ಸಿನಿಪ್ರಿಯರಿಗೆ ಖುಷಿ ಸುದ್ದಿ – ಮಲ್ಟಿಪ್ಲೆಕ್ಸ್​​ನಲ್ಲಿ ತಿಂಡಿ, ಪಾನೀಯದ ಬೆಲೆ ಇಳಿಕೆ!

ಸಿನಿಪ್ರಿಯರಿಗೆ ಖುಷಿ ಸುದ್ದಿ – ಮಲ್ಟಿಪ್ಲೆಕ್ಸ್​​ನಲ್ಲಿ ತಿಂಡಿ, ಪಾನೀಯದ ಬೆಲೆ ಇಳಿಕೆ!

ಬೆಂಗಳೂರು: ಜನರು ಸಿನಿಮಾ ವೀಕ್ಷಿಸಲು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಕೋವಿಡ್‌ ಬಳಿಕವಂತೂ ಜನರು ಥಿಯೇಟರ್‌ಗಳಿಗೆ ಸಿನಿಮಾ ವೀಕ್ಷಿಸಲು ಬರುವುದು ವಿರಳವಾಗಿದೆ. ಟಿಕೆಟ್‌ ದರ ಹೆಚ್ಚಾಗಿದೆ, ಚಿತ್ರಮಂದಿರಕ್ಕೆ ಹೋದರೆ ತಿಂಡಿ, ಪಾನೀಯ ಅಂತಾ ಡಬಲ್‌ ಖರ್ಚು ಎಂದು ಮನೆಯಲ್ಲಿಯೇ ಕುಳಿತು ಒಟಿಟಿಗಳಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಇದೀಗ ಸಿನಿ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದಿದೆ. ಇನ್ಮುಂದೆ ಸಿನಿಮಾ ಹಾಲ್​ಗಳಲ್ಲಿ ತಿಂಡಿ-ತಿನಿಸು ಮತ್ತು ಪಾನೀಯಗಳ ಬೆಲೆ ತಗ್ಗಲಿದೆ. ಈ ಪದಾರ್ಥಗಳ ಮೇಲಿನ ಜಿಎಸ್​ಟಿ ಕಡಿತ ಮಾಡಲಾಗಿದೆ.

ಇದನ್ನೂ ಓದಿ: ‘ಗೃಹ ಜ್ಯೋತಿʼ ನೋಂದಣಿಗೆ ಡೆಡ್‌ ಲೈನ್‌ ಫಿಕ್ಸ್‌! – ಅರ್ಜಿ ಸಲ್ಲಿಕೆಗೆ ಜು. 27 ಕಡೆಯ ದಿನ?  

ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ತಿಂಡಿ ಮತ್ತು ಪಾನೀಯದ ಬೆಲೆ ದುಬಾರಿ ಎಂಬ ದೂರು ಮೊದಲಿನಿಂದಲೂ ಕೇಳಿಬರುತ್ತಲೇ ಇತ್ತು. ಅದಕ್ಕೆ ಶೇಕಡ 18ರಷ್ಟು ಜಿಎಸ್​ಟಿ ಕೂಡ ಸೇರಿದ್ದರಿಂದ ಇನ್ನಷ್ಟು ದುಬಾರಿ ಆಗಿತ್ತು. ಇದೀಗ ತಿಂಡಿ, ಪಾನೀಯಗಳ ಮೇಲೆ ಹೇರಿದ್ದ ಜಿಎಸ್​ಟಿಯನ್ನು ಕಡಿತ ಮಾಡಲಾಗಿದೆ. ಜಿಎಸ್​ಟಿ (ಸರಕು ಮತ್ತು ಸೇವಾ ತೆರಿಗೆ) ಮಂಡಳಿಯ ಐವತ್ತನೇ ಸಭೆಯಲ್ಲಿ ಕೇಂದ್ರ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದೆ. ಅನೇಕ ವಸ್ತುಗಳ ತೆರಿಗೆಯಲ್ಲಿ ಗಣನೀಯ ಇಳಿಕೆ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಜುಲೈ 11ರಂದು ಸಭೆ ನಡೆಯಿತು. ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಮಲ್ಟಿಪ್ಲೆಕ್ಸ್​ಗಳಲ್ಲಿನ ವ್ಯಾಪಾರ ವೃದ್ಧಿ ಆಗಲಿದೆ. ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ಹೊರೆ ಕಡಿಮೆ ಆಗಲಿದೆ.

ಮಲ್ಟಿಪ್ಲೆಕ್ಸ್​ಗಳಲ್ಲಿ ಶೇಕಡ 5ಕ್ಕೆ ಜಿಎಸ್​ಟಿ ಇಳಿಕೆ ಆಗಿರುವುದರಿಂದ ಪಾಪ್​ ಕಾರ್ನ್​, ಕೂಲ್​ ಡಿಂಗ್ಸ್​ ಮುಂತಾದ ಪದಾರ್ಥಗಳ ಬೆಲೆ ತಗ್ಗಲಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೆ ಇದರಿಂದ ಅನುಕೂಲ ಆಗಲಿದೆ. ತೆರಿಗೆ ಪ್ರಮಾಣದಲ್ಲಿ ಇಳಿಕೆ ಆಗಿರುವುದನ್ನು ಮಲ್ಟಿಪ್ಲೆಕ್ಸ್​ಗಳು ಸ್ವಾಗತಿಸಿವೆ.

ಕೊವಿಡ್​ ಬಂದ ಬಳಿಕ ಲಾಕ್​ಡೌನ್​ನಿಂದ ಮಲ್ಟಿಪ್ಲೆಕ್ಸ್​ಗಳ ಬಿಸ್ನೆಸ್​ ಕುಸಿದಿತ್ತು. ಹಾಗಾಗಿ ಜನರನ್ನು ಸೆಳೆಯಲು ಕೆಲವು ಸಿನಿಮಾಗಳ ಟಿಕೆಟ್​ ಬೆಲೆ ತಗ್ಗಿಸಲಾಗಿತ್ತು. ಆದರೂ ಕೂಡ ಮೊದಲಿನ ರೀತಿಯಲ್ಲಿ ಜನರು ಸಿನಿಮಾ ನೋಡಲು ಬರುತ್ತಿಲ್ಲ ಎಂಬ ಮಾತಿದೆ. ಈಗ ತಿಂಡಿ, ಪಾನೀಯಗಳ ಮೇಲಿನ ಜಿಎಸ್​ಟಿ ಕಡಿಮೆ ಮಾಡಿರುವುದರಿಂದ ಇನ್ಮುಂದೆ ಹೆಚ್ಚಿನ ಜನರು ಮಲ್ಟಿಪ್ಲೆಕ್ಸ್​ಗೆ ಬರುವ ನಿರೀಕ್ಷೆ ಇದೆ.

suddiyaana