ICU ಸೇರಿದ ವಿನೋದ್ ಕಾಂಬ್ಳಿ – ಅಹಂ.. ಹೆಂಡ.. ಹೆಣ್ಣು.. ನೆತ್ತಿಗೇರಿ ಬದುಕೇ ಹಾಳಾಗಿತಾ?
ವಿನೋದ್ ಕಾಂಬ್ಳಿ. ಟೀಂ ಇಂಡಿಯಾದ ಮಾಜಿ ಆಟಗಾರ. ಬಟ್ ಕಾಂಬ್ಳಿ ಆಟವನ್ನ ನೋಡಿದವ್ರಿಗಿಂತ ಅವ್ರ ಹೆಲ್ತ್ ಇಶ್ಯೂ ಸುದ್ದಿಯನ್ನ ಕೇಳಿದೋರೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸ್ರು ಜೊತೆ ಕಾಂಬ್ಳಿ ಹೆಸ್ರು ಕೂಡ ಥಳಕು ಹಾಕಿಕೊಳ್ತಾನೇ ಇರುತ್ತೆ. ಒಬ್ರದ್ದು ಪಾಸಿವಿಟ್ ಆದ್ರೆ ಇನ್ನೊಬ್ರದ್ದು ನೆಗೆಟಿವ್. ಇದೀಗ ಕಾಂಬ್ಳಿ ಮತ್ತೊಮ್ಮೆ ಆಸ್ಪತ್ರೆ ಸೇರಿದ್ದು ಕ್ರಿಟಿಕಲ್ ಕಂಡೀಷನ್ನಲ್ಲಿ ಇದ್ದಾರೆ.
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅನಾರೋಗ್ಯದ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಇದೀಗ ಮತ್ತೊಮ್ಮೆ ಹೆಲ್ತ್ ಸೀರಿಯಸ್ ಆಗಿದೆ. ಪಜ್ಞೆ ತಪ್ಪಿ ಬಿದ್ದಿದ್ದ ಕಾಂಬ್ಳಿಯವ್ರನ್ನ ಥಾಣೆ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಮಾಡ್ಲಾಗಿದೆ. ಡಾಕ್ಟರ್ಸ್ ಚೆಕಪ್ ವೇಳೆ ಕಾಂಬ್ಳಿಯವ್ರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರೋದು ಗೊತ್ತಾಗಿದೆ. ಸದ್ಯ ಕಾಂಬ್ಳಿಗೆ ಚಿಕಿತ್ಸೆ ನೀಡ್ತಿರುವ ಡಾ.ವಿವೇಕ್ ತ್ರಿವೇದಿ ಮಾತ್ನಾಡಿದ್ದಾರೆ. ತಲೆಯಲ್ಲಿ ಬ್ಲಡ್ ಕ್ಲಾಟ್ ಆಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತುಂಬಾ ಡ್ರಿಂಕ್ಸ್ ಮಾಡಿರೋದೇ ಇದಕ್ಕೆ ಕಾರಣ ಅಂತಾನೂ ಕ್ಲಾರಿಟಿ ಕೊಟ್ಟಿದ್ದಾರೆ. ನೋಡಿ ಸಿಚುತೇಷನ್ ಹೆಂಗಿದೆ ಅಂದ್ರೆ ಸಚಿನ್ ಮತ್ತು ಕಾಂಬ್ಳಿಗೆ ಒಬ್ರೇ ಕೋಚ್. ಒಟ್ಟೊಟ್ಟಿಗೆ ಕ್ರಿಕೆಟ್ ಅಂಗಳಕ್ಕೆ ಇಳಿದವ್ರು. ಬಟ್ ಸಚಿನ್ ಯಶಸ್ಸಿನ ತುತ್ತ ತುದಿಯಲ್ಲಿದ್ರೆ ಕಾಂಬ್ಳಿ ಬದುಕು ಬೀದಿಗೆ ಬಿದ್ದಿದೆ. ಬಟ್ ಇದು ಕಾಂಬ್ಳಿಯ ಸ್ವಯಂಕೃತ ಅಪರಾಧ.
