ತುಮಕೂರಿನಲ್ಲಿ ಒಂದೇ ಗ್ರಾಮದ ನಾಲ್ವರು ಮಕ್ಕಳು ನಾಪತ್ತೆ – ಪೊಲೀಸರಿಗೆ ಸಿಕ್ಕಿರುವ ಸುಳಿವೇನು?

ತುಮಕೂರಿನಲ್ಲಿ ಒಂದೇ ಗ್ರಾಮದ ನಾಲ್ವರು ಮಕ್ಕಳು ನಾಪತ್ತೆ – ಪೊಲೀಸರಿಗೆ ಸಿಕ್ಕಿರುವ ಸುಳಿವೇನು?

ಒಂದೇ ಗ್ರಾಮ. ನಾಲ್ವರು ಮಕ್ಕಳು. ಎಲ್ಲರೂ ಕೂಡ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಎಲ್ಲಿ ಹೋಗಿದ್ದಾರೆ, ಹೇಗಿದ್ದಾರೆ ಅನ್ನೋ ಮಾಹಿತಿ ಯಾರಿಗೂ ಇಲ್ಲ. ಹೀಗಾಗಿ ಕುಟುಂಬಸ್ಥರ ಜೊತೆ ಇಡೀ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಅದರಲ್ಲೂ ಕೂಡ ಎಲ್ಲರೂ 15, 16 ವರ್ಷದೊಳಗಿನವರೇ ಆಗಿರೋದ್ರಿಂದ ಭಯ ಮತ್ತಷ್ಟು ಹೆಚ್ಚಾಗಿದೆ.

ತುಮಕೂರು(Tumkur) ಜಿಲ್ಲೆಯ ಶಿರಾ(Sira) ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದಲ್ಲಿ ನಡೆದಿದೆ(Children Missing). ಒಂದೇ ಗ್ರಾಮದ ನಾಲ್ವರು ಮಕ್ಕಳು ಕಣ್ಮರೆಯಾಗಿದ್ದು ಗ್ರಾಮದಲ್ಲೀಗ ಆತಂಕ ಆವರಿಸಿದೆ. ಮಂಜುಳಾ, ಮಧು ಕುಮಾರ್, ಮಹಾಲಕ್ಷ್ಮಿ ಹಾಗೂ ಭಾನು ಕಣ್ಮರೆಯಾದ ಮಕ್ಕಳು. ಶನಿವಾರ ಮಧ್ಯಾಹ್ನ ಆಟ ಆಡಲೆಂದು ಮನೆಯಿಂದ ಹೋದವರು ವಾಪಸ್ ಮನೆಗೆ ಬಂದಿಲ್ಲ. ಎಷ್ಟು ಹೊತ್ತಾದರೂ ಮಕ್ಕಳು ಮನೆಗೆ ಬಂದಿಲ್ಲ ಎಂದು ಗಾಬರಿಗೊಂಡ ಪೋಷಕರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದ್ರೆ ಏನು ಪ್ರಯೋಜನವಾಗಿಲ್ಲ. ಊರೆಲ್ಲಾ ಹುಡುಕಿದರೂ ಮಕ್ಕಳು ಸಿಗದ ಕಾರಣ ಪೋಷಕರು ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಇಲ್ಲಿ ಅಚ್ಚರಿ ಎಂದರೆ ನಾಪತ್ತೆಯಾಗಿರುವ ಎಲ್ಲರೂ 15-16 ವರ್ಷದ ವಯಸ್ಸಿನವರಾಗಿದ್ದಾರೆ. ಒಂದೇ ಗ್ರಾಮದ, ಒಂದೇ ವಯಸ್ಸಿನ ಅಂತರವಿರುವ 4 ಮಕ್ಕಳು ನಾಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ.

ಇದನ್ನೂ ಓದಿ :  ರಾಜ್ಯದಲ್ಲಿ ವರುಣನ ರೌದ್ರಾವತಾರ – ಆರು ಮಂದಿ ಸಾವು, ಹಲವೆಡೆ ಹಾನಿ

ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಇಳಿದಿದ್ದಾರೆ. ನಾಪತ್ತೆಯಾದವರಲ್ಲಿ ಮಂಜುಳಾ-ಮಧು ಕುಮಾರ್ ಟ್ವಿನ್ಸ್ ಮಕ್ಕಳು. ಮಕ್ಕಳು ಊರಿನಿಂದ ಸೀದಾ ಬೆಂಗಳೂರಿಗೆ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಬೆಂಗಳೂರಿಗೆ ಯಾಕೆ ಹೋದರೂ ಯಾರು ಇವರನ್ನು ಕರೆಸಿಕೊಂಡರೆಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಶೋಧ ನಡೆಸುತ್ತಿದ್ದು, ಮಕ್ಕಳು ಸಿಕ್ಕ ಬಳಿಕವಷ್ಟೇ ಸತ್ಯ ಹೊರಬರಲಿದೆ.  ಮತ್ತೊಂದೆಡೆ ಶಿರಾ ಶಾಸಕ ಟಿ. ಬಿ ಜಯಚಂದ್ರ ಘಟನೆ ಸಂಬಂಧ ಪ್ರತಿಕ್ರಿಯಿಸಿದ್ದಾರೆ. ತಮ್ಮ ಫೇಸ್​ಬುಕ್ ಖಾತೆಯಲ್ಲಿ ಮಕ್ಕಳ ಚಿತ್ರಗಳನ್ನು ಫೋಸ್ಟ್ ಮಾಡಿ, ಘಟನೆ ಸಂಬಂಧ ನಾನು  ಪೊಲೀಸ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಾರ್ವಜನಿಕರ ಸಹಕಾರ ಕೂಡ ನಿರೀಕ್ಷಿತ ಎಂದು ಮನವಿ ಮಾಡಿದ್ದಾರೆ.

suddiyaana