‘ಕಲ್ಲಲ್ಲಿ ಹೊಡೆದು ದ್ವೇಷ ತೀರಿಸಿಕೊಳ್ಳಬಾರದು’ – ಚೇತರಿಸಿಕೊಂಡ ನಂತರ ಡಾ.ಜಿ ಪರಮೇಶ್ವರ್ ನೋವಿನ ಮಾತು

‘ಕಲ್ಲಲ್ಲಿ ಹೊಡೆದು ದ್ವೇಷ ತೀರಿಸಿಕೊಳ್ಳಬಾರದು’ – ಚೇತರಿಸಿಕೊಂಡ ನಂತರ ಡಾ.ಜಿ ಪರಮೇಶ್ವರ್ ನೋವಿನ ಮಾತು

35 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಈ ರೀತಿ ದ್ವೇಷ ತೀರಿಸಿಕೊಳ್ಳಬಾರದು ಎಂದು ಡಾ. ಜಿ ಪರಮೇಶ್ವರ್ ತಮ್ಮ ನೋವನ್ನು ಹೊರಹಾಕಿದ್ದಾರೆ. ಏಪ್ರಿಲ್ 28ರಂದು ಚುನಾವಣಾ ಪ್ರಚಾರದ ವೇಳೆ ಪರಮೇಶ್ವರ್ ತಲೆಗೆ ಕಲ್ಲು ಎಸೆದ ಘಟನೆ ನಡೆದಿತ್ತು. ಈ ಬಗ್ಗೆ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಘಟನೆ ಬಗ್ಗೆ ಡಾ. ಜಿ ಪರಮೇಶ್ವರ್ ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ:  ಕಲ್ಲೇಟಿನಿಂದ ಚೇತರಿಸಿಕೊಂಡ ಪರಮೇಶ್ವರ್ – ‘ರಾಜಕಾರಣದಲ್ಲಿ ರಕ್ತಸಿಕ್ತ ಅಧ್ಯಾಯ’ ಎಂದು ಕೈ ನಾಯಕರ ಆಕ್ರೋಶ

‘ಶುಕ್ರವಾರ ನಾನು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಸಂಜೆ ಬೈರೆನಹಳ್ಳಿ ಕ್ರಾಸ್ ಬಳಿ ಬಂದಾಗ ಜೆಸಿಬಿಯಲ್ಲಿ ಹೂ ಹಾಕಲು ರೆಡಿಮಾಡಿದ್ದರು. ಈ ವೇಳೆ ನನ್ನನ್ನು ಮೇಲಕ್ಕೆ ಎತ್ತಬೇಡಿ ಅಂದರು ಕೂಡಾ ಕಾರ್ಯಕರ್ತರು ಎತ್ತಿಕೊಂಡರು. ಅಷ್ಟೊತ್ತಿಗಾಗಲೇ ತಲೆಗೆ ಏನೋ ಹೊಡೆದ ಹಾಗೆ ಆಯ್ತು. ಕೆಂಪು ಹೂ ಆದ ಕಾರಣ ಯಾರಿಗೂ ಗೊತ್ತಾಗಿಲ್ಲ. ನಾನು ನೋವಿನಿಂದ ಕೂಗಿಕೊಂಡೆ. ನಮ್ಮ ಆಸ್ಪತ್ರೆ ವೈದ್ಯರು ಕೂಡಲೇ ದೌಡಾಯಿಸಿ ಚಿಕಿತ್ಸೆ ನೀಡಿದರು. ಘಟನೆ ಹೇಗಾಯಿತು ಎಂದು ಹೇಳಲು ಕಷ್ಟ. ಬಹುಶಃ ಯಾರೋ ದುಷ್ಕರ್ಮಿಗಳು ಕಲ್ಲು ಹಾಕಿರಬಹುದು ಅನ್ನಿಸುತ್ತದೆ. ಆದರೆ ಯಾವ ಉದ್ದೇಶಕ್ಕೆ ಹಾಕಿದರು ಎಂದು ಹೇಳಲು ಕಷ್ಟ. ನಾನು 35 ವರ್ಷಗಳಿಂದ ರಾಜಕರಣ ಮಾಡಿಕೊಂಡು ಬಂದಿದ್ದೇನೆ. ನನಗೆ ಶತ್ರುಗಳು ಕಡಿಮೆ ಇರಬಹುದು ಅಂದುಕೊಂಡಿದ್ದೇನೆ. ಒಂದು ವೇಳೆ ದ್ವೇಷ ಇದ್ದರೆ ಈ ರೀತಿ ತೀರಿಸಿಕೊಳ್ಳಬಾರದು. ಹೂನಲ್ಲಿ ಅಷ್ಟು ದೊಡ್ಡ ಕಲ್ಲು ಬರಲು ಸಾಧ್ಯವಿಲ್ಲ. ಯಾರೋ ದುಷ್ಕರ್ಮಿಗಳು ಹಾಕಿರಬಹುದು. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದ್ದೇನೆ’ ಎಂದರು.

‘ನನ್ನ ವಿರುದ್ಧ ಪದೇ ಪದೇ ಯಾಕೆ ಹೀಗೆ ಆಗುತ್ತಿದೆ ಅಂತಾ ತಿಳಿದಿಲ್ಲ. ತನಿಖೆ ಮಾಡಿ ಸತ್ಯ ಹೊರತರುವಂತೆ ಸೂಚಿಸಿದ್ದೇನೆ. ಕಲ್ಲು ಎಸೆದಿದ್ದರಿಂದ ತಲೆಯಲ್ಲಿ ಒಂದೂವರೆ ಇಂಚು ಗಾಯವಾಗಿದೆ. ವೈದ್ಯರು ಹೊಸದಾಗಿ ಸರ್ಜಿಕಲ್ ಗ್ಲೂ ಹಾಕಿ ಪೀಲ್ ಮಾಡಿದ್ದಾರೆ. ಸ್ವಲ್ಪ ನೋವಿದೆ ಎಂದ ಸದ್ಯ ಚುನಾವಣಾ ಪ್ರಚಾರಕ್ಕೆ ಹೋಗಬಹುದಾ ಎಂಬುದರ ಬಗ್ಗೆ ವೈದ್ಯರ ಬಳಿ ಚರ್ಚಿಸುತ್ತೇನೆ’ ಎಂದು ಪರಮೇಶ್ವರ್ ಹೇಳಿದ್ದಾರೆ. ಪ್ರಚಾರದ ವೇಳೆ ನನಗೆ ಭದ್ರತೆ ಅವಶ್ಯಕತೆ ಇರಲಿಲ್ಲ ಅಂದುಕೊಂಡಿದ್ದೇನೆ. ನನಗೆ ಯಾವುದೇ ತೊಂದರೆ ಆದ್ರೂ ಕೂಡ ಲೆಕ್ಕ ಮಾಡುವುದಿಲ್ಲ. ನಾನು ಹೆದರಿಕೊಂಡು ಹೋಗಲ್ಲ. ನಾನು ಎಲ್ಲವನ್ನೂ ಎದುರಿಸುತ್ತೇನೆ. ವೈದ್ಯರು ಸೂಚಿಸಿದರೆ ಪ್ರಚಾರಕ್ಕೆ ಈಗಲೇ ಹೋಗುತ್ತೇನೆ. ಆದರೆ ವೈದ್ಯರು ನಾಳೆವರೆಗೂ ಇರಿ ಅಂದಿದ್ದಾರೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಮುಖಂಡರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

suddiyaana