ರಾಷ್ಟ್ರ ರಾಜಧಾನಿಯನ್ನು ಆವರಿಸಿತು ದಟ್ಟ ಮಂಜು – ದೆಹಲಿಯಲ್ಲಿ 30 ವಿಮಾನಗಳು ವಿಳಂಬ!

ರಾಷ್ಟ್ರ ರಾಜಧಾನಿಯನ್ನು ಆವರಿಸಿತು ದಟ್ಟ ಮಂಜು – ದೆಹಲಿಯಲ್ಲಿ 30 ವಿಮಾನಗಳು ವಿಳಂಬ!

ದೇಶದಾದ್ಯಂತ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದೆ. ಎಲ್ಲೆಲ್ಲೂ ದಟ್ಟ ಮಂಜು ಆವರಿಸುತ್ತಿದೆ. ದಟ್ಟವಾದ ಮಂಜಿನಿಂದಾಗಿ ವಾಹನ ಸಂಚಾರಕ್ಕೂ ಅಡೆತಡೆ ಉಂಟಾಗುತ್ತಿದೆ. ಭಾರಿ ಮಂಜು ಸುರಿಯುತ್ತಿರುವುದರಿಂದಾಗಿ ಮಂಗಳವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ಮಾರ್ಗವನ್ನು ಬದಲಿಸಲಾಗಿದ್ದು, ಸುಮಾರು 30 ವಿಮಾನಗಳು ವಿಳಂಬಗೊಂಡಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: ನೂಕುನುಗ್ಗಲಿನ ನಡುವೆ ಅಯ್ಯಪ್ಪನ ಭಕ್ತರಿಗೆ ಸಾಲು ಸಾಲು ಸಮಸ್ಯೆ! – ಕುಡಿಯಲು ನೀರಿಲ್ಲ, ತಿನ್ನಲು ಆಹಾರವಿಲ್ಲ!

ದೆಹಲಿಯಲ್ಲಿ ಮಂಗಳವಾರ ಮುಂಜಾನೆ ತಾಪಮಾನ ಸುಮಾರು 7 ಡಿಗ್ರಿಗಳಿಗೆ ಇಳಿದಿದೆ. ದಟ್ಟ ಮಂಜು ಸುರಿಯುತ್ತಿರುವ ಹಿನ್ನೆಲೆಯಲ್ಲಿ ಇಂಡಿಗೋ ಮತ್ತು ಸ್ಪೇಸ್‌ಜೆಟ್‌ನ ತಲಾ ಒಂದು ವಿಮಾನವನ್ನು ಜೈಪುರಕ್ಕೆ ಮಾರ್ಗ ಬದಲಿಸಲಾಗಿದೆ. ದೆಹಲಿ ವಿಮಾನ ನಿಲ್ದಾಣದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಮಂಗಳವಾರ ಬೆಳಿಗ್ಗೆ ಸುಮಾರು 30 ವಿಮಾನಗಳು ವಿಳಂಬವಾಗಿವೆ. ಕಡಿಮೆ ಗೋಚರತೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸುಮಾರು 30 ವಿಮಾನಗಳ ಆಗಮನ ಮತ್ತು ನಿರ್ಗಮನ ಎರಡರಲ್ಲೂ ವಿಳಂಬವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವೀಕರಿಸಿದ ಮಾಹಿತಿಗಾಗಿ ಪ್ರಯಾಣಿಕರು ಸಂಬಂಧಿಸಿದ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ. ಉಂಟಾದ ಯಾವುದೇ ಅಡಚಣೆಗೆ ತೀವ್ರವಾಗಿ ವಿಷಾದಿಸುತ್ತೇವೆ’ ಎಂದು ದೆಹಲಿ ಇಂಟರ್ನ್ಯಾಷನಲ್ ಏರ್‌ಪೋರ್ಟ್‌  ಲಿಮಿಟೆಡ್ (DIAL) ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ಮಂಗಳವಾರ ಬೆಳಿಗ್ಗೆ ದೆಹಲಿ-ಎನ್‌ಸಿಆ‌ರ್ ಪ್ರದೇಶದಲ್ಲಿ ದಟ್ಟವಾದ ಮಂಜು ಕಂಡುಬಂದಿದೆ. ತಾಪಮಾನ ಸುಮಾರು 7 ಡಿಗ್ರಿಗಳಿಗೆ ಇಳಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Shwetha M