ಇದನ್ನೂ ಓದಿ : ನಾಲ್ಕನೇ ಟೆಸ್ಟ್‌ಗೆ ಸ್ಥಾನ ಪಡೆದ ಉಡುಪಿಯ ತನುಷ್ ಕೋಟ್ಯಾನ್ – ಚಹಾಲ್ & ಪಟೇಲ್ ಗೆ ಯಾಕಿಲ್ಲ ಚಾನ್ಸ್?
ಬಾಂದ್ರಾ ನಿವಾಸದಲ್ಲಿದ್ದ ವೇಳೆ ಕಾಂಬ್ಳಿಯವ್ರಿಗೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೂಡ್ಲೇ ಆಂಬ್ಯುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಹಲವಾರು ವೈದ್ಯಕೀಯ ಟೆಸ್ಟ್ಗಳನ್ನು ಮಾಡಿದ್ದು, ಈ ವೇಳೆ ಮೆದುಳಿನಲ್ಲಿ ಬ್ಲಡ್ ಕ್ಲಾಟ್ ಆಗಿರೋದು ಹಾಗೇ ಮೂತ್ರದ ಸೋಂಕು ಮತ್ತು ಸೆಳೆತ ಕಂಡು ಬಂದಿದೆ. ಬಟ್ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದ್ದು, ಭಯ ಪಡುವ ಅವಶ್ಯಕತೆ ಇಲ್ಲ. ಚೇತರಿಸಿಕೊಳ್ಳುತ್ತಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಸಚಿನ್ ಮತ್ತು ಕಾಂಬ್ಳಿ ಬಾಲ್ಯ ಸ್ನೇಹಿತರು. ಇತ್ತೀಚೆಗೆ ಬಾಲ್ಯದ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಸ್ಮರಣಾರ್ಥ ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಸಚಿನ್ ತೆಂಡೂಲ್ಕರ್ ಮುಖ್ಯ ಅತಿಥಿಯಾಗಿ ಬಂದಿದ್ರು. ಹಾಗೇ ವಿನೋದ್ ಕಾಂಬ್ಳಿ ಅವರನ್ನೂ ಆಹ್ವಾನಿಸಲಾಗಿತ್ತು. ಈ ವೇಳೆ ಕಾಂಬ್ಳಿ ತುಂಬಾ ವೀಕ್ನೆಸ್ನಂತೆ ಕಾಣ್ತಿದ್ರು. ಬಾಲ್ಯದ ಗೆಳೆಯ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾದ ನಂತರ ಕಾಂಬ್ಳಿ ಭಾವುಕರಾಗಿದ್ದರು. ಯಾಕಂದ್ರೆ ಇಬ್ಬರೂ ದಿಗ್ಗಜರು ಅಚ್ರೇಕರ್ ಅವರ ತರಬೇತಿಯಲ್ಲಿ ಹಲವು ವರ್ಷಗಳ ಕಾಲ ಒಟ್ಟಿಗೆ ಆಡಿದ್ದರು. ಆ ದಿನ ಸಚಿನ್ ಮುಂದೆ ನಿಂತು ಮಾತಾಡೋಕೂ ಕಾಂಬ್ಳಿಗೆ ಶಕ್ತಿ ಇರಲಿಲ್ಲ. ಈ ಪ್ರೋಗ್ರಾಂ ಆದ ಬಳಿಕ ಇಬ್ಬರ ಭೇಟಿ ವಿಡಿಯೋ ಸಾಕಷ್ಟು ವೈರಲ್ ಆಗಿದ್ವು.
