ಐದು ದಿನಗಳ ನಿರಂತರ ಪ್ರಯತ್ನ ಯಶಸ್ವಿ – ಮೂರು ಚಿರತೆ ಮರಿಗಳನ್ನು ಮತ್ತೆ ತಾಯಿ ಬಳಿ ಸೇರಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಐದು ದಿನಗಳ ನಿರಂತರ ಪ್ರಯತ್ನ ಯಶಸ್ವಿ – ಮೂರು ಚಿರತೆ ಮರಿಗಳನ್ನು ಮತ್ತೆ ತಾಯಿ ಬಳಿ ಸೇರಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಪುಟ್ಟ ಮಕ್ಕಳಿಗೇ ಆಗಲಿ, ಪ್ರಾಣಿಗಳ ಮರಿಗಳಿಗೇ ಆಗಲಿ. ಅಮ್ಮನ ಪ್ರೀತಿಯೇ ದೊಡ್ಡ ಆಸರೆ. ಅದರಲ್ಲೂ ಹಾಲು ಕುಡಿಯುವ ಮಕ್ಕಳೋ ಅಥವಾ ಪ್ರಾಣಿಗಳೋ ಇದ್ದರೆ ಅವುಗಳಿಗೆ ತಾಯಿ ಮಡಿಲು ಬೇಕೇ ಬೇಕು. ಇಲ್ಲದಿದ್ದರೆ ಅವುಗಳನ್ನು ಸಲಹುವುದು ತುಂಬಾನೇ ಕಷ್ಟ. ಅದರಲ್ಲೂ ಒಮ್ಮೊಮ್ಮೆ ಪ್ರಾಣಕ್ಕೇ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕೆ ತಾಯಿಯಿಂದ ಬೇರ್ಪಟ್ಟ ಮರಿಗಳನ್ನ ಅರಣ್ಯ ಇಲಾಖೆ ಅಧಿಕಾರಿಗಳು ಮರಳಿ ತಾಯಿ ಬಳಿ ಸೇರಿಸಿದ್ದಾರೆ.

ಮೈಸೂರು ತಾಲೂಕಿನ ಆಯರಹಳ್ಳಿ ಗ್ರಾಮದ ರೈತ ದ್ಯಾವಣ್ಣ ಎನ್ನುವವರ ಕಬ್ಬಿನ ಗದ್ದೆಯಲ್ಲಿ ಕಪ್ಪು ಬಣ್ಣದ ಮರಿ ಚಿರತೆ ಸೇರಿದಂತೆ ಒಟ್ಟು ಮೂರು ಚಿರತೆ ಮರಿಗಳು ಪತ್ತೆಯಾಗಿದ್ದವು. ಇವುಗಳನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಇದೀಗ ಸಿಬ್ಬಂದಿಯ ಹಲವು ದಿನಗಳ ಪ್ರಯತ್ನದ ಫಲವಾಗಿ ಮೂರು ಮರಿಗಳು ತಾಯಿ ಚಿರತೆಯೊಂದಿಗೆ ಸೇರುವಂತಾಗಿದೆ. ಡಿಸೆಂಬರ್ 12 ರಂದು ಮೈಸೂರು ತಾಲೂಕಿನ ಆಯರಹಳ್ಳಿ ಗ್ರಾಮದ ಜಮೀನಿನಲ್ಲಿ ಕಪ್ಪು ಮರಿ ಸೇರಿದಂತೆ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದವು. ಅರಣ್ಯಾಧಿಕಾರಿಗಳು ಈ ಮರಿಗಳನ್ನು ರಕ್ಷಿಸಿ ಅವುಗಳ ತಾಯಿ ಜೊತೆ ಸೇರಿಸುವ ಕಾರ್ಯಾಚರಣೆ ನಡೆಸಿದ್ದರು. ಅದರಂತೆ ಅದೇ ಪ್ರದೇಶದಲ್ಲಿ ಮೂರು ಮರಿಗಳನ್ನು ಪೆಟ್ಟಿಗೆಯೊಳಗೆ ಇರಿಸಿ ಸಿಸಿಟಿವಿ ಕ್ಯಾಮೆರಾ ಮೂಲಕ ಮರಿಗಳ ಚಲನವಲನದ ಮೇಲೆ ನಿಗಾ ಇಡಲಾಗಿತ್ತು. ಆದರೆ, ತಾಯಿ ಚಿರತೆ ಮರಿಗಳನ್ನು ಹುಡುಕಿಕೊಂಡು ಬಂದಿರಲಿಲ್ಲ. ಎರಡನೇ ದಿನ ಅರಣ್ಯಾಧಿಕಾರಿಗಳು ಸ್ಥಳದಲ್ಲಿ ಬೋನು ಇಟ್ಟಿದ್ದರು. ಸಂಜೆ 6 ಗಂಟೆ ಸುಮಾರಿಗೆ ತಾಯಿ ಚಿರತೆ ಬೋನಿನೊಳಗೆ ಸಿಲುಕಿತ್ತು. ಬಳಿಕ ಇದರೊಂದಿಗೆ ಮರಿಗಳನ್ನು ಸೇರಿಸಿ ಮೈಸೂರು ಮೃಗಾಲಯಕ್ಕೆ ಹೊಂದಿಕೊಂಡಿರುವ ಕೂರ್ಗಳ್ಳಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ವನ್ಯಜೀವಿಗಳ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯಲು ಅಧಿಕಾರಿಗಳು ನಿರ್ಧರಿಸಿದ್ದರು. ಪರಿಣಿತ ಪಶುವೈದ್ಯರು ಮರಿಗಳನ್ನು ತಾಯಿಯಿಂದ ಬೇರ್ಪಡಿಸಿ ಸಿಸಿಟಿವಿ ಮೂಲಕ ನಿಗಾ ಇರಿಸಿದ್ದರು. ಮೂರನೇ ಮತ್ತು ನಾಲ್ಕನೇ ದಿನ ಚಿರತೆ ಮತ್ತು ಅದರ ಮರಿಗಳನ್ನು 48 ಗಂಟೆಗಳ ಕಾಲ ನಿಕಟವಾಗಿ ನಿಗಾ ಇರಿಸಲಾಗಿತ್ತು. ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಅವುಗಳಿಗೆ ಅವಕಾಶ ನೀಡಲಾಯಿತು.

