ಮೋದಿ ಅಲೆಯನ್ನೇ ನೆಚ್ಚಿಕೊಂಡ ಬಿಜೆಪಿಗೆ ಚುನಾವಣೆಗಳಲ್ಲಿ ನಷ್ಟ – ಕಾಂಗ್ರೆಸ್ ಕೈ ಹಿಡಿಯುತ್ತಿದೆ ಗ್ಯಾರಂಟಿಗಳ ಘೋಷಣೆ

ಮೋದಿ ಅಲೆಯನ್ನೇ ನೆಚ್ಚಿಕೊಂಡ ಬಿಜೆಪಿಗೆ ಚುನಾವಣೆಗಳಲ್ಲಿ ನಷ್ಟ – ಕಾಂಗ್ರೆಸ್ ಕೈ ಹಿಡಿಯುತ್ತಿದೆ ಗ್ಯಾರಂಟಿಗಳ ಘೋಷಣೆ

ಪಂಚರಾಜ್ಯ ಚುನಾವಣೆಗೆ ಸಂಬಂಧಿಸಿದಂತೆ ಎಬಿಪಿ ಸಿ-ವೋಟರ್​ ಸಮೀಕ್ಷೆ ಹೊರಬಿದ್ದಿದ್ದು, ಐದು ರಾಜ್ಯಗಳ ಪೈಕಿ ಕಾಂಗ್ರೆಸ್​ ಮೂರರಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. 5 ರಾಜ್ಯಗಳ ಪೈಕಿ ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಈಗಾಗಲೇ ಕಾಂಗ್ರೆಸ್‌ ಆಡಳಿತವಿದೆ. ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್​ಗೆ ಅಧಿಕಾರ ಉಳಿಸಿಕೊಳ್ಳುವ ಸವಾಲಿದೆ. ಮಧ್ಯ ಪ್ರದೇಶದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು, ಆಡಳಿತ ವಿರೋಧಿ ಅಲೆ ಎದುರಾಗಿದೆ.  ತೆಲಂಗಾಣದಲ್ಲಿ ಕೆ. ಚಂದ್ರಶೇಖರ್‌ ರಾವ್‌ ನೇತೃತ್ವದ ಬಿಆರ್‌ಎಸ್‌ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ಮತ್ತೆ ಪೈಪೋಟಿ ಕೊಡುವ ಸಾಧ್ಯತೆ ಇದೆ. ಪ್ರಾದೇಶಿಕ ಪಕ್ಷ ಮಿಜೋ ನ್ಯಾಷನಲ್‌ ಫ್ರಂಟ್‌ ಆಡಳಿತವಿರುವ ಮಿಜೋರಾಂನಲ್ಲಿ ಹತ್ತಾರು ಲೆಕ್ಕಾಚಾರಗಳು ನಡೀತಿವೆ. ಆದ್ರೀಗ ಮತದಾನಕ್ಕೂ ಮುನ್ನ ನಡೆದಿರುವ ಸಮೀಕ್ಷೆಯೇ ರಾಜಕೀಯ ವಲಯದಲ್ಲಿ ಹತ್ತಾರು ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ : ಪಂಚರಾಜ್ಯಗಳ ಮತದಾನ ಪೂರ್ವ ಸಮೀಕ್ಷೆ ಫಲಿತಾಂಶ – ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಗೆಲುವು..?

