ಪೈಲಟ್ ಸ್ಮಿತ್ ಮಚ್ಛಾರ್ ಚಿಕಿತ್ಸೆಗಾಗಿ ದುಬೈಗೆ ಏರ್ಲಿಫ್ಟ್ -ಗುಜರಾತ್ ಸರ್ಕಾರದಿಂದ ಗುಜರಾತ್ ಗರಿಮಾ ಪ್ರಶಸ್ತಿ

ದುಬೈನಿಂದ ಟೆಲ್ ಅವೀವ್ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ವಿಮಾನದ ಕಾಕ್ಪಿಟ್ನಲ್ಲಿ ಕೋ-ಪೈಲಟ್ನಿಂದ ಚಾಕು ಇರಿತಕ್ಕೊಳಗಾಗಿಯೂ ಸಮಯಪ್ರಜ್ಞೆಯಿಂದ ದುರಂತವನ್ನು ತಪ್ಪಿಸಿದ ಸ್ಮಿತ್ ಮಚ್ಛಾರ್ ಅವರನ್ನು ಸೌದಿ ಅರೇಬಿಯಾದಿಂದ ದುಬೈಗೆ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಏರ್ಲಿಫ್ಟ್ ಮಾಡಲಾಗಿದೆ. ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಕ್ಯಾಪ್ಟನ್ ಸ್ಮಿತ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವರ ಕುಟುಂಬ ಮತ್ತು ಸೌದಿ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ತಬುಕ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಇದೀಗ ಅವರನ್ನು ದುಬೈಗೆ ರವಾನಿಸಲಾಗಿದೆ.
ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ ಗೌರವ
ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸವನ್ನು ಕೊಂಡಾಡಿರುವ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ತಮ್ಮ ‘X’ ಖಾತೆಯಲ್ಲಿ “ತೀವ್ರವಾಗಿ ಗಾಯಗೊಂಡಿದ್ದರೂ 174 ಜನರ ಜೀವ ರಕ್ಷಿಸಲು ಅದಮ್ಯ ಶೌರ್ಯ ತೋರಿದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಧೈರ್ಯವನ್ನು ಇಂದು ಇಡೀ ಜಗತ್ತೇ ಶ್ಲಾಘಿಸುತ್ತಿದೆ. ಗುಜರಾತಿನ ಈ ಧೀರ ಪುತ್ರ ತನ್ನ ಅಪ್ರತಿಮ ಸಾಹಸದ ಮೂಲಕ ರಾಜ್ಯ ಹಾಗೂ ರಾಷ್ಟ್ರದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ. ಅವರ ಅಸಾಧಾರಣ ಶೌರ್ಯ ಮತ್ತು ಮಾನವೀಯ ಕಾರ್ಯವನ್ನು ಗೌರವಿಸಲು ‘ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ’ ನೀಡಲಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ರೇಷನ್ ಕಾರ್ಡ್ E-KYCಗೆ ಬಂತು ಆ್ಯಪ್ – ಮೊಬೈಲ್ನಲ್ಲೇ ಮಾಡಿ ಇ-ಕೆವೈಸಿ
ಆಗಿದ್ದೇನು?
ದುಬೈನಿಂದ ಇಸ್ರೇಲ್ನ ಟೆಲ್ ಅವೀವ್ಗೆ ಹೊರಟಿದ್ದ ‘ಫ್ಲೈದುಬೈ’ (Flydubai) ಸಂಸ್ಥೆಯ FZ1073 ವಿಮಾನದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿತ್ತು. ವಿಮಾನ ಹಾರಾಟ ನಡೆಸುತ್ತಿದ್ದಾಗ ಕಾಕ್ಪಿಟ್ನಲ್ಲಿದ್ದ ಒಮಾನಿ ಮೂಲದ ಸಹ-ಪೈಲಟ್, ವಿಮಾನವನ್ನು ಅಪಘಾತಕ್ಕೀಡುಮಾಡುವ ದುರುದ್ದೇಶದಿಂದ ಮುಖ್ಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ಚಾಕುವಿನಿಂದ ದಿಢೀರ್ ಭೀಕರ ದಾಳಿ ನಡೆಸಿದನು.
ತೀವ್ರವಾಗಿ ಗಾಯಗೊಂಡು ರಕ್ತಸಿಕ್ರವಾಗಿದ್ದರೂ ಧೈರ್ಯಗುಂದದ ಕ್ಯಾಪ್ಟನ್ ಮಚ್ಚರ್, ಸಹ-ಪೈಲಟ್ನೊಂದಿಗೆ ದಿಟ್ಟ ಹೋರಾಟ ನಡೆಸಿ ಅವನನ್ನು ಮಟ್ಟಹಾಕಿದರು. ಬಳಿಕ ಸಮಯಪ್ರಜ್ಞೆ ಮೆರೆದು ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನನಿಲ್ದಾಣಕ್ಕೆ ಸುರಕ್ಷಿತವಾಗಿ ಕೊಂಡೊಯ್ದು ತುರ್ತು ಭೂಸ್ಪರ್ಶ ಮಾಡಿದರು. ಪರಿಣಾಮವಾಗಿ ವಿಮಾನದಲ್ಲಿದ್ದ 174 ಪ್ರಯಾಣಿಕರು ಮತ್ತು ಸಿಬ್ಬಂದಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನೋಡಿರಿ

