ಮಾನಸಿಕ ರಕ್ಷಾ ಕವಚವಾಗಿದ್ದ ದ್ರಾವಿಡ್‌ಗೆ ಸದಾ ಚಿರಋಣಿ – ವಿರಾಟ್ ಕೊಹ್ಲಿ ಭಾವುಕ ಮಾತು

ಕ್ರಿಕೆಟ್ ಲೋಕದ ಕಿಂಗ್.. ರನ್ ಮೆಷೀನ್.. ಆರ್‌ಸಿಬಿ ದೊರೆ.. ಕೋಟಿ ಕೋಟಿ ಫ್ಯಾನ್ಸ್ ಗೆ ಹೀರೋ.. ವಿರಾಟ್ ಕೊಹ್ಲಿ. ಒಂದು ಕಡೆ ಕ್ರಿಕೆಟ್‌ನಲ್ಲಿ ಯಶಸ್ಸು. ಮತ್ತೊಂದು ಕಡೆ ಜನಪ್ರಿಯತೆ.. ಇದರ ಮಧ್ಯೆ ಕ್ರಿಕೆಟ್ ಕಿಂಗ್‌ಗೆ ಮಾನಸಿಕವಾಗಿ ಒತ್ತಡವಿತ್ತು. ಮನಸಿನಲ್ಲಿ ನಡೆಯುತ್ತಿರುವ ಕೋಲಾಹಲದಿಂದಾಗಿ ಸಂಕಷ್ಟದ ದಿನಗಳನ್ನು ಕಳೆಯಬೇಕಾಗಿತ್ತು. ಇಂಥಾ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿಗೆ ರಕ್ಷಾಕವಚವಾಗಿ ನಿಂತಿದ್ದು ರಾಹುಲ್ ದ್ರಾವಿಡ್. ಇದೀಗ ವಿರಾಟ್ ಕೊಹ್ಲಿ ರಾಹುಲ್ ದ್ರಾವಿಡ್ ಅವರಿಗೆ ಮನದಾಳದಿಂದ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ:ಪಂತ್ ಪಡೆಗೆ ಸೂರ್ಯವಂಶಿ ಸಿಡಿಲು – 15ರ ಬಾಲಕನಿಗೆ ತಲೆ ಬಾಗಿದ ಲಕ್ನೋ
ಭಾರತೀಯ ಕ್ರಿಕೆಟ್ ಲೋಕದಲ್ಲಿ ಮೆರೆಯುತ್ತಿರುವುದು ಕಿಂಗ್ ವಿರಾಟ್ ಕೊಹ್ಲಿ. ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ತನ್ನ ಸಂಕಷ್ಟದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಜೊತೆಗೆ ಇಂಥಾ ಕಠಿಣ ಸ್ಥಿತಿಯಲ್ಲಿ ತನಗೆ ಮಾನಸಿಕ ರಕ್ಷಾ ಕವಚವಾಗಿ ನಿಂತ ಕನ್ನಡದ ಹೆಮ್ಮೆಯ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರಿಗೆ ಸದಾ ಚಿರಋಣಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಸ್ಪೋರ್ಟ್ಸ್ ಸಮ್ಮಿಟ್‌ನಲ್ಲಿ ಸ್ವತಃ ಮನದಾಳ ಬಿಚ್ಚಿಟ್ಟಿರುವ ಕಿಂಗ್ ಕೊಹ್ಲಿ, ತಾವು ಸುದೀರ್ಘ ಕಾಲ ‘ಇಂಪೋಸ್ಟರ್ ಸಿಂಡ್ರೋಮ್’ ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ತನ್ನ ಕಠಿಣ ದಿನಗಳಲ್ಲಿ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ತಮಗೆ ಮಾನಸಿಕ ರಕ್ಷಾಕವಚವಾಗಿ ನಿಂತು ವೃತ್ತಿಬದುಕನ್ನು ಕಾಪಾಡಿದ್ದನ್ನು ಕೊಹ್ಲಿ ಸ್ಮರಿಸಿದ್ದಾರೆ. ಇಂಪೋಸ್ಟರ್ ಸಿಂಡ್ರೋಮ್ ಎಂದರೆ ಒಬ್ಬ ವ್ಯಕ್ತಿ ತಾನು ಸಾಧಿಸಿದ ಯಶಸ್ಸು ಮತ್ತು ಕೌಶಲ್ಯಗಳನ್ನು ನಂಬದೆ, ತನ್ನ ಸಾಮರ್ಥ್ಯದ ಬಗ್ಗೆ ತಾನೇ ಅಪನಂಬಿಕೆ ಹೊಂದುವ ಒಂದು ಮಾನಸಿಕ ಸ್ಥಿತಿ. ಸರಳವಾಗಿ ಹೇಳುವುದಾದರೆ, ಎಷ್ಟೇ ಸಾಧನೆ ಮಾಡಿದ ಮೇಲೂ “ನಾನು ಇದಕ್ಕೆ ಅರ್ಹನಲ್ಲ, ನಾನೊಬ್ಬ ವಂಚಕ , ನನ್ನ ಅಸಲಿಯತ್ತು ಅಥವಾ ತಪ್ಪುಗಳು ಸದ್ಯದಲ್ಲೇ ಎಲ್ಲರಿಗೂ ಗೊತ್ತಾಗಿಬಿಡುತ್ತದೆ” ಎಂದು ಒಳಗೊಳಗೇ ಭಯಪಡುವುದೇ ಈ ಸಿಂಡ್ರೋಮ್. ಇಂತಹದೊಂದು ಮಾನಸಿಕ ಸಮಸ್ಯೆಯನ್ನು ವಿರಾಟ್ ಕೊಹ್ಲಿ ಕೂಡ ಅನುಭವಿಸಿದ್ದರು. ಈ ವೇಳೆ ಅವರ ನೆರವಿಗೆ ನಿಂತದ್ದು ಟೀಮ್ ಇಂಡಿಯಾ ದಿಗ್ಗಜ ರಾಹುಲ್ ದ್ರಾವಿಡ್.
