ಅಯ್ಯಯ್ಯೋ.. ಇದು ಮೌತ್ ಫ್ರೆಶ್ನರಾ.. ಇಲ್ಲಾ ವಿಷನಾ..? – ಐವರಿಗೆ ರಕ್ತ ವಾಂತಿ.. ಇಬ್ಬರ ಸ್ಥಿತಿ ಗಂಭೀರ

ಹೋಟೆಲ್ನಲ್ಲಿ ಊಟ ಮಾಡಿದ ಬಳಿಕ ಅನೇಕರು ಮೌತ್ ಫ್ರೆಶ್ನರ್ ತಿನ್ನುತ್ತಾರೆ.. ಆದ್ರೆ ಇಲ್ಲೊಂದು ಕಡೆ ಈ ಮೌತ್ ಫ್ರೆಶ್ನರ್ ನಿಂದ ಜೀವಕ್ಕೆ ಕಂಟಕ ಎದುರಾಗಿದೆ. ಮೌತ್ ಫ್ರೆಶ್ನರ್ ತಿಂದು ಐವರು ರಕ್ತ ವಾಂತಿ ಮಾಡಿಕೊಂಡಿದ್ದಾರೆ.
ಹರ್ಯಾಣದ ಗುರುಗ್ರಾಮದ ಸೆಕ್ಟರ್ 90ರಲ್ಲಿರುವ ಲಾಫೊರೆಸ್ಟಾ ಕೆಫೆಯಲ್ಲಿ ಈ ಘಟನೆ ನಡೆದಿದೆ. ಅಂಕಿತ್ ಕುಮಾರ್ ದಂಪತಿ ಹಾಗೂ ಅವರ ಮೂವರು ಸ್ನೇಹಿತರು ಹೋಟೆಲಿಗೆ ತೆರಳಿ ಆಹಾರ ಸೇವಿಸಿದ್ದಾರೆ. ಊಟದ ಬಳಿಕ ಟೇಬಲ್ ಮೇಲೆ ಇಟ್ಟಿದ್ದ ಮೌತ್ ಫ್ರೆಶ್ನರ್ ತಗೊಂಡು, ಅದನ್ನು ಬಾಯಿಗೆ ಹಾಕಿಕೊಂಡಿದ್ದಾರೆ. ಮೌತ್ ಫ್ರೆಶ್ನರ್ ತಿಂದ ಕೆಲವೇ ಹೊತ್ತಲ್ಲಿ ಐವರ ಬಾಯಿಯಲ್ಲಿ ಸುಡುವ ಅನುಭವವಾಗಿದೆ. ಕೂಡಲೇ ಅದನ್ನು ಹೊರಗೆ ಉಗುಳಿದ್ದಾರೆ. ಇದರ ಬೆನ್ನಲ್ಲೇ ಒಬ್ಬರು ರಕ್ತ ವಾಂತಿ ಮಾಡಿದ್ದಾರೆ. ಇದಕ್ಕೆ ಪರಿಹಾರ ಹುಡುಕಲು ಬಾಯಿಗೆ ನೀರು ಹಾಕಿಕೊಂಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಚಂದ್ರಯಾನಕ್ಕಾಗಿ ಜೀವ ಪಣಕ್ಕಿಟ್ರಾ ಇಸ್ರೋ ಅಧ್ಯಕ್ಷ – ಎಸ್.ಸೋಮನಾಥ್ ಅವರ ಈ ಸಂಗತಿ ಗೊತ್ತಾದ್ರೆ ಸೆಲ್ಯೂಟ್ ಹೊಡೀತೀರಾ!
ಘಟನೆಯ ವೀಡಿಯೋ ವೈರಲ್ ಆಗಿದ್ದು, ಅಂಕಿತ್ ಕುಮಾರ್ ಅವರ ಪತ್ನಿ ಹಾಗೂ ಸ್ನೇಹಿತರು ನಾಲಿಗೆ ಸುಟ್ಟ ಅನುಭವದಿಂದ ಅಳುತ್ತಿರುವುದು ಕಿರುಚುತ್ತಿರುವುದು ಕಾಣಿಸುತ್ತಿದೆ. ಅದರಲ್ಲೂ ಓರ್ವ ವ್ಯಕ್ತಿ ರೆಸ್ಟೋರೆಂಟ್ನ ಪ್ಲೋರ್ ಮೇಲೆಯೇ ವಾಂತಿ ಮಾಡಿದ್ದಾರೆ. ಮತ್ತೊಬ್ಬರು ಹೀಗೆ ಸುಟ್ಟ ಅನುಭವವಾದವರಿಗೆ ಐಸ್ ನೀಡಿ ಸಮಾಧಾನಿಸುವುದು ಕಂಡು ಬಂದಿದೆ. ಕೆಲವರು ಮೌತ್ ಫ್ರೆಶ್ನರ್ ತಿಂದ ಮೇಲೆ ಬಾಯಿ ಸುಡುತ್ತಿದೆ ಎಂದು ಹೇಳುತ್ತಿರುವುದು ಕಂಡು ಬಂದಿದೆ.
ಮೌತ್ ಪ್ರಶ್ನರ್ನಲ್ಲಿ ಅವರು ಏನು ಮಿಶ್ರಣ ಮಾಡಿದ್ದರೋ ಗೊತ್ತಿಲ್ಲ, ಇಲ್ಲಿ ಅದನ್ನು ಸೇವಿಸಿದ ಪ್ರತಿಯೊಬ್ಬರು ವಾಂತಿ ಮಾಡ್ತಿದ್ದಾರೆ. ತಿಂದವರ ಬಾಯೆಲ್ಲಾ ಸುಟ್ಟ ಅನುಭವವಾಗಿದೆ. ಅವರು ಯಾವ ರೀತಿಯ ಆಸಿಡ್ ನಮಗೆ ನೀಡಿದ್ದಾರೆ ಎಂದು ಗೊತ್ತಿಲ್ಲ ಎಂದು ಕುಮಾರ್ ಹೇಳಿದ್ದಾರೆ.
ಆರಂಭದಲ್ಲಿ ವಾಂತಿಯಾದ ನಂತರ ನಾಲಗೆ ಸುಟ್ಟಂತ ಅನುಭವವಾಗಿದ್ದು, ಬಾಯನ್ನು ನೀರಲ್ಲಿ ತೊಳೆದ ನಂತರವೂ ಒಂಥರ ಕಿರಿಕಿರಿಯ ಅನುಭವವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯ್ತು, ಅದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತರು ದೂರು ನೀಡಿದ ಹಿನ್ನೆಲೆ ಪೊಲೀಸರು ಹೊಟೇಲ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.