನ್ನೋದನ್ನ ಇನ್ನೂ ಕೂಡ ಸಂಪೂರ್ಣವಾಗಿ ಪತ್ತೆ ಹಚ್ಚೋಕೆ ಸಾಧ್ಯವಾಗಿಲ್ಲ. ಅಮೆಜಾನ್​​ನಲ್ಲಿ ಏನೆಲ್ಲಾ ಇವೆ ಅನ್ನೋದು ಬಹುತೇಕ ಇನ್ನೂ ಮಾನವನ ಅರಿವಿಗೆ ಬಂದಿಲ್ಲ.. ಕಣ್ಣಿಗೆ ಕಂಡಿಲ್ಲ.. ಜಗತ್ತಿನ ಬೇರೆಲ್ಲೂ ಇಲ್ಲದ ಪ್ರಾಣಿಗಳು ಈ ದಟ್ಟ ಕಾನನದಲ್ಲಿವೆ. ಅನಕೊಂಡಾದಿಂದ ಹಿಡಿದು ಅನೇಕ ಅಪಾಯಕಾರಿ ಜೀವಗಳಿಗೆ ಈ ಅಮೆಜಾನ್ ಕಾಡೇ ಆಶ್ರಯ. ಅತ್ಯಂತ ಅಗಲದ ನದಿ ಕೂಡ ಈ ಕಾಡಿನ ಮಧ್ಯೆಯೇ ಹರಿಯುತ್ತಿಗೆ. ಅಂಥಾ ಅಮೆಜಾನ್​​ನೊಳಗೆ ಮನುಷ್ಯರು ಸಿಕ್ಕಿಹಾಕಿಕೊಂಡರೆ ಪರಿಸ್ಥಿತಿ ಏನಾಗಬೇಡ. ಈಗ ಅಂಥದ್ದೊಂದು ಭಯಾನಕ ಘಟನೆ ನಡೆದಿದೆ. ಅದು ಕೂಡ 11 ತಿಂಗಳ ಮಗು ಸೇರಿ ಒಟ್ಟು ನಾಲ್ವರು ಪುಟ್ಟ ಮಕ್ಕಳು ದೈತ್ಯ ಅಮೆಜಾನ್​ನಲ್ಲಿ ಕಾಣೆಯಾಗಿದ್ದರು.

ಇದನ್ನೂ ಓದಿ: ಅಮೆಜಾನ್ ನಲ್ಲಿ ಬುಕ್ ಮಾಡಿದ್ದು ಮ್ಯಾಕ್​ಬುಕ್ ಪ್ರೊ – ಗ್ರಾಹಕನ ಕೈ ಸೇರಿದ್ದು ಪೆಡಿಗ್ರಿ!

ಕಳೆದ ಮೇ 1ರಂದು ಲಘು ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ಕೊಲಂಬಿಯಾದ ಅಮೆಜಾನ್​​ ಕಾಡಿನಲ್ಲಿ ಪತನಗೊಂಡಿತ್ತು. ಈ ವೇಳೆ ಪೈಲಟ್, ಬುಡಕಟ್ಟು ಸಮುದಾಯದ ನಾಯಕ ಮತ್ತು ಮಹಿಳೆ ಸೇರಿ ಒಟ್ಟು ಮೂವರು ಮೃತಪಟ್ಟಿದ್ದರು. ಆದರೆ, ಅದೇ ವಿಮಾನದಲ್ಲಿ ಮೃತ ತಾಯಿಯ 11 ತಿಂಗಳ ಮಗು ಸೇರಿದಂತೆ ನಾಲ್ವರು ಮಕ್ಕಳು ಕೂಡ ಇದ್ದರು. ವಿಮಾನ ಬಿದ್ದ ಜಾಗ ಪರಿಶೀಲಿಸಿದಾಗ ಅಲ್ಲಿ ಮೂವರ ಶವ ಮಾತ್ರ ಪತ್ತೆಯಾಗಿದ್ದು, ಆದ್ರೆ, ನಾಲ್ವರು ಪುಟ್ಟ ಮಕ್ಕಳ ಸುಳಿವೇ ಇರಲಿಲ್ಲ. ದುರಂತ ನಡೆದ ಸಂದರ್ಭದಲ್ಲಿ ಕೊಲಂಬಿಯಾ ಅಧ್ಯಕ್ಷರು ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ ಅಂತಾ ಟ್ವೀಟ್ ಮಾಡಿದ್ರು. ಆದ್ರೆ ಆ ಮಾಹಿತಿ ಸುಳ್ಳಾಗಿತ್ತು. ಬಳಿಕ ಅಧ್ಯಕ್ಷ ಪೆಟ್ರೋ ಇಡೀ ದೇಶದ ಜನರ ಕ್ಷಮೆಯಾಚಿಸಿದ್ದರು. ಅಸಲಿಗೆ 13 ವರ್ಷದ ಲೆಸ್ಲಿ, 9 ವರ್ಷದ ಸೊಲೇನಿ, 4 ವರ್ಷ ನೋರಿಲ್ ಮತ್ತು 11 ತಿಂಗಳ ಪುಟ್ಟ ಮಗು ಸೇರಿ ಎಲ್ಲರೂ ಎಲ್ಲಿದ್ದಾರೆ? ಏನಾಗಿದ್ದಾರೆ? ಬದುಕಿದ್ದಾರಾ, ಸತ್ತಿದ್ದಾರಾ ಅನ್ನೋದೆ ಯಾರಿಗೂ ಗೊತ್ತಿರಲಿಲ್ಲ. ಕೊಲಂಬಿಯಾದ ಸೇನಾ ಪಡೆಯ 200ಕ್ಕೂ ಅಧಿಕ ಸೈನಿಕರು ಅರಣ್ಯದ ಬಗ್ಗೆ ತಿಳಿದಿರುವ ಬುಡಕಟ್ಟು ಜನಾಂಗದ ಜೊತೆಗೆ ರಕ್ಷಣಾ ಕಾರ್ಯಾಚರಣೆಗೆ ಇಳಿದಿತ್ತು. ಮಕ್ಕಳ ಹುಡುಕಾಟಕ್ಕೂ ಸೈನಿಕರು ಶಸ್ತ್ರಸಜ್ಜಿತರಾಗಿಯೇ ಬಂದಿದ್ರು. ಯಾಕಂದ್ರೆ, ಆ ದಟ್ಟಡವಿಯಲ್ಲಿ ಯಾವಾಗ ಎಲ್ಲಿ ಏನು ಎದುರಾಗುತ್ತೋ ಹೇಳೋಕೆ ಸಾಧ್ಯವಿಲ್ಲ. ಹೀಗಾಗಿ ಸ್ಥಳೀಯ ಜನರ ನೆರವಿನೊಂದಿಗೆ ಹುಡುಕಾಟ ಶುರುವಾಗಿತ್ತು. ಹಲವು ದಿನಗಳ ಹುಡುಕಾಟದ ಬಳಿಕ ಕೆಸರಿನಲ್ಲಿ ಒಂದು ಮಗುವಿನ ಹೆಜ್ಜೆಗುರುತು ಮಾತ್ರ ಪತ್ತೆಯಾಗಿತ್ತು.  ಆಗ ಮಕ್ಕಳು ಬದುಕಿದ್ದಾರೆ ಅನ್ನೋದು ರಕ್ಷಣಾ ಸಿಬ್ಬಂದಿಗೆ ಖಚಿತವಾಗುತ್ತೆ. ಅಷ್ಟೇ ಅಲ್ಲ, ಆ ಹೆಜ್ಜೆಗುರುತು, 13 ವರ್ಷದ ಲೆಸ್ಲಿ ಅನ್ನೋ ಬಾಲಕಿಯದ್ದಿರಬೇಕು ಅಂತಾ ಅಂದಾಜಿಸಲಾಗಿತ್ತು. ನಾಲ್ವರು ಮಕ್ಕಳಲ್ಲಿ ಲೆಸ್ಲಿಯೇ ಅತ್ಯಂತ ದೊಡ್ಡವಳಾಗಿದ್ದಳು. ರಕ್ಷಣಾ ಸಿಬ್ಬಂದಿ ಇನ್ನೂ ಸ್ವಲ್ಪ ಮುಂದಕ್ಕೆ ಹೋದಾಗ ಸಣ್ಣದಾಗಿ ಕಚ್ಚಿದ ಹಣ್ಣೊಂದು ಕಾಡಿನ ಮಧ್ಯ ಸಿಕ್ಕಿತ್ತು. ಆ ಹಣ್ಣನ್ನು ಪೂರ್ತಿಯಾಗಿ ತಿಂದಿರಲಿಲ್ಲ. ಯಾಕಂದ್ರೆ ಅಮೆಜಾನ್​​ನಂಥಾ ಕಾಡಿನಲ್ಲಿ ತಿನ್ನೋ ಹಣ್ಣು ಯಾವುದು? ವಿಷದ ಹಣ್ಣು ಯಾವುದು ಅನ್ನೋದನ್ನ ಗುರುತು ಹಿಡಿಯೋದೆ ಕಷ್ಟ. ಹೀಗಾಗಿ ಮಕ್ಕಳು ಹಣ್ಣಿನ ರುಚಿ ನೋಡಿ ಎಸೆದಿರೋದು ಸ್ಪಷ್ಟವಾಗಿತ್ತು. ಹಾಗೆಯೇ ಇನ್ನೂ ಒಂದಷ್ಟು ಹೆಜ್ಜೆ ಇಟ್ಟಾಗ ಒಂದು ಶೂ ಪೇರ್​​ ಪತ್ತೆಯಾಗುತ್ತೆ. ಬಳಿಕ ಮಗು ಹಾಲು ಕುಡಿಯುವ ಬಾಟಲ್​ ಕೂಡ ಸಿಗುತ್ತೆ. ಇಷ್ಟೆಲ್ಲಾ ಸಿಕ್ಕರೂ ಮಕ್ಕಳು ಮಾತ್ರ ಎಲ್ಲೂ ಕಾಣಿಸಲೇ ಇಲ್ಲ.

ಮಕ್ಕಳು ನಾಪತ್ತೆಯಾಗಿ ವಾರ ಕಳೆಯಿತು.. ಎರಡು ವಾರವೇ ದಾಟಿತು.. ಊಹುಂ.. ಯಾರೊಬ್ಬರದ್ದೂ ಸುಳಿವೇ ಸಿಗಲಿಲ್ಲ. ಈ ನಡುವೆ, ಮಕ್ಕಳು ಸಾಗಿರಬಹುದಾದ ಜಾಗವನ್ನ ಅಂದಾಜಿಸಿ ಕೊಲಂಬಿಯಾ ವಾಯುಪಡೆ ಹೆಲಿಕಾಪ್ಟರ್​​ ಮೂಲಕ ಒಂದಷ್ಟು ಆಹಾರ ಪೊಟ್ಟಣ, ನೀರಿನ ಬಾಟಲ್​​ಗಳನ್ನ ಕೆಳಕ್ಕೆ ಎಸೆಯಲಾಗಿತ್ತು. ಎಲ್ಲಾದ್ರೂ ಮಕ್ಕಳಿಗೆ ಸಿಕ್ಕಲ್ಲಿ ಹೊಟ್ಟೆ ತುಂಬಿಸಿಕೊಳ್ಳಲಿ ಅನ್ನೋದು ಇದರ ಉದ್ದೇಶವಾಗಿತ್ತು. ಜೊತೆಗೆ ಮಕ್ಕಳಿಗೆ ಅರ್ಥವಾಗುವ ಸ್ಥಳೀಯ ಭಾಷೆಯಲ್ಲೇ ಸುಮಾರು 10 ಸಾವಿರದಷ್ಟು ಬರಹದ ಪ್ಲೇಟ್​​ಗಳನ್ನ ಹೆಲಿಕಾಪ್ಟರ್ ಮೂಲಕವೇ ಕಾಡಿನಲ್ಲಿ ಹರಡಾಗಿತ್ತು. ಇನ್ನು, ಮಕ್ಕಳು ಹಾದು ಹೋದ ಪ್ರದೇಶವಂತೂ ಸಂಪೂರ್ಣ ಕಾಡು ಪ್ರಾಣಿಗಳಿಂದಲೇ ತುಂಬಿತ್ತು. ನೋಡೋಕೆ ಚಿರತೆಯಂತಿರುವ ಅದಕ್ಕಿಂತಲೂ ಅಪಾಯಕಾರಿಯಾಗಿರುವ ಜಾಗ್ವಾರ್, ಅತ್ಯಂತ ವಿಷಕಾರಿ ಹಾವುಗಳಿದ್ದ ಏರಿಯಾದಲ್ಲೇ ಈ ಪುಟ್ಟ ಮಕ್ಕಳು ಸಾಗಿದ್ದರು. ಹೀಗಾಗಿ ಮಕ್ಕಳ ಸ್ಥಿತಿಯೇನಾಗಿರಬಹುದು ಅನ್ನೋದನ್ನ ಊಹಿಸೋಕೂ ಸಾಧ್ಯವಿಲ್ಲ. ಇದೇ ಕಾರಣಕ್ಕೆ ಕಾರ್ಯಾಚರಣೆ ತಂಡದಲ್ಲಿದ್ದ ಬುಡಕಟ್ಟು ಜನಾಂಗದ ಮಂದಿ ಹಾದಿಯುದ್ದಕ್ಕೂ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅಮೆಜಾನ್ ಬುಡಕಟ್ಟು ಜನಾಂಗದವರಲ್ಲಿ ಒಂದು ಸಂಪ್ರದಾಯವಿದೆ. ಕಾಡಿನ ಜೊತೆಗೆ ಮಾತನಾಡೋದು ಅಂತಾ. ಅಂದ್ರೆ ಕಾಡಿಗೆ ಪ್ರಾರ್ಥನೆ ಸಲ್ಲಿಸೋದು. ಈ ಬುಡಕಟ್ಟು ಜನಾಂಗದ ಮಂದಿ ನಮ್ಮ ಮಕ್ಕಳನ್ನ ಸುರಕ್ಷಿತವಾಗಿ ವಾಪಸ್ ಕೊಡು ಅಂತಾ ಹಾದಿಯುದ್ದಕ್ಕೂ ಪ್ರಾರ್ಥನೆ ಮಾಡುತ್ತಲೇ ಇದ್ದರು. ಭಾರತ ಸೇರಿದಂತೆ ಜಗತ್ತಿನ ಯಾವುದೇ ಭಾಗದಲ್ಲೇ ತೆಗೆದುಕೊಳ್ಳಿ. ಬುಡಕಟ್ಟು ಜನಾಂಗದ ಮಂದಿ ಪಾಲಿಗೆ ಕಾಡು ದೇವರಿಗೆ ಸಮಾನ. ನಿತ್ಯವೂ ಕಾಡನ್ನ ಪೂಜಿಸ್ತಾರೆ. ಇದೇ ಕಾರಣಕ್ಕೆ ಕಾಡಿನಲ್ಲಾಗುವ ಪ್ರತಿ ಬೆಳವಣಿಗೆ, ಪ್ರಾಣಿ, ಪಕ್ಷಿಗಳ ನಡತೆ ಬಗ್ಗೆ ಬುಡಕಟ್ಟು ಜನಾಂಗದ ಮಂದಿ ಸೂಕ್ಷ್ಮವಾದ ಅರಿವು ಇರುತ್ತೆ. ಅವರು ಯಾವತ್ತೂ ಕಾಡುಗಳನ್ನ ನಾಶಪಡಿಸೋ ಕೆಲಸಕ್ಕೆ ಕೈ ಹಾಕೋದಿಲ್ಲ..