ಈ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ, ನಾನು ಇಷ್ಟೆಲ್ಲಾ ಸಾಧನೆ ಮಾಡಿದ ಮೇಲೂ, ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಯುವ ಆಟಗಾರರು ತನ್ನನ್ನು ಹೇಗೆ ಅಳೆಯಬಹುದು ಎಂಬ ಆತಂಕ ಇಂದಿಗೂ ಕಾಡುತ್ತದೆ ಎಂದು ಕೊಹ್ಲಿ ಒಪ್ಪಿಕೊಂಡಿದ್ದಾರೆ. ನಾಯಕತ್ವದ ಜವಾಬ್ದಾರಿಯಲ್ಲಿ ನಾನು ಎಷ್ಟು ಮುಳುಗಿಹೋಗಿದ್ದೆ ಎಂದರೆ, ನನ್ನ ಸ್ವಂತ ಭಾವನೆಗಳ ಕಡೆಗೆ ಗಮನ ಹರಿಸುವುದನ್ನೇ ನಿಲ್ಲಿಸಿಬಿಟ್ಟಿದ್ದೆ. ನಾನು ಎಲ್ಲವನ್ನೂ ನಿಭಾಯಿಸುತ್ತಿದ್ದೇನೆ ಅಂದುಕೊಂಡಿದ್ದೆ, ಆದರೆ ಆ 9 ವರ್ಷಗಳಲ್ಲಿ ಯಾರೊಬ್ಬರೂ ನನ್ನ ಬಳಿ ಬಂದು ‘ನೀನು ಹೇಗಿದ್ದೀಯಾ?’ ಎಂಬ ಕನಿಷ್ಠ ಪ್ರಶ್ನೆಯನ್ನೂ ಕೇಳಲಿಲ್ಲ ಎಂಬುದನ್ನು ಆಮೇಲೆ ಅರಿತುಕೊಂಡೆ. ಎಂದು ತನ್ನ ಸ್ಥಿತಿಯನ್ನು ವಿವರಿಸಿದ್ದಾರೆ ಕಿಂಗ್ ಕೊಹ್ಲಿ.
ನಾಯಕತ್ವದಿಂದ ಕೆಳಗಿಳಿದ ನಂತರವೂ ಅತ್ಯಂತ ಕಠಿಣ ಹಂತವನ್ನು ಎದುರಿಸಿದ್ದೆ. ಆ ಸಮಯದಲ್ಲಿ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ನನಗೆ ಬೆಂಬಲವಾಗಿ ನಿಂತರು ಎಂದು ಕೊಹ್ಲಿ ಸ್ಮರಿಸಿದ್ದಾರೆ. “ರಾಹುಲ್ ಭಾಯ್ ಸ್ವತಃ ಉನ್ನತ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದರಿಂದ ನಾನು ಅನುಭವಿಸುತ್ತಿದ್ದ ಮಾನಸಿಕ ಒತ್ತಡ ಅವರಿಗೆ ಚೆನ್ನಾಗಿ ಅರ್ಥವಾಗಿತ್ತು. ಅವರಿಬ್ಬರೂ ನನ್ನನ್ನು ಮಾನಸಿಕವಾಗಿ ತುಂಬಾ ಚೆನ್ನಾಗಿ ನೋಡಿಕೊಂಡರು. ನಾನು ಅವರಿಗಾಗಿ ಆಡಬೇಕು, ಮೈದಾನದಲ್ಲಿ ಕಷ್ಟಪಟ್ಟು ರನ್ ಗಳಿಸಬೇಕು ಎಂಬ ಹಸಿವನ್ನು ಅವರು ನನ್ನಲ್ಲಿ ಮತ್ತೆ ಮೂಡಿಸಿದರು. ನಾನು ಕ್ರಿಕೆಟ್ ಇತಿಹಾಸದಲ್ಲಿ ಸಾಧಿಸಿದ್ದನ್ನು ಅವರು ನನಗೆ ನೆನಪಿಸಿಕೊಟ್ಟರು, ಇದರಿಂದಾಗಿ ನಾನು ಮತ್ತೆ ಕ್ರಿಕೆಟ್ ಅನ್ನು ಆನಂದಿಸಲು ಸಾಧ್ಯವಾಯಿತು.” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. “ನನ್ನ ಕೆರಿಯರ್ನ ಈ ಕಠಿಣ ದಿನಗಳಲ್ಲಿ ಮಾಜಿ ಕೋಚ್ ರಾಹುಲ್ ದ್ರಾವಿಡ್ ಮತ್ತು ವಿಕ್ರಮ್ ರಾಥೋಡ್ ನೀಡಿದ ಬೆಂಬಲಕ್ಕೆ ನಿಜವಾಗಲೂ ನಾನು ಚಿರಋಣಿ. ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ನೋಡಿರಿ

