ಸೆಲೆಬ್ರಿಟಿಗಳಿಗೆ ಹುಲಿ ಉಗುರಿನ ಸಂಕಷ್ಟ- ನಟ ದರ್ಶನ್, ಜಗ್ಗೇಶ್ ಮನೆಯಲ್ಲಿ ಅರಣ್ಯಾಧಿಕಾರಿಗಳಿಂದ ಪರಿಶೀಲನೆ

ರಾಜ್ಯದಲ್ಲೀಗ ಹುಲಿ ಉಗುರಿನ ವಿವಾದ ಸಾಕಷ್ಟು ಸದ್ದು ಮಾಡುತ್ತಿದೆ. ಹುಲಿ ಉಗುರು ಧರಿಸಿದ ಆರೋಪದ ಮೇಲೆ ಬಿಗ್ ಬಾಸ್ ಮನೆಯಲ್ಲಿದ್ದ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಬಳಿಕ ಇನ್ನುಳಿದ ಸೆಲೆಬ್ರಿಟಿ ಮೇಲೂ ಕಣ್ಣು ಬಿದ್ದಿದೆ. ಖ್ಯಾತ ನಟ ದರ್ಶನ್ ಅವರು ಕೂಡ ಹುಲಿ ಉಗುರಿನ ಲಾಕೆಟ್ ಧರಿಸಿದ್ದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರ ಬೆನ್ನಲ್ಲೇ ದೂರು ಕೂಡ ದಾಖಲಾಗಿತ್ತು. ಇದರ ಬೆನ್ನಲ್ಲೇ ದರ್ಶನ್ ನಿವಾಸಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇರುವ ದರ್ಶನ್ ಅವರ ನಿವಾಸದಲ್ಲಿ ಅರಣ್ಯಾಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಸದ್ಯ ದರ್ಶನ್ ಮೈಸೂರಿನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್‌ಗೆ ಅರಣ್ಯಾಧಿಕಾರಿಗಳು ನೋಟಿಸ್ ನೀಡಿದ್ದಾರೆ. ದರ್ಶನ್ ಬಳಿ ಇರುವುದು ನಿಜವಾದ ಹುಲಿ ಉಗುರು ಹೌದೋ ಅಥವಾ ಅಲ್ಲವೋ ಎಂಬುದು ಗೊತ್ತಾಗಬೇಕಿದೆ. ಒಂದು ವೇಳೆ ಹುಲಿ ಉಗುರು ಇರುವುದು ಖಚಿತವಾದರೆ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: 20 ಸಾವಿರ ರೂಪಾಯಿಗೆ ಹುಲಿ ಉಗುರು ಖರೀದಿಸಿದ್ದರಂತೆ ವರ್ತೂರು ಸಂತೋಷ್ – ಸೆಲೆಬ್ರಿಟಿಗಳನ್ನು ಚುಚ್ಚುತ್ತಿದೆ ಹುಲಿ ಉಗುರು
ದರ್ಶನ್ ಬಳಿಕ ರಾಜ್ಯಸಭಾ ಸದಸ್ಯ ಜಗ್ಗೇಶ್ ನಿವಾಸಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿದ್ದಾರೆ. ಸದ್ಯ ಜಗ್ಗೇಶ್ ಹುಟ್ಟುರಿನಲ್ಲಿದ್ದಾರೆ. ಈ ಹಿನ್ನೆಲೆ ಅವರ ಪತ್ನಿ ಪರಿಮಳರಿಗೆ ನೋಟೀಸ್ ಕೊಡುವ ಸಾಧ್ಯತೆಯಿದೆ. ಇನ್ನೂ ಹುಲಿಯುಗುರಿನ ಪೆಂಡೆಂಟ್ ಮನೆಯಲ್ಲಿದ್ದರೆ ವಶಕ್ಕೆ ಪಡೆಯುತ್ತಾರೆ. ಒಂದು ವೇಳೆ ಮನೆಯಲ್ಲಿ ಪೆಂಡೆಂಟ್ ಇಲ್ಲ ಅಂದ್ರೆ ಆ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕಲಿದ್ದಾರೆ.
ಇನ್ನು ನಿಖಿಲ್ ಕುಮಾರ್ ಅವರು ಹುಲಿ ಉಗುರು ಧರಿಸಿರುವ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇದೀಗ ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ. ಅದನ್ನು ನನ್ನ ಮದುವೆ ಸಮಯದಲ್ಲಿ ಉಡುಗೊರೆ ನೀಡಿದ್ದು. ಅದು ಈಗಲೂ ನನ್ನ ಬಳಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.