ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌! ನಿಲ್ದಾಣಗಳಲ್ಲಿ ತಿನಿಸು ಮಾರಾಟ.. – ಏನೆಲ್ಲಾ ಸಿಗುತ್ತೆ?

ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌! ನಿಲ್ದಾಣಗಳಲ್ಲಿ ತಿನಿಸು ಮಾರಾಟ.. – ಏನೆಲ್ಲಾ ಸಿಗುತ್ತೆ?

ಸಿಲಿಕಾನ್‌ ಸಿಟಿಯ ಸಂಚಾರ ಜೀವನಾಡಿ ನಮ್ಮ ಮೆಟ್ರೋ ಎಂದೇ ಹೇಳಬಹುದು. ಆಫೀಸ್‌ಗೆ ಹೋಗಲು, ಕಾಲೇಜ್‌ಗೆ ಹೋಗಲು ಸಾವಿರಾರು ಮಂದಿ ಮೆಟ್ರೋವನ್ನೇ ಅವಲಂಭಿಸಿದ್ದಾರೆ. ಬಿಎಂಆರ್‌ಸಿಎಲ್‌ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಸೌಲಬ್ಯಗಳನ್ನು ಒದಗಿಸುತ್ತಲೇ ಬಂದಿದೆ. ಇದೀಗ ಪ್ರಯಾಣಿಕರಿಗಾಗಿ ಮತ್ತೊಂದು ಹೊಸ ಸೌಲಭ್ಯವೊಂದನ್ನು ಪರಿಚಯಿಸಿದೆ. ಅದೇ ತಿನಿಸುಗಳ ಮಳಿಗೆ.

ಹೌದು, ಬಿಎಂಆರ್‌ಸಿಎಲ್‌ ಮೆಟ್ರೋ ನಿಲ್ದಾಣವನ್ನು ನಿಧಾನವಾಗಿ ವ್ಯಾಪಾರ ಕೇಂದ್ರವಾಗಿ ಮಾರ್ಪಾಡು ಮಾಡುತ್ತಿದೆ. ಮೊದಲ ಹಂತದಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ತಿನಿಸುಗಳ ವೆಂಡಿಂಗ್‌ ಮಷಿನ್‌ಗಳನ್ನು ಅಳವಡಿಸಲಾಗಿದೆ. ಈ ಮಳಿಗೆಗಳಲ್ಲಿ ಗ್ರಾಹಕರು ಮುಕ್ತವಾಗಿ ತಮ್ಮಿಷ್ಟದ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.

ಇದನ್ನೂ ಓದಿ: ಟಾಕ್ಸಿಕ್‌ ಸಿನಿಮಾದಲ್ಲಿ ಬಾಲಿವುಡ್‌ ತಾರೆಯರು! – ರಾಕಿಂಗ್‌ ಸ್ಟಾರ್‌ ಯಶ್‌ ಜೊತೆ ನಟಿಸಲು ಯಾರಿಗೆಲ್ಲಾ ಸಿಕ್ತು ಅವಕಾಶ?