ಬಿಜೆಪಿ ಪಕ್ಷದಲ್ಲಿ ಮೋದಿಯವರ ವರ್ಚಸ್ಸನ್ನ ಮಾತ್ರ ಮುನ್ನಲೆಗೆ ತಂದು ಚುನಾವಣೆ ನಡೆಸಲಾಗುತ್ತಿದೆ ಎಂಬ ಆರೋಪವಿದೆ. ಕೇಂದ್ರದಲ್ಲಿ 2014ರಿಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು,  ಪ್ರಧಾನಿಯಾದ ಬಳಿಕ ಮೋದಿಯವರ ಹೆಸರಲ್ಲೇ ಮತ ಬೇಟೆ ನಡೀತಾ ಇದೆ. ಮೋದಿ ಹೆಸರಲ್ಲೇ ಬಿಜೆಪಿ ಚುನಾವಣೆ ಸ್ಪರ್ಧಿಸ್ತಿದೆ. ಸ್ಥಳೀಯವಾಗಿ ಪ್ರಬಲ ನಾಯಕರಾಗಿದ್ದ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ, ಛತ್ತೀಸ್‌ಗಢದ ಮಾಜಿ ಸಿಎಂ ರಮಣ್ ಸಿಂಗ್ಕರ್ನಾಟಕದ ಮಾಜಿ ಸಿಎಂ ಯಡಿಯೂರಪ್ಪನವರಂತಹ ಪ್ರಬಲ ನಾಯಕರ ಕಡೆಗಣನೆಯಾಗಿದ್ದಾರೆ. ಯಡಿಯೂರಪ್ಪ ಕಡೆಗಣನೆಯೇ ಕರ್ನಾಟಕದಲ್ಲಿ ಸೋಲಿಗೆ ಕಾರಣ ಎಂಬ ಅಭಿಪ್ರಾಯ ಕೇಳಿ ಬಂದಿತ್ತು. ಅದ್ರಂತೆಯೇ ಇತರೆ ರಾಜ್ಯಗಳಲ್ಲಿ ಪ್ರಭಾವಿ ಹಿರಿಯ ನಾಯಕರನ್ನ ಕಡೆಗಣಿಸಿದ ಆರೋಪ ಕೇಳಿ ಬರ್ತಿದೆ.  ಅಲ್ಲದೆ ಚುನಾವಣೆಯನ್ನು ಗೆಲ್ಲಲು ಯಾವುದೇ ಹಂತಕ್ಕೆ ಬೇಕಾದ್ರೂ ಬಿಜೆಪಿ ಹೋಗುತ್ತೆ.  ಬಿಜೆಪಿ ಚುನಾವಣಾ ಯಂತ್ರವಾಗಿ ಮಾರ್ಪಟ್ಟಿದೆ ಅನ್ನೋ ಆರೋಪ ಕೂಡ ಇದೆ. 2018ರಲ್ಲಿ ಕರ್ನಾಟಕ, ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಜನಾದೇಶ ಇರಲಿಲ್ಲ. ಆದರೆ ಎರಡೂ ರಾಜ್ಯಗಳಲ್ಲಿ ಆಪರೇಷನ್‌ ಕಮಲದ ಮೂಲಕ ಸರ್ಕಾರ ರಚಿಸಿತ್ತು.

ರಾಜಸ್ಥಾನದಲ್ಲೂ ಇದೇ ರೀತಿಯ ಪ್ರಯತ್ನಗಳನ್ನು ಮಾಡಿದ್ರೂ ವರ್ಕೌಟ್ ಆಗಿರಲಿಲ್ಲ. ಕೊನೆಗೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿತ್ತು.  ಆಪರೇಷನ್‌ ಕಮಲದ ಬಳಿಕ ಜನರಿಗೆ ಬಿಜೆಪಿ ಮೇಲಿನ ಅಭಿಪ್ರಾಯ ಬದಲಾವಣೆಯಾಗಿದೆ. ಮಧ್ಯಪ್ರದೇಶದಲ್ಲೂ ಆಪರೇಷನ್ ಕಮಲದ ಎಫೆಕ್ಟ್ ಆಗಲಿದ್ದು ಬಿಜೆಪಿಗೆ ಸೋಲಾಗಬಹುದು ಎಂಬ ಚರ್ಚೆಯಾಗ್ತಿದೆ.   ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್ ನಿಡ್ತಿದೆ. ಸಮೀಕ್ಷೆಯಲ್ಲಿ ಸಂಸದರಿಗೆ ಟಿಕೆಟ್ ಕೊಟ್ಟಿರುವ ಬಗ್ಗೆಯೂ ಮತದಾರರ ಅಸಮಾಧಾನ ವ್ಯಕ್ತವಾಗಿದೆ. ಈ ಎಲ್ಲಾ ಕಾರಣಗಳಿಂದ ಬಿಜೆಪಿ ವರ್ಚಸ್ಸು ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ಬಿಜೆಪಿ ಪಕ್ಷ ಪ್ರಧಾನಿ ಮೋದಿ ಅವರ ಮೇಲೆಯೇ ತೀವ್ರವಾಗಿ ಅವಲಂಬಿತವಾಗಿದೆ. ಸ್ಥಳೀಯ ಅಥವಾ ರಾಜ್ಯ ಮಟ್ಟದ ನಾಯಕರನ್ನು ಬಿಜೆಪಿ ಹೈಕಮಾಂಡ್‌ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಬಿಜೆಪಿಯ ಕೇಂದ್ರ ನಾಯಕತ್ವವು ಅಧಿಕಾರ ಕೇಂದ್ರಿಕರಣದತ್ತ ಸಾಗುತ್ತಿದೆ. ದೆಹಲಿ ಕೇಂದ್ರಿತ ರಾಜಕಾರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಇದು ಬಿಜೆಪಿಗೆ ನಷ್ಟ ಉಂಟು ಮಾಡುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇದೇ ವೇಳೆ ಕಾಂಗ್ರೆಸ್ ಪರ ಅಲೆಯೂ ಎದ್ದಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕಾಂಗ್ರೆಸ್‌ ಪಕ್ಷದಲ್ಲಿ ರಾಜಕೀಯ ವಿಕೇಂದ್ರೀಕರಣ, ಸ್ಥಳೀಯ ನಾಯಕರಿಗೆ ಮಹತ್ವ ನೀಡಲು ತೀರ್ಮಾನಿಸಲಾಗಿದೆ.  ಕರ್ನಾಟಕ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಇದು ಸಾಬೀತಾಗಿದೆ. ಸ್ಥಳೀಯ ನಾಯಕತ್ವ ಹಾಗೂ ಸ್ಥಳೀಯ ಸಮಸ್ಯೆಗಳನ್ನು ಮುನ್ನಲೆಗೆ ತಂದು ಚುನಾವಣೆ ಸ್ಪರ್ಧಿಸಲು ಮುಮದಾಗಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ಭಾರಿ ಕಷ್ಟದಲ್ಲಾದ್ರೂ  ಗೆಲುವಿನ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ. ಛತ್ತೀಸ್​ಗಡದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ ಅಭಿವೃದ್ಧಿಗಳನ್ನೇ ಮುಂದಿಟ್ಟು ಪ್ರಚಾರ ನಡೆಸಲಾಗ್ತಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆಯೇ ಕಾಂಗ್ರೆಸ್ ಗೆ ಪ್ಲಸ್ ಆಗಬಹುದು.ತೆಲಂಗಾಣದಲ್ಲೂ ಕರ್ನಾಟಕ ಮಾಡೆಲ್​ ನಂತೆ ಕಾಂಗ್ರೆಸ್ ನಿಂದ 6 ಗ್ಯಾರಂಟಿಗಳ ಘೋಷಣೆ ಮಾಡಲಾಗಿದೆ.  ಮಿಜೋರಾಮ್ ನಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯದ ನಡುವೆ ಪ್ರಬಲ ಪೈಪೋಟಿ ಇದೆ.

