ಇತಿಹಾಸದಲ್ಲಿ ಮೊದಲ ಬಾರಿಗೆ RSS ಲಾಠಿ ಉಪಯೋಗಕ್ಕೆ: ಬಡಿದಾಟದಲ್ಲಿ ಉಳಿದವರು ಬಿಜೆಪಿ ನಾಯಕನಾಗಲಿ – ಕಾಂಗ್ರೆಸ್ ಲೇವಡಿ
ಹೀನಾಯ ಸೋಲಿನ ಆಘಾತದಲ್ಲಿರುವ ಬಿಜೆಪಿಗೆ ಈಗ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆಯೇ ಸವಾಲಾಗಿ ಪರಿಣಮಿಸಿದೆ. ಚುನಾವಣೆಯ ಸೋಲಿನ ಬಳಿಕ ಒಳಒಪ್ಪಂದ, ಆರೋಪ ಪ್ರತ್ಯಾರೋಪ, ನಾಯಕರ ಕೆಸರೆರೆಚಾಟ, ಕಾರ್ಯಕರ್ತರ ಆಕ್ರೋಶ ಹೆಚ್ಚಾಗಿದೆ. ಬಿಜಪಿ ನಾಯಕರ ವಾಕ್ಸಮರ ಕುರಿತು ಇದೀಗ ರಾಜ್ಯ ಕಾಂಗ್ರೆಸ್ ಲೇವಡಿ ಮಾಡಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಆರ್‌ಎಸ್‌ಎಸ್‌ನವರ ಲಾಠಿ ಉಪಯೋಗಕ್ಕೆ ಬರಲಿದೆ ಎಂದು ವ್ಯಂಗ್ಯವಾಡಿದೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಬೈಕ್, ಆಟೋಗಳಿಗೆ ನಿಷೇಧ! – ಯಾವಾಗಿಂದ ನಿರ್ಬಂಧ?
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ʼಬಿಜೆಪಿಯ ಸೋಲಿನ ಆತ್ಮವಲೋಕನದ ಫೈನಲ್ ರಿಸಲ್ಟ್ ಬರಲೇ ಇಲ್ಲ! ಒಬ್ಬೊಬ್ಬರದ್ದೂ ಒಂದೊಂದು ಅವಲೋಕನ ಅಧ್ಯಕ್ಷರಿಂದ ಸೋಲಾಯ್ತು, ವಲಸಿಗರಿಂದ ಸೋಲಾಯ್ತು, ಅಡ್ಜಸ್ಟ್ಮೆಂಟ್ ನಿಂದ ಸೋಲಾಯ್ತು, ಬಡವರ ಅಕ್ಕಿ ಕಿತ್ತುಕೊಂಡು ಸೋಲಾಯ್ತು, ಮೋದಿ ಬೀದಿ ಸುತ್ತಿದ್ದಕ್ಕೆ ಸೋಲಾಯ್ತು, ಗುಜರಾತ್ ಮಾಡೆಲ್ ನಿಂದ ಸೋಲಾಯ್ತು, ಪಕ್ಷದ್ರೋಹಿಗಳಿಂದ ಸೋಲಾಯ್ತು ಅಕಸ್ಮಾತ್ ಗೆಲುವಾಗಿದ್ದಿದ್ದರೆ ಕ್ರೆಡಿಟ್ ಸಿಂಪಲ್ ಆಗಿರುತ್ತಿದ್ದವು, ಮೋದಿಯಿಂದ ಗೆಲುವಾಯ್ತು, ಜೋಶಿ, ಸಂತೋಷರಿಂದ ಗೆಲುವಾಯ್ತು! ಅಂತೂ ಇಂತೂ ಬಿಜೆಪಿಯ ಆತ್ಮವಲೋಕನದಲ್ಲಿ ಹಲವು ಸತ್ಯಗಳು ಹೊರಬಂದಿವೆ, ಇನ್ನೂ ಹಲವು ಹೊರಬಾರದೆ ಒದ್ದಾಡುತ್ತಿವೆ!ʼ ಎಂದು ವ್ಯಂಗ್ಯವಾಡಿದೆ.
ಇತಿಹಾಸದಲ್ಲಿ ಮೊದಲ ಬಾರಿಗೆ ಆರ್‌ಎಸ್‌ಎಸ್‌ನವರ ಲಾಠಿ ಉಪಯೋಗಕ್ಕೆ ಬರಲಿದೆ. ಸದ್ಯದ ಸ್ಥಿತಿಯಲ್ಲಿ ಬಿಜೆಪಿಗರ ಕೈಗೆ ಕೊಟ್ಟರೆ ಬಡಿದಾಡಿಕೊಳ್ಳಲು ಬಳಸುತ್ತಾರೆ. ಆ ನಂತರ ಬದುಕುಳಿದವರಿಗೆ ಅಧ್ಯಕ್ಷ, ವಿಪಕ್ಷ ನಾಯಕನ ಸ್ಥಾನ ಕೊಟ್ಟು ಕೂರಿಸಬಹುದು. ಆರ್‌ಎಸ್‌ಎಸ್ ನಾಯಕರಿಗೆ ಬಿಜೆಪಿಯ ಗೊಂದಲ ಬಗೆಹರಿಸಲು ಉತ್ತಮ ಐಡಿಯಾವನ್ನು ಕಾಂಗ್ರೆಸ್ ಕಡೆಯಿಂದ ಫ್ರಿಯಾಗಿ ನೀಡುತ್ತಿದ್ದೇವೆ!
ರಾಜ್ಯಧ್ಯಕ್ಷರಿಂದಲೇ ಬಿಜೆಪಿಗೆ ಸೋಲಾಗಿದ್ದು ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಆದರೆ ನಳೀನ್ ಕುಮಾರ್ ಕಟೀಲ್ ಅವರು ಈ ಆರೋಪ ಕೇಳಿಯೂ ಸುಮ್ಮನಿರುವುದೇಕೆ? ನನ್ನದೇನೂ ತಪ್ಪಿಲ್ಲ, ಶಾಡೋ ಅಧ್ಯಕ್ಷರಾದ ಜೋಶಿ, ಸಂತೋಷ್ ಅವರೇ ಸೋಲಿಗೆ ಹೊಣೆ ಎಂದು ಘೋಷಿಸಿಬಿಡಲಿ! ಸೋಲಿಗೆ ಸರದಾರರಾದ ಜೋಶಿ, ಸಂತೋಷ್ ಅವರುಗಳ ಹೆಸರೆತ್ತಲು ಬಿಜೆಪಿಗರು ಭಯಪಾಡುತ್ತಿರುವುದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.