ಸದ್ಯ ಅತಿಹೆಚ್ಚು ಜನರು ಬಂದು ಹೋಗುವ ನೇರಳೆ ಮತ್ತು ಹಸಿರು ಮಾರ್ಗದ ಇಂಟರ್‌ಚೇಂಜ್‌ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ 2, ಎಂಜಿ ರಸ್ತೆ, ಮಂತ್ರಿ ಸ್ಕ್ವೈರ್‌ ಮತ್ತು ನ್ಯಾಷನಲ್‌ ಕಾಲೇಜು ನಿಲ್ದಾಣದಲ್ಲಿ ತಲಾ ಒಂದು ವೆಂಡಿಂಗ್‌ ಮಷಿನ್‌ ಇಡಲಾಗಿದೆ. ಈ ವೆಂಡಿಂಗ್‌ ಮಷಿನ್‌ನಲ್ಲಿ ಬಿಸ್ಕೆಟ್‌, ಎನರ್ಜಿ ಜ್ಯೂಸ್‌, ಚಾಕೋಲೆಟ್, ವಿವಿಧ ಬಗೆಯ ಸ್ನಾಕ್ಸ್‌, ಸಾಫ್ಟ್‌ ಜ್ಯೂಸ್‌, ಕೇಕ್‌ ಸೇರಿದಂತೆ ಹಲವು ಆಹಾರ ಉತ್ಪನ್ನಗಳು ಲಭ್ಯವಿವೆ. ಕ್ಯೂಆರ್‌ ಕೋಡ್‌ ಮೂಲಕ ಹಣ ಪಾವತಿಸಿ ಬೇಕಾದ ವಸ್ತು ಖರೀದಿಸಬಹುದು. ನಾಣ್ಯ ಹಾಕುವ ಸೌಲಭ್ಯ ಇದೆಯಾದರೂ ಸದ್ಯಕ್ಕೆ ಅದು ಕಾರ್ಯನಿರ್ವಹಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ನಿಲ್ದಾಣದಲ್ಲಿ ಮಷಿನ್‌ ಇಡಲಾಗುವುದು ಎನ್ನುತ್ತಾರೆ ವೆಂಡಿಂಗ್‌ ಮಷಿನ್‌ ಗುತ್ತಿಗೆ ಪಡೆದ ಕಂಪನಿಯವರು.

‘ನಮ್ಮ ಮೆಟ್ರೋ’ ನಿಗಮವು ಟೋಕನ್‌ ಮಾರಾಟ ಆದಾಯ ಹೊರತುಪಡಿಸಿ, ಇನ್ನಿತರೆ ಆದಾಯ ಮೂಲಗಳ ಹುಡುಕಾಟ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಚಿಲ್ಲರೆ ಮಳಿಗೆ, ಹಾಲಿನ ಬೂತ್‌, ಎಟಿಎಂಗಳಿಗೆ ಅಗತ್ಯವಿರುವ ಸ್ಥಳಾವಕಾಶ ಬಾಡಿಗೆಗೆ ನೀಡಲಾಗುತ್ತಿದೆ. ಹಾಗೆಯೇ, ಪಾರ್ಕಿಂಗ್‌ ಹಾಗೂ ಜಾಹೀರಾತಿನಿಂದಲೂ ಆದಾಯ ಗಳಿಸುತ್ತಿದೆ. ಆದರೆ, ಟಿಕೆಟ್‌ ಹೊರತುಪಡಿಸಿದ ಆದಾಯ ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ಹಾಗಾಗಿ, ಅತಿ ಹೆಚ್ಚು ಪ್ರಯಾಣಿಕರು ಬಂದು ಹೋಗುವ ನಾಡಪ್ರಭು ಕೆಂಪೇಗೌಡ ಇಂಟರ್‌ಚೇಂಜ್‌ ನಿಲ್ದಾಣದಲ್ಲಿ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಿ, ಬಾಡಿಗೆಗೆ ನೀಡಲು ಮೆಟ್ರೋ ನಿಗಮವು ಚಿಂತನೆ ನಡೆಸಿದೆ.

ಮೆಟ್ರೋ ನಿಲ್ದಾಣದ ಆವರಣದಲ್ಲಿ ಖಾಲಿ ಇರುವ ಸ್ಥಳಗಳಲ್ಲಿ ಮೆಡಿಕಲ್‌ ಸ್ಟೋರ್‌, ಸ್ಟೇಷನರಿ ಅಂಗಡಿ, ಸಲೂನ್‌ ಸೇರಿದಂತೆ ವಿವಿಧ ಶಾಪಿಂಗ್‌ ಮಳಿಗೆಗಳಿಗೆ ಜಾಗ ಮಾಡಿಕೊಟ್ಟು ಬಾಡಿಗೆ ಪಡೆಯಲು ಮುಂದಾಗಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಕೂಡ ಪಡೆದುಕೊಂಡಿದೆ.

Shwetha M