ಗಾಯಗೊಂಡಿದ್ದ ಕೊಕ್ಕರೆಯನ್ನು ರಕ್ಷಿಸಿದ್ದೇ ತಪ್ಪಾಯ್ತು! – ಸಾರಸ್ ಗೆಳೆಯ ಆರೀಫ್ ಗೆ ಕಾನೂನು ಸಂಕಷ್ಟ
ಲಕ್ನೋ: ಗಾಯಗೊಂಡಿದ್ದ ಅಪರೂಪದ ಸಾರಸ್ ಕೊಕ್ಕರೆಯನ್ನು ರಕ್ಷಿಸಿ ಸಾಕಿದ್ದ ರೈತನಿಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಈ ವಿಚಾರ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.
ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಮಂಡ್ಖಾ ಗ್ರಾಮದ ನಿವಾಸಿ ಆರೀಫ್ ಖಾನ್ ಗುರ್ಜರ್ ಎಂಬಾತ ಗಾಯಗೊಂಡು ಬಿದ್ದಿದ್ದ ಸಾರಸ್ ಕೊಕ್ಕರೆಯನ್ನು ರಕ್ಷಿಸಿ, ಸುಮಾರು ಒಂದೂವರೆ ವರ್ಷದಿಂದ ಮನೆಯಲ್ಲಿ ಸಾಕುತ್ತಿದ್ದರು. ಇದೀಗ ಆರೀಫ್ ಗೆ ಕಾನೂನು ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ: ಗಿಳಿ ಹೇಳಿದ ಸಾಕ್ಷಿಯಿಂದ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ! – 9 ವರ್ಷಗಳ ಕೇಸ್ ಇತ್ಯರ್ಥ
ರಕ್ಷಿಸಿದ ಕೊಕ್ಕರೆಯನ್ನು ಆರೀಫ್ ಕಾಡಿಗೆ ಬಿಡದೇ ಮನೆಯಲ್ಲಿಯೇ ಸಾಕುತ್ತಿದ್ದರು. ಹೀಗಾಗಿ ಅರಣ್ಯ ಇಲಾಖೆ ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿದೆ. ಅಷ್ಟೇ ಅಲ್ಲದೇ ಅರಣ್ಯ ಇಲಾಖೆ ಅಧಿಕಾರಿಗಳು ಪಕ್ಷಿಯನ್ನು ಸಮಸ್ಪುರ್‍ನ ಅಭಯಾರಣ್ಯಕ್ಕೆ ಸ್ಥಳಾಂತರಿಸಿ ನೈಸರ್ಗಿಕವಾಗಿ ವಾಸಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
ಅರಣ್ಯಾಧಿಕಾರಿಗಳ ಈ ಕ್ರಮಕ್ಕೆ ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿದ್ದಾರೆ. ಅರಣ್ಯ ಇಲಾಖೆಗೆ ಪ್ರಧಾನಿ ನಿವಾಸದ ನವಿಲನ್ನು ಕೊಂಡೊಯ್ಯುವ ಧೈರ್ಯ ಇದೆಯಾ ಅಂತಾ ಪ್ರಶ್ನಿಸಿದ್ದಾರೆ.
ಯಾದವ್ ಹೇಳಿಕೆಗೆ ಅರಣ್ಯಾಧಿಕಾರಿ ಡಿ.ಎನ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಆರೀಫ್ ಒಪ್ಪಿಗೆಯೊಂದಿಗೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಪಕ್ಷಿಗಳು ಯಾವಾಗಲೂ ಜೋಡಿಯಾಗಿ ಜೀವಿಸುತ್ತವೆ. ಅದರ ಯೋಗ ಕ್ಷೇಮದ ಬಗ್ಗೆ ನಮಗೆ ಆತಂಕವಿತ್ತು. ಹೀಗಾಗಿ ಅದನ್ನು ಕಾಡಿಗೆ ಬಿಡಲಾಗುತ್ತಿದೆ ಎಂದು ಹೇಳಿದ್ದಾರೆ.
ಕಳೆದ ಕೆಲವು ತಿಂಗಳ ಹಿಂದೆ ಸಾರಸ್ ಹಾಗೂ ಆರೀಫ್ ಬಾಂಧವ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಆರೀಫ್ ಎಲ್ಲಿ ಹೋದರೂ ಸಾರಸ್ ಆತನನ್ನೇ ಹಿಂಬಾಲಿಸುತ್ತಿತ್ತು. ಇದೀಗ ಆರೀಫ್ ಕಾನೂನು ಸಂಕಷ್ಟಕ್ಕೆ ಒಳಗಾಗಿದ್ದಾರೆ.