ಇನ್ನು ಮಂಗಳವಾರ ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ಭರ್ಜರಿ ಆಫರ್ ಕೊಟ್ಟಿದೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರಿಗೆ 2 ಲಕ್ಷ ರೂಪಾಯಿವರೆಗೆ ಕೃಷಿ ಸಾಲಗಳನ್ನು ಮನ್ನಾ ಮಾಡುವುದಾಗಿ ಪ್ರಕಟಿಸಿದ್ದಾರೆ. ಹಾಗೇ ಕರ್ನಾಟದಕದಲ್ಲಿ ಗೃಹಲಕ್ಷ್ಮಿ, ತೆಲಂಗಾಣದಲ್ಲಿ ಮಹಾಲಕ್ಷ್ಮಿ ಯೋಜನೆಯಂತೆ ಮಧ್ಯಪ್ರದೇಶದಲ್ಲಿ ಮಹಿಳೆಯರಿಗೆ ತಿಂಗಳಿಗೆ 1,500 ರೂಪಾಯಿ ಪ್ರೋತ್ಸಾಹಧನ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ. 500 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್, ರಾಜ್ಯದ ಪ್ರತಿಯೊಬ್ಬ ನಾಗರೀಕರಿಗೂ 25 ಲಕ್ಷ ಆರೋಗ್ಯ ವಿಮೆ, ಒಬಿಸಿಗಳಿಗೆ ಶೇ. 27 ಮೀಸಲಾತಿ ಸೌಲಭ್ಯ ಒದಗಿಸುವುದಾಗಿ  ತಿಳಿಸಿದೆ. 106 ಪುಟಗಳ ಪ್ರಣಾಳಿಕೆಯಲ್ಲಿ ಹಳೆಯ ಪಿಂಚಣಿ ಯೋಜನೆ ಅನುಷ್ಠಾನ, ಪ್ರತಿ ಮನೆಗೆ 100 ಯೂನಿಟ್​ವರೆಗೆ ಉಚಿತ ವಿದ್ಯುತ್ , 200 ಯೂನಿಟ್​ವರೆಗೆ ಅರ್ಧದಷ್ಟು ವಿದ್ಯುತ್ ಬಿಲ್, ರೈತರಿಂದ ಗೋಧಿಯನ್ನು ಕ್ವಿಂಟಾಲ್​ಗೆ 2,600ರೂ, ಹಾಗೂ ಭತ್ತವನ್ನು 2,500 ರೂ ನೀಡಿ ಖರೀದಿಸುವ ಭರವಸೆ ನೀಡಿದೆ. ಅಷ್ಟೇ ಅಲ್ಲದೆ ಮಧ್ಯಪ್ರದೇಶದಲ್ಲಿ ಕ್ರಿಕೆಟ್ ಸೇರಿ, ಕ್ರೀಡೆಗೆ ಉತ್ತೇಜನ ನೀಡಲು ಮಧ್ಯಪ್ರದೇಶಕ್ಕೆ ಒಂದು ಐಪಿಎಲ್ ತಂಡವನ್ನು ರಚಿಸುವುದಾಗಿ ಸರ್ಕಾರವೇ ಭರವಸೆ ನೀಡಿದೆ. ಹೀಗೆ ಗ್ಯಾರಂಟಿಗಳ ಘೋಷಣೆಯಿಂದಲೇ ಕಾಂಗ್ರೆಸ್​ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೆ ಎನ್ನಲಾಗ್ತಿದೆ. ಅಲ್ಲದೆ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು INDIA ಹೆಸರಿನ ಮಹಾಮೈತ್ರಿ ಕೂಟ ರಚಿಸಿಕೊಂಡ ಬಳಿಕ ಘೋಷಿಸಿದ ಮೊದಲ ಚುನಾವಣೆ ಇದಾಗಿದೆ. ಹೀಗಾಗಿ ಮೈತ್ರಿ ಕೂಟಕ್ಕೆ ಇದು ಸತ್ವ ಪರೀಕ್ಷೆಯೂ ಆಗಲಿದೆ. ಮತ್ತೊಂದೆಡೆ ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯಬೇಕು ಅಂದ್ರೆ ಈ ಪಂಚರಾಜ್ಯಗಳ ಪೈಕಿ ಕನಿಷ್ಠ ಎರಡು ರಾಜ್ಯಗಳನ್ನಾದ್ರೂ ಗೆಲ್ಲುವ ಸವಾಲು ಬಿಜೆಪಿಗೆ ಇದೆ. ಹಾಗೇ ಎಲ್ಲಾ ರಾಜ್ಯಗಳಲ್ಲೂ ಸ್ಥಾನಗಳನ್ನ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಈ ಎಲ್ಲಾ ಕಾರಣಗಳಿಂದ ಪಂಚರಾಜ್ಯಗಳ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಪ್ರತಿಷ್ಠೆಗೂ ಕಾರಣವಾಗಿದೆ.

Shantha Kumari