ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅರೆಸ್ಟ್ – ಪಾಕಿಸ್ತಾನದಲ್ಲಿ ಭುಗಿಲೆದ್ದ ಭಯಾನಕ ಹಿಂಸಾಚಾರ
ಪಾಕಿಸ್ತಾನ ರಾಜಕೀಯದಲ್ಲಿ ಅಕ್ಷರಶ: ಅಲ್ಲೋಲಕಲ್ಲೋಲವಾಗ್ತಿದೆ. ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನಾಟಕೀಯ ರೀತಿಯಲ್ಲಿ ಅರೆಸ್ಟ್ ಆಗಿದ್ದಾರೆ. ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ವಿಚಾರಣೆ ಎದುರಿಸಲು ಇಮ್ರಾನ್ ಇಸ್ಲಮಾಬಾದ್ಗೆ ಹೈಕೋರ್ಟ್ಗೆ ಹಾಜರಾಗಿದ್ರು. ಈ ವೇಳೆ ಪಾಕಿಸ್ತಾನಿ ಸೇನೆಯ ರೇಂಜರ್ಗಳು ಮತ್ತು ಪ್ಯಾರಾಮಿಲಿಟರಿ ಫೋರ್ಸ್ ಸಿಬ್ಬಂದಿ ಶಸ್ತ್ರಾಸ್ತ್ರ ಸಮೇತ ಕೋರ್ಟ್ ಆವರಣಕ್ಕೆ ನುಗ್ಗಿ ಇಮ್ರಾನ್ ಖಾನ್ರನ್ನ ಸುತ್ತವರಿದು, ಅವರನ್ನ ಹಿಡಿದು ಎಳೆದುಕೊಂಡೇ ಹೋಗಿದ್ದಾರೆ. ಕೇವಲ ಕರೆದೊಯ್ದಿರೋದಲ್ಲ, ಕುತ್ತಿಗೆ ಎಳೆದುಕೊಂಡೇ ಹೋಗಿ ಬಳಿಕ ಸೇನಾ ವಾಹನದೊಳಕ್ಕೆ ತಳ್ಳಿದ್ದಾರೆ. ಈ ವೇಳೆ ಇಮ್ರಾನ್ ಖಾನ್ ದೇಹಕ್ಕೆ ಒಂದಷ್ಟು ಗಾಯಗಳು ಕೂಡ ಆಗಿವೆ. ಇಮ್ರಾನ್ರನ್ನ ವಾಹನಕ್ಕೆ ತುಂಬಿದ ಬಳಿಕ ಸೇನಾ ಸಿಬ್ಬಂದಿ ಅದೇ ವಾಹನದ ಮೇಲೆಯೇ ಹತ್ತಿ ಹೋಗಿದ್ದಾರೆ.
ಇದನ್ನೂ ಓದಿ: ಪಾಕ್ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ 199 ಭಾರತೀಯ ಮೀನುಗಾರರು
ಮೇ 1ರಂದು ಪಾಕ್ ಮಾಜಿ ಪ್ರಧಾನಿ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಲಾಗಿತ್ತು. ಹೀಗಾಗಿ ಇಮ್ರಾನ್ ಕೂಡ ಬಂಧನಕ್ಕೆ ಸಜ್ಜಾಗಿದ್ರು. ಆದ್ರೆ, ಒಬ್ಬ ಮಾಜಿ ಪ್ರಧಾನಿಯನ್ನ ಅರೆಸ್ಟ್ ಮಾಡಿರುವ ರೀತಿ ಪಾಪಿ ರಾಷ್ಟ್ರದ ರಿಯಾಲಿಟಿಯನ್ನ ಬಿಚ್ಚಿಡುತ್ತೆ. ಈ ನಡುವೆ ಇಮ್ರಾನ್ ಖಾನ್ ಮೇಲೆ ಹಲ್ಲೆ ನಡೆಸಲಾಗಿದೆ. ರಾಡ್ನಿಂದ ಹೊಡೆದು ಚಿತ್ರ ಹಿಂಸೆ ನೀಡಿದ್ದಾರೆ ಅಂತಾ ಖಾನ್ ಪರ ವಕೀಲರು ಗಂಭೀರ ಆರೋಪ ಮಾಡಿದ್ದಾರೆ.
