ಸರಳ, ಸಜ್ಜನಿಕೆಯ ಜಗದೀಶ್ ಶೆಟ್ಟರ್ ಬಿಜೆಪಿಗೆ ಗುಡ್ ಬೈ – ‘ಕೈ’ ಸೇರ್ಪಡೆ ಹಿಂದಿನ ಲೆಕ್ಕಾಚಾರಗಳೇನು?
ಹಿರಿಯ ರಾಜಕಾರಣಿ. ಬಿಜೆಪಿಯ ಕಟ್ಟಾಳು. ಸರಳ, ಸಜ್ಜನಿಕೆ, ಸೌಮ್ಯಸ್ವಭಾವದ ನಾಯಕ ಜಗದೀಶ್ ಶೆಟ್ಟರ್. ಎಲ್ಲೂ ಕೂಡ ಗಟ್ಟಿಯಾಗಿ ಮಾತನಾಡಿದ ವ್ಯಕ್ತಿಯಲ್ಲ. ವಿರೋಧ ಪಕ್ಷದ ನಾಯಕರನ್ನೂ ಹಿಂದೆಂದೂ ಕಟುವಾಗಿ ಟೀಕಿಸಿರಲಿಲ್ಲ. ಶಾಸಕ, ರಾಜ್ಯಾಧ್ಯಕ್ಷ, ಸಚಿವ, ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿ ಹುದ್ದೆಗಳನ್ನು ಅಲಂಕರಿಸಿದ್ದ ಜಗದೀಶ್ ಶೆಟ್ಟರ್, ಬಿಜೆಪಿಯೊಂದಿಗಿನ 4 ದಶಕಗಳ ಸಂಬಂಧಕ್ಕೆ ತಿಲಾಂಜಲಿ ಹಾಡಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಬಾವುಟ ಹಿಡಿದಿದ್ದಾರೆ. ಕಾಂಗ್ರೆಸ್ಗೆ ಸೇರ್ಪಡೆಯಾದ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಬಿ ಫಾರಂ ಪಡೆದುಕೊಂಡಿದ್ದು ಮತ್ತೊಮ್ಮೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಲಕ್ಷ್ಮಣ ಸವದಿ ಸೇರಿದಂತೆ ಸಾಲು ಸಾಲು ವಿಕೆಟ್ ಕಳೆದುಕೊಂಡಿದ್ದ ಕಮಲಪಾಳಯಕ್ಕೆ ಶೆಟ್ಟರ್ ರಾಜೀನಾಮೆ ದೊಡ್ಡ ಆಘಾತ ನೀಡಿದೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಉಂಟಾಗಿದೆ.
ಇದನ್ನೂ ಓದಿ : ಸೋಮವಾರವೇ ಶುಭವೆಂದು ನಾಮಿನೇಷನ್ ಭರಾಟೆ – ಬೆಂಬಲಿಗರ ಜೊತೆ ಘಟಾನುಘಟಿಗಳ ಶಕ್ತಿಪ್ರದರ್ಶನ!
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್ ಧ್ವಜವನ್ನು ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕರ ದಂಡೇ ಶೆಟ್ಟರ್ಗೆ ಸ್ವಾಗತ ಕೋರಿದೆ. ಕಾಂಗ್ರೆಸ್ಗೆ ಸೇರ್ಪಡೆಯಾದ ಬಳಿಕ ಮಾತನಾಡಿದ ಶೆಟ್ಟರ್, ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೆಲವರು ಸ್ವಾರ್ಥ ರಾಜಕಾರಣದಿಂದ ನನಗೆ ಟಿಕೆಟ್ ತಪ್ಪಿಸಿದರು. ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ ಎಂದು ಕೆಲಸ ಮಾಡಿದ್ದೆವು. ಆದರೆ ಇಂದು ಕೆಲವು ವ್ಯಕ್ತಿಗಳಿಗಾಗಿ ಪಕ್ಷವನ್ನು ಕಟ್ಟಲಾಗುತ್ತಿದೆ. ನನಗೆ ಅಪಮಾನವಾಗಿದ್ದು, ಅದನ್ನು ಸರಿಪಡಿಸಲು ಮತ್ತೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ.
ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಶೆಟ್ಟರ್ ಕರ್ನಾಟಕ ಕಂಡ ಸಜ್ಜನ ರಾಜಕಾರಣಿ. ಅವರ ಸೇರ್ಪಡೆಯಿಂದ ಕಾಂಗ್ರೆಸ್ಗೆ ಬಲ ಬಂದಿದ್ದು, 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ಶೆಟ್ಟರ್ ಸ್ವಾಭಿಮಾನಕ್ಕೆ ಧಕ್ಕೆಯಾಗುವ ರೀತಿ ನಾವು ನಡೆದುಕೊಳ್ಳಲ್ಲ ಎಂದಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಮಾತನಾಡಿ, ಲಿಂಗಾಯತ ಸಮುದಾಯಕ್ಕೆ ಆಗುತ್ತಿರುವ ಅಪಮಾನ ಹಾಗೂ ತಮ್ಮನ್ನು ಬಿಜೆಪಿ ನಡೆಸಿಕೊಂಡ ರೀತಿಗೆ ಅಲ್ಲಿನ ನಾಯಕರು ಬೇಸತ್ತಿದ್ದಾರೆ. ಹೀಗಾಗಿ ತಮ್ಮ ಸ್ವಾಭಿಮಾನ ರಕ್ಷಣೆಗಾಗಿ ಜಗದೀಶ್ ಶೆಟ್ಟರ್ ಸೇರಿದಂತೆ ಪ್ರಮುಖ ಲಿಂಗಾಯತ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ ಎಂದಿದ್ದಾರೆ.
ಆದ್ರೆ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಬಿಜೆಪಿ ನಾಯಕರು ಕೆಂಡ ಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಳಸಿ ಬಿಸಾಡುವುದು ಕಾಂಗ್ರೆಸ್ ಸಂಸ್ಕೃತಿ, ಈಗ ಸನ್ಮಾನ ಮಾಡುತ್ತಾರೆ. ಚುನಾವಣೆ ನಂತರ ಅವಮಾನ ಮಾಡುತ್ತಾರೆ. ಎಲ್ಲಾ ಗೊತ್ತಿದ್ದು, ಜಗದೀಶ್ ಶೆಟ್ಟರ್ ಯಾಕೆ ಕಾಂಗ್ರೆಸ್ಗೆ ಹೋದ್ರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಶೆಟ್ಟರ್ ಗೆ ಬಿಜೆಪಿ ಎಲ್ಲಾ ಸ್ಥಾನಮಾನ ನೀಡಿದ್ರೂ ಕಾಂಗ್ರೆಸ್ ಸೇರಿದ್ದು ದುರಾದೃಷ್ಟಕರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕುಟುಕಿದ್ದಾರೆ. ಇನ್ನು ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಪೂರ್ವ ನಿಯೋಜಿತ ಎಂದು ಕಂದಾಯ ಸಚಿವ ಆರ್. ಅಶೋಕ್ ಟೀಕಿಸಿದ್ದಾರೆ. ಹಾಗೇ ಸಚಿವ ಡಾಕ್ಟರ್ ಕೆ ಸುಧಾಕರ್, ಇದೊಂದು ಪೊಲಿಟಿಕಲ್ ಸೂಸೈಡ್ ಎಂದು ಲೇವಡಿ ಮಾಡಿದ್ದಾರೆ.