ಕಾಂಗ್ರೆಸ್ ಜಾತಿ ಮೇಲೆ ಅಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತದೆ – ಡಿಕೆ ಶಿವಕುಮಾರ್

ಕಾಂಗ್ರೆಸ್ ಜಾತಿ ಮೇಲೆ ಅಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತದೆ – ಡಿಕೆ ಶಿವಕುಮಾರ್

ಮುಂದಿನ ತಿಂಗಳು ಕಾಂಗ್ರೆಸ್‌ನ ನೂರು ಕಚೇರಿಗಳಿಗೆ ಶಂಕುಸ್ಥಾಪನೆ ಮಾಡಲು ನಿರ್ದೇಶನ ನೀಡುತ್ತಿದ್ದೇನೆ. ಎಐಸಿಸಿ ದಿನಾಂಕ ಕೊಡಲಿ, ಬಿಡಲಿ ನಾನಂತೂ ಎಲ್ಲ ಸಿದ್ಧತೆ ಮಾಡಿಕೊಂಡು ಪ್ರಾರಂಭ ಮಾಡುತ್ತೇನೆʼʼ ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ.   ಮಾರ್ಚ್ 10ಕ್ಕೆ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಆರು ವರ್ಷ ಪೂರ್ಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸುತ್ತಿದ್ದೇನೆʼ ಎಂದು ತಿಳಿಸಿದರು.

ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಸಲ್ಮಾನರನ್ನು ಕರೆದಿಲ್ಲ ಎಂಬ ಆರೋಪದ ಬಗ್ಗೆ ಕೇಳಿದಾಗ, ‘ʼಕಾಂಗ್ರೆಸ್ ಜಾತಿ ಮೇಲೆ ಅಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತದೆ. ನಮಗೆ ಎಲ್ಲ ಜಾತಿ, ಧರ್ಮದವರು ಬೇಕು. ನಾವು ಜಾತಿ ಹಾಗೂ ಧರ್ಮದ ಮೇಲೆ ರಾಜಕಾರಣ ಮಾಡುವುದಿಲ್ಲ. ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಇದು ನಮ್ಮ ಪಕ್ಷದ ಸಿದ್ಧಾಂತ. ಯಾರೋ ಅಸೂಯೆ ಇರುವವರು ಈ ರೀತಿ ಮಾಡುತ್ತಾರೆ ಎಂದ್ರು.

ಇದನ್ನೂ ಓದಿ: ಹಾಸ್ಟೆಲ್‌ಗಳಲ್ಲಿ ಚಿಕನ್ ಲಿವರ್ ಪೀಸ್ ಕೊಟ್ಟಿಲ್ಲ ಎಂದು ವಾರ್ಡನ್‌ ವಿರುದ್ಧ ಕೇಸ್‌ ಕೊಟ್ಟ ವಿದ್ಯಾರ್ಥಿಗಳು!

ಮುಂದಿನ ಐದು ವರ್ಷಗಳಿಗೆ ಸಿದ್ದರಾಮಯ್ಯ ಅವರೇ ಸಿಎಂ ಎಂದು ಹೈಕಮಾಂಡ್ ಹಸಿರು ನಿಶಾನೆ ತೋರಿದ್ದು, ಯಾವುದೇ ಊಹಾಪೋಹ ಇಲ್ಲ ಎಂಬ ಯತೀಂದ್ರ ಹೇಳಿಕೆ ಬಗ್ಗೆ ಕೇಳಿದಾಗ, ‘ʼಅವರೇ ನಮ್ಮ ಹೈ ಕಮಾಂಡ್. ಅವರು ಏನು ಹೇಳುತ್ತಾರೋ ಅದನ್ನು ಗೌರವದಿಂದ ಸ್ವೀಕಾರ ಮಾಡುತ್ತೇನೆ. ಅವರೇ ಹೈಕಮಾಂಡ್ ಎಂಬಂತೆ ಹೇಳಿಕೆ ನೀಡಿರುವಾಗ ಅವರನ್ನೇ ಹೈಕಮಾಂಡ್ ಎಂದು ಸ್ವೀಕಾರ ಮಾಡೋಣʼ’ ಎಂದು ತಿಳಿಸಿದರು.‌

ಶಾಸಕ ಬಸವರಾಜು ಅಧಿಕಾರ ಒಪ್ಪಂದದ ಬಗ್ಗೆ ಸ್ಪಷ್ಟನೆ ಬೇಕು ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ‘ಬಸವರಾಜು, ಯತೀಂದ್ರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಏನೇ ಪ್ರತಿಕ್ರಿಯೆ ನೀಡುವುದಿದ್ದರೂ ದೆಹಲಿಯವರು ಪ್ರತಿಕ್ರಿಯೆ ನೀಡಬೇಕು’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

Kishor KV