ಯಾವಾಗ ತೆಹ್ರಿಕ್-ಇ-ಇನ್ಸಾಫ್ ಪಕ್ಷದ ನಾಯಕ ಇಮ್ರಾನ್ ಖಾನ್ ಅರೆಸ್ಟ್ ಆದ್ರೋ ಇಡೀ ಪಾಕಿಸ್ತಾನವೇ ಹೊತ್ತಿ ಉರಿಯುತ್ತಿದೆ. ರಾಜಧಾನಿ ಇಸ್ಲಮಾಬಾದ್ನಿಂದ ಹಿಡಿದು ದೇಶಾದ್ಯಂತ ಇಮ್ರಾನ್ ಬೆಂಬಲಿಗರು ರೊಚ್ಚಿಗೆದ್ದಿದ್ದು ಕಂಡ ಕಂಡಲ್ಲಿ ಬೆಂಕಿ ಹಚ್ಚುತ್ತಿದ್ದಾರೆ. ವಾಹನಗಳು, ಸರ್ಕಾರಿ ಕಚೇರಿಗಳಿಗೆ ಬೆಂಕಿಯಿಟ್ಟಿದ್ದು, ಪಾಕಿಸ್ತಾನದಲ್ಲಿ ಭಯಾನಕ ಹಿಂಸಾಚಾರ ಭುಗಿಲೆದ್ದಿದೆ. ಇನ್ನು ಇಮ್ರಾನ್ ಪಕ್ಷದ ನಾಯಕರೆಲ್ಲಾ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟಕ್ಕೆ ಮುಂದಾಗಬೇಕು ಅಂತಾ ಕರೆ ಕೊಟ್ಟಿದ್ದಾರೆ. ಹೀಗಾಗಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಇಮ್ರಾನ್ ಸಪೋರ್ಟರ್ಗಳು ಪಾಕಿಸ್ತಾನದಾದ್ಯಂತ ಒಟ್ಟಾಗುತ್ತಿದ್ದಾರೆ. ಇಡೀ ದೇಶವನ್ನೇ ಬಂದ್ ಮಾಡೋಕೆ ಬೆಂಬಲಿಗರು ಕರೆ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಾದ್ಯಂತ ಇಮ್ರಾನ್ ಪರ ಪೋಸ್ಟರ್ಗಳು, ಮೆಸೇಜ್ಗಳು ಹರಿದಾಡ್ತಿವೆ. ಹೋರಾಟ ತೀವ್ರಗೊಳಿಸಲು ಜನರು ಪ್ಲ್ಯಾನ್ ಮಾಡ್ತಿದ್ದಾರೆ. ಮುಂದಿನ ಗಂಟೆಗಳಲ್ಲಿ ಪಾಕಿಸ್ತಾನದಲ್ಲಿ ಏನು ಬೇಕಾದ್ರೂ ಆಗಬಹುದು ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ, ಇಮ್ರಾನ್ಗೆ ಪಾಕ್ನಾದ್ಯಂತ ಅಪಾರ ಬೆಂಬಲವಿದೆ. ಒಂದು ವೇಳೆ ಈ ಕ್ಷಣದಲ್ಲಿ ಚುನಾವಣೆಯಾದ್ರೆ ಇಮ್ರಾನ್ ಖಾನ್ ಭಾರಿ ಅಂತರದಲ್ಲಿ ಗೆಲ್ಲೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಅಷ್ಟೇ ಅಲ್ಲಜ್ಞ, ಇದೇ ವರ್ಷಾಂತ್ಯಕ್ಕೆ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈಗಾಗ್ಲೇ ಇಮ್ರಾನ್ ಭರದ ಪ್ರಚಾರ ಆರಂಭಿಸಿದ್ರು. ಹೀಗಾಗಿ ಇಮ್ರಾನ್ ಮತ್ತೊಮ್ಮೆ ಪ್ರಧಾನಿಯಾಗೋದನ್ನ ತಡೆಯೋಕೆ ಅಂತಾನೆ ಶೆಹಬಾಜ್ ಷರೀಫ್ ಸರ್ಕಾರ ಇಷ್ಟೆಲ್ಲಾ ಟಾರ್ಗೆಟ್ ಮಾಡ್ತಿದೆ ಅನ್ನೋದಕ್ಕೆ ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಇನ್ನು ನೆರೆದೇಶದಲ್ಲಿ ಬೆಂಕಿ ಹೊತ್ತಿಕೊಂಡಿರೋದ್ರಿಂದ ಭಾರತ ಅಲ್ಲಿನ ಎಲ್ಲಾ ಬೆಳವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸ್ತಿದೆ.