ಇದನ್ನೂ ಓದಿ : ರಾತ್ರಿ ಹೊತ್ತು ನಾಯಿಗಳು ಬೊಗಳಿದ್ರೆ ಅಪಶಕುನನಾ – ಶ್ವಾನಗಳು ಅಳುತ್ತಿದ್ದರೆ ಸಾವಿನ ಮುನ್ಸೂಚನೆ ಅನ್ನೋದೇಕೆ ಹಿರಿಯರು?

ಐದನೇ ದಿನ, ಎಲ್ಲಾ ನಾಲ್ಕು ಚಿರತೆಗಳನ್ನು ಮೈಸೂರು ತಾಲೂಕಿನ ಕಾಡಿಗೆ ಕರೆದೊಯ್ದು ಕಾಡಿಗೆ ಬಿಡಲಾಯಿತು. ಆರನೇ ದಿನ ತಾಯಿ ಚಿರತೆ ಕಾಡಿಗೆ ನುಗ್ಗಿದೆ. ಹೀಗೆ ಕಾಡಿಗೆ ಹೋಗಿದ್ದ ಚಿರತೆ ಎರಡು ದಿನಗಳ ಕಾಲ ಹಿಂದಿರುಗಿಲ್ಲ. ಹೀಗಾಗಿ ಪಶುವೈದ್ಯರು ಬಾಟಲ್​ ಮೂಲಕ ಮರಿಗಳಿಗೆ ಹಾಲು ಕುಡಿಸಿದ್ದರು. ಒಂಬತ್ತನೇ ದಿನ, ಚಿರತೆ ಹಿಂತಿರುಗಿ ತನ್ನ ಎರಡು ಮರಿಗಳನ್ನು ತೆಗೆದುಕೊಂಡು ಹೋಗಿದೆ. ಅದರಲ್ಲಿ ಒಂದು ಕಪ್ಪು ಮರಿಯಾಗಿದೆ. 10ನೇ ದಿನ ಬಂದ ಚಿರತೆ ಮತ್ತೊಂದು ಮರಿಯನ್ನು ತೆಗೆದುಕೊಂಡು ಹೋಗಿದೆ. ಮೈಸೂರು ವನ್ಯಜೀವಿ ವಿಭಾಗ, ಅರಣ್ಯ ವಿಭಾಗ ಮತ್ತು ಮೃಗಾಲಯದ ಸಿಬ್ಬಂದಿ ಮತ್ತು ಅಧಿಕಾರಿಗಳು ಮರಿಗಳು ಚಿರತೆಯೊಂದಿಗೆ ಸೇರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಈ ಮೂಲಕ ತಾಯಿ ಹಾಗೂ ಮರಿಗಳು ಮತ್ತೆ ಒಂದಾಗಿವೆ.

Shantha Kumari