ಈ ನಾಪತ್ತೆಯಾಗಿದ್ದ ಮಕ್ಕಳು ಕೂಡ ಬುಡಕಟ್ಟು ಜನಾಂಗಕ್ಕೆ ಸೇರಿದವರು. ಕಾಡಿನ ಹಿತ್ತಲಿನಲ್ಲೇ ಹುಟ್ಟಿ ಬೆಳೆದವರು. ಹೀಗಾಗಿ ಕಾಡಿನ ಬಗ್ಗೆ ಅವರಿಗೂ ಒಂದಷ್ಟು ಜ್ಞಾನ ಇತ್ತು. ಎಷ್ಟಾದರೂ ಮಕ್ಕಳೇ ಆಗಿರೋದ್ರಿಂದ, ಅದ್ರಲ್ಲೂ 11 ತಿಂಗಳ ಮಗು ಇದ್ದಿದ್ದರಿಂದ ಆ ಕಾಡಲ್ಲಿ ಸರ್ವೈವ್ ಆಗೋಕೆ ಸಾಧ್ಯಾನಾ ಅನ್ನೋ ಪ್ರಶ್ನೆ ಕಾಡದೇ ಇರುವುದಿಲ್ಲ. ಹಾಗಂತಾ ಮಕ್ಕಳು ಸತ್ತೇ ಹೋಗಿರಬಹುದು ಅಂತಾ ಕಾರ್ಯಾಚರಣೆ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಯಾವ ರೀತಿ ಬೇಕಾದರೂ ಪವಾಡವಾಗಬಹುದು. ಈ ಹಿಂದೆಯೂ ಇಂಥಾ ಹಲವು ಪ್ರಕರಣಗಳಲ್ಲಿ ಅದೆಷ್ಟೋ ಮಂದಿ ಸಾವನ್ನೇ ಗೆದ್ದು ಬಂದಿದ್ದಾರೆ. ಹೀಗಾಗಿ ರಕ್ಷಣಾ ಕಾರ್ಯ ಇನ್ನಷ್ಟು ಭರದಿಂದ ಸಾಗುತ್ತದೆ. ಇಡೀ ಕೊಲಂಬಿಯಾ ಜನತೆ ಮಕ್ಕಳು ಜೀವಂತವಾಗಿ ಸಿಗಲಿ ಅಂತಾ ಭಗವಂತನ ಮೊರೆ ಹೋಗುತ್ತಾರೆ. ಸರ್ಕಾರದ ಕಂಪ್ಲೀಟ್ ಫೋಕಸ್ ಮಕ್ಕಳ ರಕ್ಷಣಾ ಕಾರ್ಯದ ಮೇಲೆಯೇ ನೆಟ್ಟಿರುತ್ತೆ. 15 ದಿನಗಳಾಯ್ತು.. 20 ದಿನಗಳಾಯ್ತು.. ಒಂದು ತಿಂಗಳೇ ಕಂಪ್ಲೀಟ್ ಆಯ್ತು.. ಆದರೂ ಮಕ್ಕಳು ಮಾತ್ರ ಎಲ್ಲೂ ಕಾಣಿಸಿಲ್ಲ. ಆ ಪುಟ್ಟ ಕಂದಮ್ಮಗಳ ಕಥೆ ಮುಗಿದೇ ಹೋಯ್ತು ಅಂತಾನೆ ಎಲ್ಲರೂ ಅಂದುಕೊಂಡಿದ್ದರು. ಆಶಾಭಾವನೆ ಅನ್ನೋದು ದಿನದಿಂದ ದಿನಕ್ಕೆ ಕಮರುತ್ತಾ ಸಾಗಿತ್ತು..

40ನೇ ದಿನ ಅಮೆಜಾನ್ ಕಾಡಿನಲ್ಲಿ ಮತ್ತೆಯಾದ ಮಕ್ಕಳು!