ಅಸಲಿಗೆ ವಿನೋದ್ ಕಾಂಬ್ಳಿ ಮತ್ತು ಸಚಿನ್ ತೆಂಡೂಲ್ಕರ್ ಶಾಲಾ ದಿನಗಳಿಂದಲೇ ಗೆಳೆಯರು. ಒಟ್ಟಿಗೇ ಕ್ರಿಕೆಟ್ ಆಡುತ್ತಾ ಬೆಳೆದವರು. ಕೋಚ್ ರಮಾಕಾಂತ್ ಅಜ್ರೇಕರ್ ಗರಡಿಯಲ್ಲಿ ಪಳಗಿ ಹತ್ತು ಹಲವು ದಾಖಲೆಗಳನ್ನು ಜೊತೆಯಾಗಿಯೇ ಬರೆದವರು. ಇವರಿಬ್ರ ರೈಟ್ ಹ್ಯಾಂಡ್ – ಲೆಫ್ಟ್ ಹ್ಯಾಂಡ್ ಕಾಂಬಿನೇಶನ್ ಬೌಲರ್ ಗಳಿಗೂ ತಲೆನೋವಾಗಿತ್ತು. ಆಗ ಇವ್ರಿಬ್ಬರಲ್ಲಿ ಯಾರು ಬೆಸ್ಟ್ ಅನ್ನೋದನ್ನ ಕಂಪೇರ್ ಮಾಡೋಕೋ ಆಗ್ತಿರಲಿಲ್ಲ. ಬಟ್ ಈಗ ಪರಿಸ್ಥಿತಿ ಹಾಗಿಲ್ಲ. 1995ಕ್ಕೂ ಮುನ್ನ ಭಾರತದ ಮ್ಯಾಚ್ ವಿನ್ನರ್ ಆಗಿ ಕಾಣ್ತಿದ್ದ ಕಾಂಬ್ಳಿ ಆ ಬಳಿಕ ತಮ್ಮ ಲೈಫನ್ನ ತಾವೇ ಹಾಳು ಮಾಡಿಕೊಳ್ತಾ ಬಂದ್ರು. ನಿಜ ಹೇಳ್ಬೇಕಂದ್ರೆ ಆರಂಭದ ದಿನಗಳಲ್ಲಿ ಸಚಿನ್ಗಿಂತ ಕಾಂಬ್ಳಿಯೇ ಬೆಸ್ಟ್ ಆಗಿ ಕಾಣ್ತಿದ್ರು. ಬಟ್ ಸಿಕ್ಕ ಅವಕಾಶಗಳನ್ನ ಕೈಬಾಚಿ ತಬ್ಬಿಕೊಂಡ ಸಚಿನ್ ತಪಸ್ಸಿನಂತೆ ಸಾಧಿಸಿ ಬೆಳೆಯುತ್ತಾ ಹೋದ್ರು. ಬಟ್ ಕಾಂಬ್ಳಿ ಮಾತ್ರ ಸಕ್ಸಸ್ ಬೆನ್ನಲ್ಲೇ ಇದ್ದಬದ್ದ ಚಟಗಳಿಗೆ ಬಲಿಯಾಗಿ ಕ್ರಿಕೆಟ್ ಆಡುವುದನ್ನೇ ಮರೆತ್ರು.
ಭಾರತ ತಂಡದ ಪರ ವಿನೋದ್ ಕಾಂಬ್ಳಿ 1991ರಲ್ಲಿ ಪದಾರ್ಪಣೆ ಮಾಡಿದ್ರು. ಭಾರತದ ಪರ 17 ಟೆಸ್ಟ್ ಪಂದ್ಯಗಳಲ್ಲಿ 1084 ರನ್ ಸಿಡಿಸಿರುವ ಕಾಂಬ್ಳಿ 4 ಶತಕ, 3 ಅರ್ಧ ಶತಕಗಳನ್ನೂ ಬಾರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 104 ಪಂದ್ಯಗಳನ್ನು ಆಡಿದ್ದು, 2477 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 14 ಅರ್ಧಶತಗಳು ಸೇರಿವೆ. 2000ರಲ್ಲಿ ಕಳಪೆ ಪ್ರದರ್ಶನದ ಆಧಾರದ ಮೇಲೆ ಅವರನ್ನು ತಂಡದಿಂದ ಕೈ ಬಿಡಲಾಗತ್ತು. 2000ನೇ ಇಸವಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೊನೆ ಬಾರಿಗೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 1000 ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಹೊಂದಿದ್ದಾರೆ.