ಮಹಿಳೆಯನ್ನು ಬಲಿ ಪಡೆದ ಆನೆ ಸೆರೆಗೆ ಸರ್ಕಾರದ ಆದೇಶ – ಒಂಟಿ ಸಲಗ ಹಿಡಿಯಲು ಫೀಲ್ಡಿಗಿಳಿದ ಗಜಪಡೆ
ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಒಂಟಿ ಸಲಗ ಮಹಿಳೆಯನ್ನು ತುಳಿದು ಕೊಂದ ಮೇಲೆ ಜನ ಕೂಡಾ ಆಕ್ರೋಶಗೊಂಡಿದ್ದರು. ಈ ಸಾವು ನ್ಯಾಯವೇ ಎಂದು ಪ್ರತಿಭಟನೆ ನಡೆಸಿದ್ದರು. ಇದಾದ ನಂತರ ಸರ್ಕಾರ ಆ ಆನೆಯನ್ನು ಸೆರೆ ಹಿಡಿಯಲು ಆದೇಶ ನೀಡಿತ್ತು. ಹೀಗಾಗಿ ಗುರುವಾರ ಬೆಳಗ್ಗೆಯಿಂದಲೇ ವಿವಿಧೆಡೆಯಿಂದ ಬಂದ ಆನೆಗಳು ಒಂಟಿ ಸಲಗವನ್ನು ಹಿಡಿಯಲು ಫೀಲ್ಡಿಗಿಳಿದಿವೆ.
ಚಿಕ್ಕಮಗಳೂರಿನಲ್ಲಿ ಒಂಟಿ ಸಲಗವೊಂದು ಜನರ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿದೆ. ಎರಡು ತಿಂಗಳಲ್ಲಿ ಇಬ್ಬರನ್ನು ಒಂಟಿ ಸಲಗ ತುಳಿದು ಸಾಯಿಸಿದೆ. ಕಾಫಿನಾಡಿನಲ್ಲಿ ಗ್ರಾಮ ಗ್ರಾಮಗಳಲ್ಲಿ ದಾಂಧಲೆ ಎಬ್ಬಿಸುತ್ತಿರುವ ಒಂಟಿ ಸಲಗದ ಹಾವಳಿಗೆ ಜನ ಭೀತಿಗೊಳಗಾಗಿದ್ದಾರೆ. ಅದರಲ್ಲೂ ಮಹಿಳೆಯೊಬ್ಬರು ಒಂಟಿ ಸಲಗಕ್ಕೆ ಬಲಿಯಾದ ಮೇಲೆ ಜನರ ಆಕ್ರೋಶ ತಾರಕಕ್ಕೇರಿತ್ತು. ಹೀಗಾಗಿ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸುವಂತೆ ಸರ್ಕಾರದಿಂದಲೂ ಆದೇಶ ನೀಡಲಾಗಿದೆ. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ವಿವಿಧ ಶಿಬಿರಗಳ ಆನೆಗಳ ಮೂಲಕ ಕಾರ್ಯಚರಣೆ ಆರಂಭಿಸಿದ್ದಾರೆ. ಸಕ್ರೇಬೈಲು ಆನೆ ಬಿಡಾರದಿಂದ ಸೋಮಣ್ಣ, ಆಲೆ, ಬಹಾದ್ದೂರ್ ಎನ್ನುವ ಆನೆಗಳು ಹಾಗೂ ಮಡಿಕೇರಿಯ ದುಬಾರೆ ಆನೆ ಶಿಬಿರದಿಂದ ನಾಲ್ಕು ಆನೆಗಳಿಂದ ಎರಡು ತಂಡಗಳಾಗಿ ಚಿಕ್ಕಮಗಳೂರು ವಲಯ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಚರಣೆ ಆರಂಭಿಸಿದ್ದಾರೆ. ಸಕ್ರೇಬೈಲ್ ಆನೆ ಶಿಬಿರದ ಅರಿವಳಿಕೆ ತಜ್ಞ ಡಾ. ವಿನಯ್ ಕೂಡಾ ಕಾರ್ಯಾಚರಣೆಗೆ ಆಗಮಿಸಿದ್ದಾರೆ.
ಭುವನೇಶ್ವರಿ ಹೆಸರಿನ 7 ಕಾಡಾನೆಗಳ ಹಿಂಡು ಚಿಕ್ಕಮಗಳೂರು ತಾಲೂಕಿನ 20ಕ್ಕೂ ಅಧಿಕ ಗ್ರಾಮಗಳಲ್ಲಿ ದಾಂಧಲೆ ನಡೆಸಿದ್ದವು. ಅಲ್ಲದೇ ಭುವನೇಶ್ವರಿ ತಂಡದಿಂದ ಬೇರ್ಪಟ್ಟಿರುವ ಒಂಟಿ ಸಲಗ ಇಬ್ಬರನ್ನು ಬಲಿ ಪಡೆದುಕೊಂಡಿತ್ತು. ಚಿಕ್ಕಮಗಳೂರು ನಗರದಿಂದ 2ಕಿ.ಮೀ ದೂರದಲ್ಲಿರುವ ಮತ್ತಾವರ ಗ್ರಾಮದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ಮೂರು ತಿಂಗಳಿನಿಂದ ನಿರಂತರವಾಗಿ ಕೋಟ್ಯಾಂತರ ಮೌಲ್ಯದ ಬೆಳೆ ನಾಶ ಮಾಡಿವೆ.
ಇನ್ನು ಕಾಡಾನೆ ದಾಳಿಗೆ ಮೃತಪಟ್ಟ ಮೀನಾ ಅವರ ಕುಟುಂಬಕ್ಕೆ ಸರ್ಕಾರದಿಂದ 15 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. 5 ದಿನದಲ್ಲಿ ಅರಣ್ಯ ಸಚಿವರನ್ನ ಜಿಲ್ಲೆಗೆ ಕಳಿಸಿ ಕಾಡಾನೆಗಳಿಂದ ಮಲೆನಾಡಿನಲ್ಲಿ ನಿರಂತರವಾಗಿ ನಡೆಯುತ್ತಿರುವ ದಾಂದಲೆಗೆ ಶಾಶ್ವತ ಪರಿಹಾರ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರ ಜೊತೆ ದೂರವಾಣಿ ಮೂಲಕ ಮಾತನಾಡಿರುವ ಸಿದ್ದರಾಮಯ್ಯ ಕಾಡಾನೆಗೆ ಶಾಶ್ವತ ಪರಿಹಾರ ನೀಡುವ ಭರವಸೆ ನೀಡುತ್ತಿದ್ದಂತೆ ಪ್ರತಿಭಟನೆ ವಾಪಸ್ ಪಡೆಯಲಾಗಿದೆ.