2030ರ ವೇಳೆಗೆ ಸಾವು ಗೆಲ್ಲುವ ತಂತ್ರಜ್ಞಾನ ಯಶಸ್ವಿಯಾಗುತ್ತಾ – ಭವಿಷ್ಯವಾಣಿ ನಿಜವಾಗುತ್ತಾ?

2030ರ ವೇಳೆಗೆ ಸಾವು ಗೆಲ್ಲುವ ತಂತ್ರಜ್ಞಾನ ಯಶಸ್ವಿಯಾಗುತ್ತಾ – ಭವಿಷ್ಯವಾಣಿ ನಿಜವಾಗುತ್ತಾ?

ಮಾನವರನ್ನ ಚಿರಂಜೀವಿಯನ್ನಾಗಿಸುವ ವಿಜ್ಞಾನಿಗಳ ಪ್ರಯತ್ನ ಬಹಳ ಹಿಂದಿನಿಂದಲೂ ನಡೆಯುತ್ತಲೇ ಇತ್ತು. ತಂತ್ರಜ್ಞಾನವೂ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದಂತೆ ಮನುಷ್ಯರನ್ನ ಸಾವಿನಿಂದ ಗೆಲ್ಲಿಸುವ ಪರಿಕಲ್ಪನೆಯೂ ವಿಜ್ಞಾನಿಗಳ ತಲೆಯಲ್ಲಿ ಓಡಾಡೋದು ಆಶ್ಚರ್ಯಕರವೇನೂ ಅಲ್ಲ. ಆದರೆ ಮನುಷ್ಯನನ್ನ ಸಾವಿನಿಂದ ಗೆಲ್ಲಿಸುವ ಪರಿಕಲ್ಪನೆಯನ್ನ ಸಾಧಿಸುವ ಸಮಯ ಹತ್ತಿರದಲ್ಲಿಯೇ ಇದೆ ಎಂದು ತಿಳಿದರೆ ಆಶ್ಚರ್ಯವಾಗೋದಂತೂ ಸತ್ಯ. ಯಾಕಂದರೆ ಗೂಗಲ್ ಮಾಜಿ ಉದ್ಯೋಗಿಯೊಬ್ಬರ ಈ ಕುರಿತಾದ ಭವಿಷ್ಯವಾಣಿ ಇಂಟರ್ ನೆಟ್ ನಲ್ಲಿ ಸುದ್ದಿಯಾಗುತ್ತಿದೆ.

ಹೌದು, 147 ಭವಿಷ್ಯವಾಣಿಗಳಲ್ಲಿ 85 ಪ್ರತಿಶತದಷ್ಟು ಸರಿ ಎಂದು ಸಾಬೀತಾಗಿರುವ 75 ವರ್ಷದ ಗೂಗಲ್ ಮಾಜಿ ಇಂಜಿನಿಯರ್ ರೇ ಕುರ್ಜ್ವೀಲ್( Ray Kurzweil )ಪ್ರಕಾರ ಮುಂದಿನ 7 ವರ್ಷಗಳಲ್ಲಿ ಅಂದರೆ 2030 ರ ಒಳಗೆ ಮಾನವ ಅಮರತ್ವವನ್ನ ಪಡೆಯಲಿದ್ದಾನಂತೆ. ಅಂದ ಹಾಗೆ ಮಾನವನು ಚಿರಂಜೀವಿಯಾಗಲು ನಾನೋ ರೋಬೋಟ್ ಗಳು ಸಹಾಯ ಮಾಡುತ್ತವೆ ಜೊತೆಗೆ 2045ರ ವೇಳೆಗೆ ಮಾನವ ಮತ್ತು ಯಂತ್ರಗಳ ಬುದ್ಧಿಮತ್ತೆ ವಿಲೀನದೊಂದಿಗೆ ಏಕತ್ವ ಅಂದರೆ ಸಿಂಗ್ಯುಲಾರಿಟಿ ರಚನೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ : ಸಾವನ್ನಪ್ಪಿದವರಿಗೆ ಮರುಜೀವ ನೀಡಲು ದೇಹಗಳ ಸಂರಕ್ಷಣೆ – ವಿಜ್ಞಾನಲೋಕದಲ್ಲಿ ನಡೆಯುತ್ತಾ ವಿಸ್ಮಯ..!?

