ಚಾಮರಾಜನಗರದಲ್ಲಿ ಹುಲಿ ಕಾಟ – ಎರಡು ದಿನ ಶಾಲೆ, ಅಂಗಡಿ, ಜನರ ಓಡಾಟ ಬಂದ್

ಚಾಮರಾಜನಗರ ತಾಲೂಕಿನ ನಂಜೇದೇವನಪುರ ಗ್ರಾಮದ ಕುಮಾರಸ್ವಾಮಿ ಅವರ ಜಮೀನಿನಲ್ಲಿ ಹುಲಿಗಳ ಓಡಾಟ ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಹೀಗಾಗಿ ಅರಣ್ಯ ಇಲಾಖೆ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಆರಂಭಿಸಿದೆ. ಕಾರ್ಯಾಚರಣೆಯ ಸಮಯದಲ್ಲಿ ಸಾರ್ವಜನಿಕರ ಸುರಕ್ಷತೆ ಕಾಪಾಡುವ ಉದ್ದೇಶದಿಂದ, ನಂಜೇದೇವನಪುರ, ಉಡಿಗಾಲ ಹಾಗೂ ವೀರನಪುರ ಗ್ರಾಮಗಳಲ್ಲಿ ಡಿಸೆಂಬರ್ 22 ಮತ್ತು 23ರಂದು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಚಾಮರಾಜನಗರ ತಹಸಿಲ್ದಾರ್ ಗಿರಿಜಾ ಅವರು ಈ ಸಂಬಂಧ ಆದೇಶ ಹೊರಡಿಸಿದ್ದು, ಕಾರ್ಯಾಚರಣೆ ಮುಗಿಯುವವರೆಗೆ ಗ್ರಾಮಸ್ಥರು ಅನಾವಶ್ಯಕವಾಗಿ ಹೊರಗಡೆ ಸಂಚರಿಸದಂತೆ ಖಡಕ್ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: 68ನೇ ವಯಸ್ಸಿನಲ್ಲಿ 58ರ ಆಂಟಿ ಕೈ ಹಿಡಿದ ಅಪ್ಪ – ಇಳಿವಯಸ್ಸಿನ ಅಂಕಲ್ ಮದುವೆಗೆ ಮಕ್ಕಳ ಗಲಾಟೆ
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ತಜ್ಞ ಸಿಬ್ಬಂದಿ ಹಾಗೂ ವನ್ಯಜೀವಿ ತಜ್ಞರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಹುಲಿಗಳನ್ನು ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ ಮರಳಿಸುವ ಉದ್ದೇಶ ಹೊಂದಿದೆ. ಹುಲಿಗಳ ಚಲನವಲನವನ್ನು ಗಮನಿಸಲು ಡ್ರೋನ್ ಕ್ಯಾಮೆರಾ, ಟ್ರ್ಯಾಪ್ ಕ್ಯಾಮೆರಾ ಸೇರಿದಂತೆ ಆಧುನಿಕ ಉಪಕರಣಗಳನ್ನು ಬಳಕೆ ಮಾಡಲಾಗುತ್ತಿದೆ. ಜೊತೆಗೆ, ಗ್ರಾಮಗಳ ಸುತ್ತಮುತ್ತ ಬೋನುಗಳನ್ನು ಅಳವಡಿಸಲಾಗಿದ್ದು, ರಾತ್ರಿ ಸಮಯದಲ್ಲಿ ಹೆಚ್ಚಿನ ನಿಗಾವಹಿಸಲಾಗಿದೆ. ಗ್ರಾಮಸ್ಥರ ಸುರಕ್ಷತೆ ದೃಷ್ಟಿಯಿಂದ ಶಾಲೆಗಳು, ಅಂಗಡಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿ ತಪ್ಪಿಸುವಂತೆ ಸೂಚನೆ ನೀಡಲಾಗಿದೆ.
ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಂಯುಕ್ತವಾಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಅಗತ್ಯವಿದ್ದಲ್ಲಿ ತುರ್ತು ಪರಿಸ್ಥಿತಿಗೆ ಸ್ಪಂದಿಸಲು ಆರೋಗ್ಯ ಇಲಾಖೆ ಸಿಬ್ಬಂದಿಯನ್ನೂ ಸಿದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಈ ಹಿಂದೆ ಸಹ ಈ ಪ್ರದೇಶದಲ್ಲಿ ವನ್ಯಜೀವಿಗಳ ಓಡಾಟ ಕಂಡುಬಂದಿದ್ದು, ಕಾಡಿಗೆ ಸಮೀಪವಿರುವ ಜಮೀನುಗಳಲ್ಲಿ ಕೃಷಿ ಮಾಡುತ್ತಿರುವ ರೈತರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ನೋಡಿರಿ

