ಈ ಹಾವು ಹಾರುತ್ತೆ ಹುಷಾರ್! – ಕರ್ನಾಟಕದಲ್ಲೇ ಇದೆ ಫ್ಲೈಯಿಂಗ್ ಸ್ನೇಕ್

ಈ ಹಾವು ಹಾರುತ್ತೆ ಹುಷಾರ್! – ಕರ್ನಾಟಕದಲ್ಲೇ ಇದೆ ಫ್ಲೈಯಿಂಗ್ ಸ್ನೇಕ್

ಉಡುಪಿ: ಹಾವು. ಈ ಪದ ಕೇಳಿದ್ರೆ ಸಾಕು ಬಹುತೇಕ ಮಂದಿ ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಾರೆ. ಕೆಲವೊಮ್ಮೆ ಯಾರನ್ನಾದರೂ ಹೆದರಿಸಲು ಸುಖಾಸುಮ್ಮನೆ ಹಾವು ಹಾವು ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಹಾವು ಅಂದಾಕ್ಷಣ ನೆಲದ ಮೇಲೋ  ನೀರಿನಲ್ಲೋ ಸಂಚರಿಸೋದು ನೆನಪಾಗುತ್ತದೆ. ಕೆಲವೊಮ್ಮೆ ಮರಗಳ ಮೇಲೆ ಇರೋದನ್ನು ಕಾಣುತ್ತೇವೆ. ಆದರೆ ಎಂದಾದರೂ ಹಾವು ಮರದಲ್ಲೇ ಹುಟ್ಟಿ, ಅಲ್ಲೇ ಬೆಳೆದು, ಮರದಿಂದ ಮರಕ್ಕೆ ಹಾರೋದನ್ನು ಕೇಳಿದ್ದೀರಾ? ಇದೀಗ ಇಂತಹ ಹಾವು ಮಣಿಪಾಲದಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ: ಬಲೆಗೆ ಬಿತ್ತು ಬಂಗಾರದ ಮೀನು! – ಗೋಲ್ಡನ್ ಫಿಶ್ ರೇಟ್ ಎಷ್ಟು ಗೊತ್ತಾ?

ಈ ಹಾವನ್ನು ಫ್ಲೈಯಿಂಗ್ ಸ್ನೇಕ್ ಅಥವಾ ಹಾರುವ ಹಾವು ಅಂತ ಕರೆಯಲಾಗುತ್ತೆ. ಮಣಿಪಾಲದ ಪರ್ಕಳ ಮಾರುಕಟ್ಟೆಯಲ್ಲಿ ಈ ಹಾವು ಪತ್ತೆಯಾಗಿದೆ. ಪರ್ಕಳ ಮಾರುಕಟ್ಟೆಯಲ್ಲಿ ಮರದಿಂದ ತಟ್ಟನೆ ಹಾರಿದೆ. ಈ ಹಾವು ಕಪ್ಪು, ಕೆಂಪು, ಬಿಳಿ ಬಣ್ಣದಿಂದ ಕೂಡಿದ್ದು, ಅಲ್ಲಿನ ಸ್ಥಳೀಯರು ಹಾವನ್ನು ಕಂಡು ಭಯಭೀತರಾಗಿದ್ದಾರೆ.

ಉರಗ ತಜ್ಞ ಗುರುರಾಜ್‌ ಸನಿಲ್‌ ಅವರು  ಹಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಇದು ಪಶ್ಚಿಮಘಟ್ಟ ಮಲೆನಾಡು ಭಾಗದಲ್ಲಿ ಹೆಚ್ಚು ಕಂಡುಬರುತ್ತದೆ. ಕರಾವಳಿಯಲ್ಲಿ ತೀರ ಅಪರೂಪವಾಗಿದೆ. ಇದನ್ನು ಕಂಡು ಕೆಲವರು ಭಯದಿಂದ ಸಾಯಿಸಿದ ಘಟನೆಗಳು ನಡೆದಿದೆ. ಇದು ವಿಷ ರಹಿತ ಹಾವು. ಮರದಲ್ಲೆ ಹುಟ್ಟಿ, ಮರದಲ್ಲೆ ಜೀವಿಸಿ, ಮರದಲ್ಲಿರುವ ಕ್ರಿಮಿ, ಕೀಟ, ಪಕ್ಷಿಗಳ ಮೊಟ್ಟೆಗಳನ್ನು ತಿಂದು ಈ ಹಾವು ಜೀವಿಸುತ್ತದೆ. ಇದಕ್ಕೆ ತುಳು ಭಾಷೆಯಲ್ಲಿ ಪುಲ್ಲಿ ಪುತ್ರ ಎಂದು ಕರೆಯಲಾಗುತ್ತದೆ’ ಎಂದು ಹೇಳಿದ್ದಾರೆ.

ಗುರುರಾಜ್‌ ಅವರ ಸಲಹೆ ಮೇರೆಗೆ ಸ್ಥಳೀಯರಾದ ಹರೀಶ್‌ ಮಡಿವಾಳ, ಸದಾಶಿವ ಮಡಿವಾಳ, ಶಿವರಾಂ ಪೂಜಾರಿ, ಜಯಂತ್‌, ಗಣೇಶ್‌ರಾಜ್‌ ಸರಳೇಬೆಟ್ಟು ಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

suddiyaana