ಪವಾಡ ಸಂಭವಿಸಿಯೇ ಬಿಟ್ಟಿತ್ತು. ನಾಪತ್ತೆಯಾಗಿ 40ನೇ ದಿನ ಅಂದರೆ, ಜೂನ್ 10ರಂದು ಶನಿವಾರ ಎಲ್ಲರಿಗೂ ಶುಭ ಸುದ್ದಿ ಸಿಕ್ಕಿತ್ತು. 11 ತಿಂಗಳ ಮಗು ಸೇರಿ ನಾಲ್ವರೂ ಮಕ್ಕಳು ಕಾಡಿನ ಮಧ್ಯೆ ಪತ್ತೆಯಾಗಿದ್ದಾರೆ. ರಕ್ಷಣಾ ಸಿಬ್ಬಂದಿ ಕೊನೆಗೂ ತಮ್ಮ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳು ಸಂಪೂರ್ಣವಾಗಿ ಬಲ ಹೀನವಾಗಿದ್ದಾರೆ. ಎಲುಬು ಕಾಣಿಸುವಷ್ಟರ ಮಟ್ಟಿಗೆ ತೆಳ್ಳಗಾಗಿದ್ದಾರೆ. ಸದ್ಯ ಈ ನಾಲ್ವರೂ ಕಾಡಿನ ಮಕ್ಕಳನ್ನ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಮಾನಸಿಕ ಪರಿಸ್ಥಿತಿ ಬಗ್ಗೆ ವೈದ್ಯರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮಕ್ಕಳು ಸೇಫ್ ಆಗಿ ಪತ್ತೆಯಾಗುತ್ತಲೇ ಕೊಲಂಬಿಯಾ ಅಧ್ಯಕ್ಷ ಪೆಟ್ರೋ ಸಿಹಿ ಸುದ್ದಿಯನ್ನ ದೇಶದ ಜನರ ಮುಂದೆ ಬಿಚ್ಚಿಟ್ಟಿದ್ದಾರೆ. ಇಡೀ ಕೊಲಂಬಿಯಾ ದೇಶದಲ್ಲಿ ಸಂಭ್ರಮ ಮನೆ ಮಾಡಿದೆ. ಬುಡಕಟ್ಟು ಜನಾಂಗದ ಮಂದಿಯ ಪ್ರಾರ್ಥನೆ ಫಲಿಸಿದೆ. ಕಾಡಿಗೆ, ಪ್ರಕೃತಿ ಮಾತೆಗೆ ನಮನ ಸಲ್ಲಿಸುತ್ತಿದ್ದಾರೆ.

ಅಮೆಜಾನ್ ಕಾಡಲ್ಲಿ ಮಕ್ಕಳು ಬಚಾವಾಗಿದ್ದು ಹೇಗೆ?

ಅಷ್ಟಕ್ಕೂ 11 ತಿಂಗಳು ಮಗು ಸೇರಿ ಈ ನಾಲ್ವರು ಮಕ್ಕಳು ಅಂಥಾ ಅಮೆಜಾನ್​ ಕಾಡಿನಲ್ಲಿ ಬದುಕುಳಿದಿದ್ದಾದ್ರೂ ಹೇಗೆ ಅನ್ನೋದೆ ಮಿಲಿಯನ್ ಡಾಲರ್ ಪ್ರಶ್ನೆ. ಕೆಲ ಮಾಹಿತಿ ಪ್ರಕಾರ, ಕೇವಲ ನೀರು ಕುಡಿದು, ಸೊಪ್ಪು ತಿಂದೇ 40 ದಿನಗಳ ಕಾಲ ಈ ಮಕ್ಕಳು ಜೀವ ಉಳಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಸದ್ಯ ಈ ಎಲ್ಲಾ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಚೇತರಿಸಿಕೊಂಡ ಬಳಿಕವಷ್ಟೇ ಮಕ್ಕಳ ಬಳಿ ಈ ಬಗ್ಗೆ ವಿಚಾರಿಸಬೇಕಿದೆ. ಏನೆಲ್ಲಾ ಸವಾಲುಗಳನ್ನ ಎದುರಿಸಿದ್ರು? ಏನನ್ನ ತಿಂದ್ರು? 11 ತಿಂಗಳ ಮಗುವನ್ನ ಈ ಮಕ್ಕಳೇ ಕಾಪಾಡಿದ್ದು ಹೇಗೆ? ಕಾಡು ಪ್ರಾಣಿಗಳು ಎದುರಾಗಿದ್ವಾ ಇವೆಲ್ಲದಕ್ಕೂ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

suddiyaana