ಈ ಜನರಿಗೆ ಹಾಲಿವುಡ್‌ ಸ್ಮೈಲ್‌ ಬೇಕಂತೆ! – ಒಂದು ಗಂಟೆಯ ಕ್ಲಾಸ್‌ ಗೆ 4,500 ರೂಪಾಯಿ..

ಈ ಜನರಿಗೆ ಹಾಲಿವುಡ್‌ ಸ್ಮೈಲ್‌ ಬೇಕಂತೆ! – ಒಂದು ಗಂಟೆಯ ಕ್ಲಾಸ್‌ ಗೆ 4,500 ರೂಪಾಯಿ..

ಕೋವಿಡ್‌ ಕಾಲದಲ್ಲಿ ಪ್ರಪಂಚದಾದ್ಯಂತ ಎಲ್ಲರೂ ಮಾಸ್ಕ್ ಧರಿಸಿಕೊಂಡೇ ಎಲ್ಲಾ ಕಡೆ ಸುತ್ತಾಡುತ್ತಿದ್ದರು. ಆರೋಗ್ಯ ರಕ್ಷಕನಾಗಿದ್ದ ಮಾಸ್ಕ್ ಜಪಾನ್‌  ದೇಶದಲ್ಲಿ ಹಲವರ ನಗುವನ್ನೇ ಕಸಿದುಕೊಂಡಿದೆ. ಹೀಗಾಗಿ ಜನರು ನಗುವುದನ್ನು ಮತ್ತೆ ಕಲಿಯಲು ತಜ್ಞರ ಮೊರೆಹೋಗಿದ್ದಾರೆ ಎಂದು ಕಳೆದ ಕೆಲವು ದಿನಗಳ ಹಿಂದೆ ಸುದ್ದಿಯಾಗಿತ್ತು. ಇದೀಗ ಮತ್ತೆ ನಗಲು ಕಲಿಯುತ್ತಿರುವವರಿಂದ ಹೊಸ ಡಿಮ್ಯಾಂಡ್‌ ಶುರುವಾಗಿದೆ.

ಜಪಾನ್‌ ಜನರು ನಗುವುದನ್ನು ಮರೆತಿದ್ದಾರೆ ಎಂಬ ಸುದ್ದಿ ಎಲ್ಲಡೆ ವೈರಲ್‌ ಆಗಿತ್ತು. ಇದೀಗ ನಗುವಿನಲ್ಲೂ  ‘ಹಾಲಿವುಡ್ ಸ್ಮೈಲ್’ ಎಂಬ ಪ್ರಕಾರವನ್ನು ಕಲಿಯಲು ಅಲ್ಲಿನ ಜನರು ಆಸಕ್ತರಾಗಿದ್ದಾರೆ. ಹೀಗಾಗಿ ಅಲ್ಲಿನ ಜನರು ಹಾಲಿವುಡ್‌ ಸ್ಮೈಲ್‌ ಅನ್ನು ನಮಗೂ ಕಲಿಸಿಕೊಡಿ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ: ಮಾಸ್ಕ್‌ ಹಾಕಿ ಹಾಕಿ ಇಲ್ಲಿನ ಜನರಿಗೆ ನಗುವೇ ಮರೆತು ಹೋಯ್ತು! – ಮತ್ತೆ ನಗಲು ಮಾಡಿದ್ದೇನು ಗೊತ್ತಾ?

ಹಾಲಿವುಡ್ ಸ್ಟೈಲ್ ಸ್ಮೈಲಿಂಗ್ ಎಂದರೆ ಕೇವಲ 8 ಹಲ್ಲುಗಳನ್ನು ತೋರಿಸಿ ನಗುವುದಾಗಿದೆ. ಹೀಗೆ ನಕ್ಕರೆ ಕಣ್ಣುಗಳು ಅರ್ಧ ಚಂದ್ರನಂತೆ ಕಾಣುತ್ತದೆ. ಕೆನ್ನೆ ದುಂಡಗೆ ಕಾಣಿಸುತ್ತದೆ. ಈ ರೀತಿಯಾಗಿ ನಕ್ಕರೆ ತುಂಬಾ ಸುಂದವಾಗಿ ಕಾಣಿಸುತ್ತಾರಂತೆ. ಹೀಗಾಗಿ ಜನರು ಹಾಲಿವುಡ್‌ ಸ್ಮೈಲ್‌ ಕಲಿಯಬೇಕೆಂದು ನಗುವಿನ ಕ್ಲಾಸ್‌ ಗೆ ಹೋಗುತ್ತಿದ್ದಾರಂತೆ.

ಸ್ಮೈಲ್‌ ಟ್ರೈನರ್‌ ಕೀಕೊ ಕವಾನೊ ಅವರು ಜನರಿಗೆ ನಗುವುದನ್ನು ಕಲಿಸುತ್ತಿದ್ದಾರೆ. ಜಪಾನ್‌ ನಲ್ಲಿ ಇವರ ತರಗತಿಗೆ ಬೇಡಿಕೆ ಹೆಚ್ಚಾಗಿದೆ. ಇವರ ವಿದ್ಯಾರ್ಥಿಗಳು ಕೂಡ ಶ್ರದ್ಧೆಯಿಂದ ನಗುವುದನ್ನು ಅಭ್ಯಾಸ ಮಾಡುತ್ತಿದ್ದಾರೆ.

ವಿದ್ಯಾರ್ಥಿಗಳು ಕನ್ನಡಿ  ಹಿಡಿದು ತಮ್ಮ ಬೆರಳುಗಳಿಂದ ಬಾಯಿಯ ಬದಿಗಳನ್ನು ಅಗಲಿಸಿ ಹೇಗೆ ನಗಬೇಕೆಂದು ಅಭ್ಯಾಸ ಮಾಡುತ್ತಿದ್ದಾರೆ. ಕವಾನೋ ಅವರು ವಿದ್ಯಾರ್ಥಿಗಳಿಗೆ ನಗುವುದು ಎಷ್ಟು ಮುಖ್ಯ, ನಕ್ಕರೇ ಏನು ಲಾಭಗಳಿವೆ ಎಂಬುವುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಕವಾನೊ ಅವರ ಕಂಪನಿ ‘ಎಗೊಯಿಕು’ (ಸ್ಮೈಲ್ ಎಜುಕೇಶನ್ ಎಂದೇ ಭಾಷಾಂತರಿಸಬಹುದು) ಕಳೆದ ವರ್ಷಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ. ಇಲ್ಲಿ ಒಂದು ಗಂಟೆಯ ಅವಧಿಯ ಪಾಠಕ್ಕೆ 7,700 ಯೆನ್ (4,500 ರೂ.) ವೆಚ್ಚವಾಗುತ್ತದೆ.

ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಹಿಮಾವರಿ ಯೋಶಿಡಾ ಮಾತನಾಡಿದ್ದು,  “ಕರೊನಾ ಸಮಯದಲ್ಲಿ ನಾನು ನನ್ನ ಮುಖದ ಸ್ನಾಯುಗಳನ್ನು ಹೆಚ್ಚು ಬಳಸಿರಲಿಲ್ಲ. ನಗುವುದು ಉತ್ತಮ ವ್ಯಾಯಾಮ. ತಮಗೆ ನಗುವಿನ ಟ್ರೇನಿಂಗ್ ಅಗತ್ಯವಿದೆ ಎಂದು ಹೇಳುತ್ತಾರೆ” ಎಂದು ಹೇಳಿದ್ದಾರೆ.

ಕೊರೋನಾ ಸಮಯದಲ್ಲಿ ಮಾಸ್ಕ್‌ ಧರಿಸುವುದು ಸಾಮಾನ್ಯವಾಗಿತ್ತು. ಈ ಸಮಯದಲ್ಲಿ ಅನಾರೋಗ್ಯಕ್ಕೆ ಒಳಗಾಗಲು ಜನರು ಬಯಸುತ್ತಿರಲಿಲ್ಲ. ಆದರೆ ಮಾರ್ಚ್ ತಿಂಗಳಲ್ಲಿ ಮಾಸ್ಕ್ ಧರಿಸುವ ತನ್ನ ಶಿಫಾರಸನ್ನು ಸರ್ಕಾರ ಹಿಂತೆಗೆದುಕೊಂಡಿತ್ತು. ಆದರೂ ಕೂಡ ಜನರು ಮಾಸ್ಕ್ ಬಳಸುವುದನ್ನು ನಿಲ್ಲಿಸಿಲ್ಲ. ಮೇ ತಿಂಗಳಲ್ಲಿ ಸಾರ್ವಜನಿಕ ಪ್ರಸಾರಕ ಎನ್ಎಚ್‌ಕೆ ನಡೆಸಿದ ಸಮೀಕ್ಷೆಯ ಪ್ರಕಾರ, 55% ಜಪಾನಿಯರು ಇದೀಗಲೂ ಮಾಸ್ಕ್ ಗಳನ್ನು ಧರಿಸಿದ್ದಾರೆ. ಶೇ.8 ರಷ್ಟು ಮಂದಿ ಮಾತ್ರ ಮಾಸ್ಕ್ ಧರಿಸುವುದನ್ನು ನಿಲ್ಲಿಸಿರುವುದಾಗಿ ವರದಿಯಾಗಿದೆ.

suddiyaana