ಐತಿಹಾಸಿಕ ಕ್ಷಣಕ್ಕೆ ಕೆಲವೇ ನಿಮಿಷಗಳು ಮಾತ್ರ ಬಾಕಿ – ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ ಇರುವುದು 84 ಸೆಕೆಂಡುಗಳಷ್ಟು ಮಾತ್ರ!

ಐತಿಹಾಸಿಕ ಕ್ಷಣಕ್ಕೆ ಕೆಲವೇ ನಿಮಿಷಗಳು ಮಾತ್ರ ಬಾಕಿ – ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ ಇರುವುದು 84 ಸೆಕೆಂಡುಗಳಷ್ಟು ಮಾತ್ರ!

ಐತಿಹಾಸಿಕ ಮತ್ತು ಅಭೂತಪೂರ್ವ ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಕೆಲ ನಿಮಿಷಗಳಷ್ಟೇ ಬಾಕಿ. ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಮಧ್ಯಾಹ್ನ 12. 29 ಕ್ಕೆ ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗುತ್ತಿದೆ. ಇನ್ನೊಂದು ಅಚ್ಚರಿಯ ವಿಚಾರ ಅಂದ್ರೆ ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ ಇರುವುದು 84 ಸೆಕೆಂಡುಗಳಷ್ಟು ಮಾತ್ರ.

ಇದನ್ನೂ ಓದಿ: ಶತಮಾನಗಳ ಕನಸು ನನಸಾಗಲು ಕ್ಷಣಗಣನೆ – ಜನವರಿ 22ನ್ನು ಅಯೋಧ್ಯೆ ರಾಮ ಮಂದಿರ ದಿನವನ್ನಾಗಿ ಘೋಷಿಸಿದ ಕೆನಡಾ

ಹೌದು. ಅಯೋಧ್ಯೆಯಲ್ಲಿ ಸೋಮವಾರ ನಡೆಯುತ್ತಿರುವ ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕೆಲವೇ ನಿಮಿಷಗಳು ಮಾತ್ರ ಬಾಕಿ ಉಳಿದಿದೆ. ದೇಶ, ವಿದೇಶಗಳಲ್ಲಿ ಸಂಭ್ರಮ ಮನೆ ಮಾಡಿದೆ. ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ ಇರುವುದು 84 ಸೆಕೆಂಡುಗಳಷ್ಟು ಮಾತ್ರ. ಅದು 12 ಗಂಟೆ 29 ನಿಮಿಷ 8 ಸೆಕೆಂಡುಗಳಿಂದ 12 ಗಂಟೆ 30 ನಿಮಿಷ 32 ಸೆಕೆಂಡುಗಳವರೆಗೆ ಇರಲಿದೆ. ಈ ಶುಭ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನೆಯನ್ನು ನೆರವೇರಿಸಲಾಗುತ್ತಿದ್ದು, ಇಡೀ ವಿಶ್ವವೇ ಇದಕ್ಕೆ ಸಾಕ್ಷಿಯಾಗಲಿದೆ.

ಇನ್ನು ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ಕಾರ್ಯಕ್ರಮವು 12.20ರಿಂದ 12.45ರವರೆಗೆ ನಡೆಯಲಿದೆ. ಮಹಾವಿಷ್ಣುವಿನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಶುರುವಾಗಲಿದೆ. ಪುರೋಹಿತರು ಮಂತ್ರಗಳ ಮೂಲಕ ಶ್ರೀರಾಮನನ್ನು ಆವಾಹನೆ ಮಾಡುತ್ತಾರೆ. ಗರ್ಭಗೃಹದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ವಿಧಿವಿಧಾನಗಳು ನಡೆಯುತ್ತವೆ. ಧಾರ್ಮಿಕ ವಿಧಿವಿಧಾನಗಳನ್ನು 121 ಮಂದಿ ವೈದಿಕ ವಿದ್ವಾಂಸರು, ಆಚಾರ್ಯ ಗಣೇಶ್ವರ ದ್ರಾವಿಡ್ ಮತ್ತು ಆಚಾರ್ಯ ಲಕ್ಷ್ಮೀಕಾಂತ ದ್ವಿವೇದಿ ಮಾರ್ಗದರ್ಶನದಲ್ಲಿ ನಡೆಸಲಿದ್ದಾರೆ. ಪ್ರಾಣ ಪ್ರತಿಷ್ಠಾಪನೆಯ ನಂತರದಲ್ಲಿ, ಅಯೋಧ್ಯೆಯಲ್ಲಿ ಸೋಮವಾರ ಸಂಜೆ ದೀಪೋತ್ಸವ ನಡೆಯಲಿದೆ. ಒಟ್ಟು ಹತ್ತು ಲಕ್ಷ ಹಣತೆಗಳನ್ನು ಬೆಳಗಿಸಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ, ಸಾಧು ಸಂತರು, ಪ್ರಮುಖ ಕೈಗಾರಿಕೋದ್ಯಮಿಗಳು, ಬಾಲಿವುಡ್ ತಾರೆಯರು ಸೇರಿದಂತೆ ಸುಮಾರು ಎಂಟು ಸಾವಿರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ 14 ದಂಪತಿ ‘ಯಜಮಾನ’ರಾಗಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಲಿಂಗರಾಜ ಬಸವರಾಜ ಅವರು ಯಜಮಾನರಾಗಿ ಪತ್ನಿಯೊಂದಿಗೆ ಭಾಗಿಯಾಗಲಿದ್ದಾರೆ. ರಾಮ ಮಂದಿರ ಸುತ್ತಮುತ್ತ ಸೇರಿದಂತೆ ಅಯೋಧ್ಯೆ ನಗರದಲ್ಲಿ ಭಾರಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.

Shwetha M