ವೈಷ್ಣೋದೇವಿ ಉತ್ಸವದಲ್ಲಿ ಮೊದಲ ಬಾರಿಗೆ ಕರಾವಳಿಯ ಗಂಡುಕಲೆ ಯಕ್ಷಗಾನ! – ಹಿಂದಿ ಭಾಷೆಯಲ್ಲಿಯೇ ಪ್ರದರ್ಶನಗೊಳ್ಳಲಿದೆ ದೇವಿಮಹಾತ್ಮೆ ಪ್ರಸಂಗ!
ಜಮ್ಮು- ಕಾಶ್ಮೀರದ ವೈಷ್ಣೋದೇವಿ ನವರಾತ್ರಿ ಉತ್ಸವದಲ್ಲಿ ಇದೇ ಮೊದಲಬಾರಿಗೆ ಕರಾವಳಿಯ ಗಂಡುಕಲೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ತೆಂಕುತಿಟ್ಟಿನ ‘ದೇವಿ ಮಹಾತ್ಮೆ’ಯಕ್ಷಗಾನ ಅ.15ರಂದು ಪ್ರದರ್ಶನಗೊಳ್ಳಲಿದೆ ಎಂದು ವರದಿಯಾಗಿದೆ.
ನವರಾತ್ರಿ ಆರಂಭದ ದಿನದಂದೇ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನವಾಗಿಲಿದೆ. ಅ.15ರಂದು ಸಂಜೆ 7ರಿಂದ 2 ಗಂಟೆ ಕಾಲ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ವೈಷ್ಣೋದೇವಿ ಯಾತ್ರಾಸ್ಥಳದ ಬೇಸ್ ಕ್ಯಾಂಪ್ ಜಮ್ಮುವಿನ ಕಾಟ್ರಾದಲ್ಲಿ ಉತ್ಸವ ನಡೆಯಲಿದ್ದು, ಯಕ್ಷಗಾನ ಸಂಪೂರ್ಣ ಹಿಂದಿ ಭಾಷೆಯಲ್ಲಿ ಪ್ರದರ್ಶನಗೊಳ್ಳಲಿದೆ. ಜಮ್ಮು-ಕಾಶ್ಮೀರ ಸರ್ಕಾರವೇ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಗಮನಾರ್ಹ.
ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ ಕೌಂಟ್‌ಡೌನ್ ಶುರು – 78 ಜೋಡಿ ಕೋಣಗಳು ನೋಂದಣಿ!
ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮುಖ್ಯಸ್ಥ, ಭಾಗವತ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ಅವರದೇ ಮೇಲುಸ್ತುವಾರಿಯ ಪಾವಂಜೆ ಶ್ರೀಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರು ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ. ಸರ್ಪಂಗಳ ಈಶ್ವರ ಭಟ್ ಹಿಂದಿಯಲ್ಲಿ ಪದ್ಯ ರಚಿಸಿದ್ದು, ಪ್ರೊ.ಪವನ್ ಕಿರಣ್‌ಕೆರೆ ಅರ್ಥವನ್ನು ಬರೆದಿದ್ದಾರೆ. ಪಟ್ಲ ಸತೀಶ್ ಶೆಟ್ಟಿ ನೇತೃತ್ವದ 15 ಮಂದಿಯ ತಂಡ ಅ.14ರಂದು ಮಂಗಳೂರಿನಿಂದ ಜಮ್ಮು ತಲುಪಲಿದೆ.
ಅ.2ರಂದು ಗಾಂಧಿ ಜಯಂತಿ ಆಚರಣೆ ವೇಳೆ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಇದೇ ತಂಡದಿಂದ ಹಿಂದಿ ಭಾಷೆಯಲ್ಲಿ ‘ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆದಿತ್ತು. ಇದು ಮೆಚ್ಚುಗೆ ಗಳಿಸಿತ್ತು.
ಶ್ರೀನಗರದ ಶೇರ್-ಇ-ಕಾಶ್ಮೀರ್ ಇಂಟರ್ ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್‌ನಲ್ಲಿ ನಡೆದಿದ್ದ ಪ್ರದರ್ಶನದ ವೇಳೆ ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಾಜರಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ, ವೈಷ್ಣೋದೇವಿಯಲ್ಲಿ ನವರಾತ್ರಿಗೆ ನಡೆಯುವ ಉತ್ಸವದಲ್ಲೂ ಇದೇ ಯಕ್ಷಗಾನವನ್ನು ಪ್ರದರ್ಶಿಸುವಂತೆ ಆಗಲೇ ಆಹ್ವಾನ ನೀಡಿದ್ದರು.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ತಂಡದ ಮುಖ್ಯಸ್ಥ ಪಟ್ಲ ಸತೀಶ್ ಶೆಟ್ಟಿ, ಭಾರತದ ಮುಕುಟಕ್ಕೆ ಯಕ್ಷಗಾನ ತಲುಪಿದೆ. ಅಲ್ಲಿಯೂ ಯಕ್ಷಗಾನ ಪ್ರೀತಿಸುವವರು ಇದ್ದಾರೆ ಎಂಬುವುದಕ್ಕೆ ಮತ್ತೊಮ್ಮೆ ಆಹ್ವಾನ ಬಂದಿರುವುದು ಸಾಕ್ಷಿ. ಒಂದೇ ವಾರದಲ್ಲಿ ಮತ್ತೊಮ್ಮೆ ನಮ್ಮ ಕಲಾವಿದರು ಜಮ್ಮುವಿಗೆ ತೆರಳುತ್ತಿದ್ದಾರೆ. ಅದು ಕೂಡ ಅಲ್ಲಿನ ಸರ್ಕಾರವೇ ಆಹ್ವಾನಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.