ವಿಮಾನ ಸಿಬ್ಬಂದಿಗಳು, ಪೈಲಟ್‌ಗಳು ಮೌತ್‌ ವಾಶ್‌, ಟೂತ್‌ ಜೆಲ್‌, ಸುಗಂಧ ದ್ರವ್ಯ ಬಳಸುವಂತಿಲ್ಲ! – ಏನಿದು ಹೊಸ ರೂಲ್ಸ್‌?

ವಿಮಾನ ಸಿಬ್ಬಂದಿಗಳು, ಪೈಲಟ್‌ಗಳು ಮೌತ್‌ ವಾಶ್‌, ಟೂತ್‌ ಜೆಲ್‌, ಸುಗಂಧ ದ್ರವ್ಯ ಬಳಸುವಂತಿಲ್ಲ! – ಏನಿದು ಹೊಸ ರೂಲ್ಸ್‌?

ನವದೆಹಲಿ: ವಿಮಾನ ಸಿಬ್ಬಂದಿಗೆ ಹಾಗೂ ಪೈಲೆಟ್‌ಗಳಿಗೆ ಉಸಿರಾಟದ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಲಾಗುತ್ತದೆ. ಇದೀಗ ಉಸಿರಾಟದ ಪರೀಕ್ಷೆ ವಿಚಾರವಾಗಿ ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯ ಮಹತ್ವದ ನಿಯಮವೊಂದನ್ನು ಜಾರಿಗೆ ತರಲು ಮುಂದಾಗಿದೆ. ಉಸಿರಾಟದ ಪರೀಕ್ಷೆ ಸಂದರ್ಭದಲ್ಲಿ ವಿಮಾನದ ಪೈಲಟ್‌ ಗಳು ಹಾಗೂ ಸಿಬ್ಬಂದಿಗಳು ಸುಗಂಧ ದ್ರವ್ಯಗಳನ್ನು ಬಳಕೆ ಮಾಡಬಾರದು ಎಂದು ಸೂಚಿಸಿದೆ.

ವಿಮಾನ ಸಿಬ್ಬಂದಿಗಳು ಸುಗಂಧ ದ್ರವ್ಯ ಬಳಕೆ ಮಾಡದಿರುವಂತೆ ನಿರ್ಬಂಧ ವಿಧಿಸಲು ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯ ಪ್ರಸ್ತಾವಿತ ಕರಡನ್ನು ಸಿದ್ಧಪಡಿಸಿರುವುದಾಗಿ ವರದಿಯಾಗಿದೆ. ಸುಗಂಧದ್ರವ್ಯಗಳು ಸಾಮಾನ್ಯವಾಗಿ ಅತಿಯಾದ ಆಲ್ಕೋಹಾಲ್‌ ಅಂಶವನ್ನು ಹೊಂದಿದ್ದು, ಇದರಿಂದ ಉಸಿರಾಟದ ಪರೀಕ್ಷೆ ಮೇಲೆ ಪರಿಣಾಮ ಬೀರಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸಿದ್ಧಪಡಿಸಿರುವ ಪ್ರಸ್ತಾವಿತ ಡ್ರಾಪ್ಟ್‌ ನಲ್ಲಿ ವಿವರಿಸಿದೆ.

ಇದನ್ನೂ ಓದಿ: ಮಗುವಿಗೆ ಹೆಸರಿಡುವ ವಿಚಾರದಲ್ಲಿ ದಂಪತಿ ಮಧ್ಯೆ ಕಲಹ! – ಶಿಶುವಿಗೆ ತಾನೇ ಹೆಸರು ಸೂಚಿಸಿದ ಹೈಕೋರ್ಟ್‌!

ಎಎನ್‌ ಐ ವರದಿಯಂತೆ ನೂತನ ಕರಡಿನಲ್ಲಿ, ವಿಮಾನದ ಪೈಲಟ್‌ ಗಳಾಗಲಿ ಅಥವಾ ಸಿಬ್ಬಂದಿಗಳಾಗಲಿ ಯಾವುದೇ ಔಷಧಗಳು, ಮೌತ್‌ ವಾಶ್‌, ಟೂತ್‌ ಜೆಲ್‌, ಸುಗಂಧ ದ್ರವ್ಯದಂತಹ ವಸ್ತುಗಳನ್ನು ಸೇವನೆ ಮಾಡಬಾರದು. ಇದರಲ್ಲಿ ಅಲ್ಕೋಹಾಲ್‌ ಅಂಶ ಇರುವುದರಿಂದ ಉಸಿರಾಟದ ಪರೀಕ್ಷೆ ವೇಳೆ ಪಾಸಿಟಿವ್‌ ವರದಿ ಬರುವ ಸಾಧ್ಯತೆ ಇರುತ್ತದೆ. ಪೈಲಟ್‌ ಗಳು, ಸಿಬಂದಿಗಳು ವಿಮಾನದಲ್ಲಿ ಕಾರ್ಯನಿರ್ವಹಿಸುವ ಮೊದಲು ಕಂಪನಿಯ ವೈದ್ಯರನ್ನು ಸಂಪರ್ಕಿಸಿ ಉಸಿರಾಟದ ಪರೀಕ್ಷೆಗೆ ಒಳಗಾಗಬೇಕು ಎಂದು ಡಿಜಿಸಿಎ ಡ್ರಾಪ್ಟ್‌ ನಲ್ಲಿ ಉಲ್ಲೇಖಿಸಿದೆ.

ಇದೊಂದು ಕೇವಲ ನಾಗರಿಕ ವಿಮಾನಯಾನದ ಅಗತ್ಯತೆಯ (CAR) ಡ್ರಾಪ್ಟ್‌ ಆಗಿದ್ದು, ಈ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ಪಡೆಯಲಾಗುವುದು ಎಂದು ಡಿಜಿಸಿಎ ತಿಳಿಸಿದೆ.

Shwetha M