RR ತಂಡದ ಮಾಜಿ ಪ್ಲೇಯರ್ RCB ಹೊಸ ಚೇರ್ಮನ್ – ಹೆಸರು ಬದಲಾಗುವುದು ಗ್ಯಾರಂಟಿನಾ?

ಈ ಬಾರಿಯ ಐಪಿಎಲ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಇದರ ಮದ್ಯೆ ಆರ್‌ಸಿಬಿ ಮಾರಾಟ ಅಧಿಕೃತವಾಗಿದೆ. ಮ್ಯಾನೇಜ್‌ಮೆಂಟ್ ಕೂಡ ಬದಲಾಗಲಿದೆ. ಇದರ ನಡುವೆ ಆರ್‌ಸಿಬಿ ಹೆಸರು ಬದಲಾಗುತ್ತಾ?, ಆರ್‌ಸಿಬಿ ಹೊರ ಚೇರ್ಮನ್ ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ.
ಇದನ್ನೂ ಓದಿ:16,600 ಕೋಟಿ ರೂಗೆ RCB ಸೇಲ್! – ಹೊಸ ಮಾಲೀಕರು ಯಾರು ಗೊತ್ತಾ?
ಐಪಿಎಲ್ ಇತಿಹಾಸದ ಅತಿ ದೊಡ್ಡ ಡೀಲ್ ಮೂಲಕ RCB ತಂಡವನ್ನು ಭಾರತದ ಬಿರ್ಲಾ ಗ್ರೂಪ್ ಒಕ್ಕೂಟ ಸ್ವಾದೀನಪಡಿಸಿಕೊಂಡಿದೆ. ಆರ್‌ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟ 1.8 ಬಿಲಿಯನ್ ಡಾಲರ್ ಅಂದರೆ, ಸುಮಾರು 16,724 ಕೋಟಿ ರೂಪಾಯಿಗೆ ಖರೀದಿಸಿದೆ. ಈ ಒಕ್ಕೂಟದಲ್ಲಿ ಅಮೆರಿಕದ ಸ್ಪೋರ್ಟ್ಸ್ ಇನ್ವೆಸ್ಟರ್ ಡೇವಿಡ್ ಬ್ಲಿಟ್ಜರ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಬ್ಲ್ಯಾಕ್‌ಸ್ಟೋನ್ ಕಂಪನಿಗಳು ಸೇರಿವೆ. ಈ ಡೀಲ್ ಅಧಿಕೃತವಾಗಿ ಪೂರ್ಣಗೊಂಡಿದೆ. ಇದರ ಜೊತೆಗೆ ಆರ್‌ಸಿಬಿ ಹೆಸರು ಬದಲಾಗುತ್ತದೆ ಎಂಬ ಮಾಹಿತಿಯೂ ಹೊರಬಿದ್ದಿದೆ.
ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಅವರೊಂದಿಗೆ ಓಪನಿಂಗ್ ಬ್ಯಾಟ್ಸ್‌ಮನ್ ಮತ್ತು ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡಕ್ಕೆ ಆಡಿದ್ದ ಆರ್ಯಮಾನ್ ಬಿರ್ಲಾ ಅವರು ಆರ್‌ಸಿಬಿ ತಂಡದ ಹೊಸ ಅಧ್ಯಕ್ಷರಾಗಲಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ. ಆರ್ಯಮಾನ್ ಬಿರ್ಲಾ ಅವರು ಅದಿತ್ಯ ಬಿರ್ಲಾ ಗ್ರೂಪ್‌ನ ಚೇರ್‌ಮನ್ ಕುಮಾರ್ ಮಂಗಲಂ ಬಿರ್ಲಾ ಅವರ ಮಗ. ಅವರಿಗೆ ಅನನ್ಯ ಮತ್ತು ಅದ್ವೈತೇಶ ಎಂಬ ಇಬ್ಬರು ಸಹೋದರಿಯರು ಇದ್ದಾರೆ. ಈಗ 28 ವರ್ಷದ ಆರ್ಯಮಾನ್ ಅವರು ಅದಿತ್ಯ ಬಿರ್ಲಾ ಮ್ಯಾನೇಜ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ನ ಡೈರೆಕ್ಟರ್ ಆಗಿದ್ದಾರೆ. ಆರ್ಯಮಾನ್ ಈ ಹಿಂದೆ ಕ್ರಿಕೆಟ್ ಆಟಗಾರರಾಗಿ ಮಧ್ಯಪ್ರದೇಶ ರಾಜ್ಯ ತಂಡಕ್ಕೆ ಆಡಿದ್ದರು. ರೆಡ್ ಬಾಲ್ ಮತ್ತು ವೈಟ್ ಬಾಲ್ ಎರಡೂ ಫಾರ್ಮ್ಯಾಟ್‌ಗಳಲ್ಲಿ ಆಡಿದ್ದಾರೆ. ಆರ್ಯಮಾನ್ 9 ಫಸ್ಟ್ ಕ್ಲಾಸ್ ಪಂದ್ಯಗಳಲ್ಲಿ 414 ರನ್‌ಗಳು ಗಳಿಸಿದ್ದಾರೆ (ಸರಾಸರಿ 27.60). ಇದರಲ್ಲಿ ಒಂದು ಶತಕ ಸಹ ಇದೆ. 4 ಲಿಸ್ಟ್-ಎ ಪಂದ್ಯಗಳಲ್ಲಿ 36 ರನ್‌ಗಳು ಗಳಿಸಿದ್ದಾರೆ. ಆಸಕ್ತಿದಾಯಕ ವಿಷಯವೆಂದರೆ, ಆರ್‌ಸಿಬಿ ತಂಡದ ಪ್ರಸ್ತುತ ಕ್ಯಾಪ್ಟನ್ ರಜತ್ ಪಾಟೀದಾರ್ ಅವರೇ ಆರ್ಯಮಾನ್ ಬಿರ್ಲಾ ಅವರ ಓಪನಿಂಗ್ ಪಾರ್ಟ್ನರ್ ಆಗಿದ್ದರು. ಆರ್ಯಮಾನ್ ಅವರ ಫಸ್ಟ್ ಕ್ಲಾಸ್ ಮತ್ತು ಲಿಸ್ಟ್-ಎ ಡೆಬ್ಯೂ ಪಂದ್ಯಗಳಲ್ಲಿ ರಜತ್ ಅವರೊಂದಿಗೆ ಓಪನಿಂಗ್ ಬ್ಯಾಟಿಂಗ್ ಮಾಡಿದ್ದರು. 2018ರ ಐಪಿಎಲ್ ಮೆಗಾ ಆಕ್ಷನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಆರ್ಯಮಾನ್ ಅವರನ್ನು 30 ಲಕ್ಷ ರೂಪಾಯಿಗೆ ಖರೀದಿಸಿತ್ತು. ಕಿಂಗ್ಸ್ ಇಲೆವನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ಕೂಡ ಬಿಡ್ ಹಾಕಿತ್ತು. ಆದರೆ ಆರ್ಯಮಾನ್ ಅವರು ಐಪಿಎಲ್‌ನಲ್ಲಿ ಒಂದು ಪಂದ್ಯವನ್ನೂ ಆಡಲಾಗಲಿಲ್ಲ. ಪ್ಲೇಯಿಂಗ್ ಇಲೆವನ್‌ನಲ್ಲೂ ಅವಕಾಶ ಸಿಕ್ಕಿರಲಿಲ್ಲ. 2020 ಸೀಸನ್‌ಗೆ ಮುಂಚೆ ಆರ್‌ಆರ್ ತಂಡವು ಅವರನ್ನು ಬಿಡುಗಡೆ ಮಾಡಿತು. ಇದರ ನಂತರ ಡಿಸೆಂಬರ್ 2019ರಲ್ಲಿ ಆರ್ಯಮಾನ್ ಅವರು ಕ್ರಿಕೆಟ್‌ನಿಂದ ಅನಿರ್ದಿಷ್ಟ ಕಾಲದ ಬ್ರೇಕ್ ತೆಗೆದುಕೊಂಡಿದ್ದರು. “ ಇದು ಕಷ್ಟಕರ ಪಯಣವಾಗಿತ್ತು. ಶ್ರಮ, ತಾಳ್ಮೆ, ಸಮರ್ಪಣೆ ಮತ್ತು ಧೈರ್ಯದಿಂದ ಇಲ್ಲಿಯವರೆಗೆ ಬಂದಿದ್ದೇನೆ. ಆದರೆ ಕ್ರಿಕೆಟ್‌ಗೆ ಸಂಬಂಧಿಸಿದಂತೆ ನನಗೆ ತೀವ್ರ ಆತಂಕ (ಆಂಕ್ಸೈಟಿ) ಉಂಟಾಗುತ್ತಿದೆ. ನಾನು ಎಲ್ಲೋ ಸಿಕ್ಕಿಹಾಕಿಕೊಂಡಿದ್ದೇನೆ ಎನಿಸುತ್ತದೆ. ಎಲ್ಲಾ ತೊಂದರೆಗಳನ್ನು ಎದುರಿಸಿದ್ದೇನೆ. ಈಗ ನನ್ನ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಮುಂದಿಟ್ಟುಕೊಳ್ಳಬೇಕು ಎಂದು ತೀರ್ಮಾನಿಸಿದ್ದೇನೆ. ಈ ಸುಂದರ ಆಟ ನನ್ನ ಜೀವನದ ಭಾಗ. ಸರಿಯಾದ ಸಮಯ ಬಂದಾಗ ಮತ್ತೆ ಮೈದಾನಕ್ಕೆ ಬರುವ ಆಸೆಯಿದೆ ” ಎಂದು ಹೇಳಿದ್ದರು.

ನೋಡಿರಿ