2005ರಲ್ಲಿ ರೇ ಬರೆದಿದ್ದ ‘ದ ಸಿಂಗ್ಯುಲಾರಿಟಿ ಈಸ್‌ ನಿಯರ್‌’ ಪುಸ್ತಕದಲ್ಲಿ 2030ರ ವೇಳೆಗೆ ಮಾನವ ಅಮರತ್ವ ಪಡೆದುಕೊಳ್ಳಲಿದ್ದಾನೆ ಎಂದು ಹೇಳುತ್ತಾರೆ. ರೇ ಪ್ರಕಾರ ರೋಬೋಟಿಕ್ಸ್‌ ಮತ್ತು ನ್ಯಾನೋ ಟೆಕ್ನಾಲಜಿ ಕ್ಷೇತ್ರದಲ್ಲಿ ಆಗುತ್ತಿರುವ ಅತ್ಯಾಧುನಿಕ ಸಂಶೋಧನೆಗಳು ಮಾನವನ ಅಮರತ್ವಕ್ಕೆ ಕಾರಣವಾಗಲಿದೆ. ಅಂದರೆ ನ್ಯಾನೋ ರೋಬೋಟ್ಸ್ ಹಾನಿಗೊಳಗಾದ ಜೀವಕೋಶಗಳು ಮತ್ತು ಅಂಗಾಂಶಗಳನ್ನು ನಿರಂತರವಾಗಿ ಸರಿಪಡಿಸುತ್ತವೆ, ಇದು ನಮ್ಮನ್ನು ಮಾರಣಾಂತಿಕ ಕಾಯಿಲೆಗಳಿಂದ ರಕ್ಷಿಸುತ್ತದೆ  ಜೊತೆಗೆ ನ್ಯಾನೋ ಟೆಕ್ನಾಲಜಿಯು ನಮಗೆ ಅಗತ್ಯವಿರುವ ನಿಖರವಾದ ಪೋಷಕಾಂಶಗಳನ್ನು ನಮ್ಮ ವೈಯಕ್ತಿಕ ವೈರ್‌ಲೆಸ್ LAN ಮೂಲಕ ನಮಗೆ ಪೂರೈಸುತ್ತವೆ.

ಭವಿಷ್ಯದ ತಂತ್ರಜ್ಞಾನಗಳ ಕುರಿತಾಗಿ ರೇ ಈ ಹಿಂದೆ ನುಡಿದಿದ್ದ ಹಲವು ಭವಿಷ್ಯವಾಣಿಗಳು ಸರಿ ಎಂದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. 2010 ರ ವೇಳೆಗೆ, ಪ್ರಪಂಚದ ಹೆಚ್ಚಿನ ಭಾಗವು ಹೆಚ್ಚಿನ ಬ್ಯಾಂಡ್‌ವಿಡ್ತ್ ವೈರ್‌ಲೆಸ್ ಇಂಟರ್ನೆಟ್‌ಗೆ ಪ್ರವೇಶವನ್ನು ಹೊಂದುವ ಕುರಿತಾಗಿ ಮತ್ತು 1999 ರಲ್ಲಿ, $1000 ಮೌಲ್ಯದ ಲ್ಯಾಪ್‌ಟಾಪ್ ಮಾನವನ ಮೆದುಳಿಗಿಂತ ಹೆಚ್ಚು ಶೇಖರಣಾ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂಬುದಾಗಿ ನೀಡಿದ ಭವಿಷ್ಯವಾಣಿ, 2000ರ ವೇಳೆಗೆ ವಿಶ್ವದ ಪ್ರಸಿದ್ಧ ಚೆಸ್‌ ಆಟಗಾರರನ್ನು ಕಂಪ್ಯೂಟರ್‌ ಸೋಲಿಸಲಿದೆ ಎಂಬ ರೇ ಭವಿಷ್ಯಗಳು ನಿಜವಾಗಿವೆ. ರೇ ಅವರ ಹಿಂದಿನ ಹೇಳಿಕೆಗಳನ್ನು ಒಳಗೊಂಡ ವಿಡಿಯೋಗಳು ಇದೀಗ ಮತ್ತೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡ್ತಿವೆ.

suddiyaana