‘ಗುಬ್ಬಿ’ ‘ಕೈ’ಗೆ ಬ್ರಹ್ಮಾಸ್ತ್ರ – ಜೆಡಿಎಸ್ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಎಸ್.ಆರ್ ಶ್ರೀನಿವಾಸ್!

‘ಗುಬ್ಬಿ’ ‘ಕೈ’ಗೆ ಬ್ರಹ್ಮಾಸ್ತ್ರ – ಜೆಡಿಎಸ್ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಎಸ್.ಆರ್ ಶ್ರೀನಿವಾಸ್!

ತುಮಕೂರು ಜಿಲ್ಲೆ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಸ್.ಆರ್ ಶ್ರೀನಿವಾಸ್ ಜೆಡಿಎಸ್ ಪಕ್ಷ ತೊರೆದು ಇವತ್ತು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ವಿಪಕ್ಷನಾಯಕ ಸಿದ‍್ಧರಾಮಯ್ಯ ಸಮ್ಮುಖದಲ್ಲಿ ಎಸ್.ಆರ್ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಯಾದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಕ್ಷದ ಶಾಲು ಮತ್ತು ಬಾವುಟ ನೀಡುವ ಮೂಲಕ ಶ್ರೀನಿವಾಸ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿದರು. ಜೆಡಿಎಸ್‌ನಿಂದ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸತತವಾಗಿ ನಾಲ್ಕು ಬಾರಿ ಆಯ್ಕೆಯಾಗಿದ್ದ ಶ್ರೀನಿವಾಸ್, ಕೆಲವು ತಿಂಗಳುಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಸೋಮವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತಮ್ಮ ನೂರಾರು ಬೆಂಬಲಿಗರೊಂದಿಗೆ ಗುರುವಾರ ಕಾಂಗ್ರೆಸ್ ಗೆ ಸೇರ್ಪಡೆಯಾದರು.

ಇದನ್ನೂ ಓದಿ : ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಅನರ್ಹ – 6 ವರ್ಷ ಸ್ಪರ್ಧಿಸುವಂತಿಲ್ವಾ? ಮುಂದಿನ ಆಯ್ಕೆ ಏನು?

ಎಸ್ ಆರ್ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್, ‘ಶ್ರೀನಿವಾಸ್ ಅವರ ಸೇರ್ಪಡೆಯಿಂದ ತುಮಕೂರು ಮಾತ್ರವಲ್ಲ ಹಲವು ಜಿಲ್ಲೆಗಳಲ್ಲಿ ಪಕ್ಷಕ್ಕೆ ಬಲ ಬಂದಿದೆ. ಅವರೊಬ್ಬ ನಿಷ್ಠಾವಂತ ಜನಸೇವಕ. ಅವರು ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇರಿಸಿ ಬಂದಿದ್ದಾರೆ’ ಎಂದರು. ಹಾಗೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಾಗಿದ್ದ ಹಲವರು ಸೇರಿದಂತೆ ಆ ಪಕ್ಷದ 37 ಮಂದಿ ನಾಯಕರು ಕಾಂಗ್ರೆಸ್ ಸೇರಲು ಬಯಸಿದ್ದಾರೆ. ಎಲ್ಲರನ್ನೂ ಹಂತ ಹಂತವಾಗಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಆರಂಭದಲ್ಲಿ ಕಾಂಗ್ರೆಸ್‌ನಲ್ಲಿದ್ದ ಶ್ರೀನಿವಾಸ್ ಈಗ ಪಕ್ಷಕ್ಕೆ ಮರಳಿದ್ದಾರೆ. ಜೆಡಿಎಸ್ ಎಂದರೆ ಹೆಚ್.ಡಿ. ದೇವೇಗೌಡ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರ ಕುಟುಂಬದ ನಿರ್ಧಾರಗಳಿಗೆ ಸೀಮಿತವಾದ ಪಕ್ಷ. ಅವರ ನಿರ್ಧಾರಗಳನ್ನು ಮೀರಿದರೆ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಬಳಸಿದರೆ ಅಂತಹವರನ್ನು ಆ ಪಕ್ಷದಲ್ಲಿ ಮೂಲೆಗುಂಪು ಮಾಡುತ್ತಾರೆ. ಅವಮಾನ ಮಾಡಿ ಪಕ್ಷದಿಂದ ಹೊರಹಾಕುತ್ತಾರೆ. ನನಗೆ ಅದೇ ರೀತಿ ಮಾಡಿದ್ದರು. ಈಗ ಶ್ರೀನಿವಾಸ್ ಅವರಿಗೂ ಹಾಗೆಯೇ ಮಾಡಿದ್ದಾರೆ ಎಂದಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷದ ಪರವಾದ ಅಲೆ ಎದ್ದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಈ ಕಾರಣದಿಂದ ಜೆಡಿಎಸ್ ಮತ್ತು ಬಿಜೆಪಿಯ ಹಲವರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದರು.

ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ಎಸ್.ಆರ್. ಶ್ರೀನಿವಾಸ್, ಹೆಚ್.ಡಿ. ಕುಮಾರಸ್ವಾಮಿ ಅವರು ನನ್ನನ್ನು ಜೆಡಿಎಸ್ ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದರು. ನಾನು ಶಾಸಕನಾಗಿರುವಾಗಲೇ ಬೇರೆ ಅಭ್ಯರ್ಥಿಯನ್ನು ಘೋಷಿಸಿದ್ದರು. ಅವರಿಂದ ಆದ ಅವಮಾನಕ್ಕೆ ಬೇಸತ್ತು ಕಾಂಗ್ರೆಸ್ ಸೇರಿದ್ದೇನೆ. ನಾನು ಮೂಲತಃ ಕಾಂಗ್ರೆಸ್ ಸದಸ್ಯನೇ. ಕಾಂಗ್ರೆಸ್ ಪಕ್ಷದಿಂದ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ. ನಮ್ಮ ತಂದೆ ಕೂಡ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. 2002ರಲ್ಲಿ ನಾನು ಜೆಡಿಎಸ್ ಸೇರಿದ್ದೆ  2004ರಲ್ಲಿ ಟಿಕೆಟ್ ಕೊಡಲಿಲ್ಲ. ಆಗ ಗುಬ್ಬಿಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ನನಗೆ ನಾಟಕ ಗಿಮಿಕ್ ಮಾಡಲು ಬರಲ್ಲ ಎಂದು ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದರು. ಮೂಡಿಗೆರೆ ಪುರಸಭೆಯ ಮಾಜಿ ಅಧ್ಯಕ್ಷ ಹಾಲಪ್ಪ ಮತ್ತು ಮಂಡ್ಯದ ಮುಖಂಡ ಸತ್ಯಾನಂದ ಕೂಡ ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.

suddiyaana