ನದಿಯುದ್ದಕ್ಕೂ ಕಂಡಿದ್ದು ದಪ್ಪ ಹೊದಿಕೆ – ಅಯ್ಯೋ.. ಇದು ಲಕ್ಷಾಂತರ ಮೀನುಗಳು ಸತ್ತುಬಿದ್ದಿರುವ ದೃಶ್ಯ..!

ನದಿಯುದ್ದಕ್ಕೂ ಕಂಡಿದ್ದು ದಪ್ಪ ಹೊದಿಕೆ – ಅಯ್ಯೋ.. ಇದು ಲಕ್ಷಾಂತರ ಮೀನುಗಳು ಸತ್ತುಬಿದ್ದಿರುವ ದೃಶ್ಯ..!

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ರಾಜ್ಯದ ಮೆನಿಂಡಿ ಪಟ್ಟಣದ ಜನತೆ ಬೆಚ್ಚಿಬಿದಿದ್ದಾರೆ. ಇಲ್ಲಿನ ಜನರ ಜೀವನಾಡಿಯಾಗಿದ್ದ ಡಾರ್ಲಿಂಗ್ ನದಿಯಲ್ಲಿ ಇದ್ದಕ್ಕಿದ್ದಂತೆ ಮೀನುಗಳು ಸಾವನ್ನಪ್ಪಲು ಶುರುವಾಗಿವೆ. ಅದು ನೂರು ಸಾವಿರ ಅಲ್ಲ. ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ. ಮೊದಲೇ ತೀವ್ರ ಬರಗಾಲಕ್ಕೆ ತುತ್ತಾಗಿದ್ದ ಮೆನಿಂಡಿ ಪಟ್ಟಣ ಈಗ ಡಾರ್ಲಿಂಗ್ ನದಿಯ ಮೀನುಗಳು ಸಾವನ್ನಪ್ಪಿರುವುದನ್ನ ಕಂಡು ಬೆಚ್ಚಿಬಿದ್ದಿದೆ. ಅದು ಕೂಡಾ ನದಿ ಹತ್ತಿರ ಹೋಗಿ ನೋಡಿದರೆ ಮೀನುಗಳು ಸಾವನ್ನಪ್ಪಿರುವ ದೃಶ್ಯ, ದಪ್ಪ ಹೊದಿಕೆ ಹಾಸಿದಂತೆ ಭಾಸವಾಗುತ್ತಿದೆ.

ಇದನ್ನೂ ಓದಿ:  ದೇಶದಲ್ಲಿ 3 ವರ್ಷಗಳಲ್ಲಿ ಆನೆ ದಾಳಿಗೆ 1,581 ಮಂದಿ ಬಲಿ – ಕರ್ನಾಟಕದಲ್ಲಿ ಎಷ್ಟು ಸಾವು?

ಸಣ್ಣ ಪಟ್ಟಣವಾದ ಮೆನಿಂಡಿ ಬಳಿಯ ಡಾರ್ಲಿಂಗ್ ನದಿತೀರದಲ್ಲಿ ಲೆಕ್ಕವಿಲ್ಲದಷ್ಟು ಮೀನುಗಳು ಸಾವನ್ನಪ್ಪಿವೆ ಎಂದು ನ್ಯೂ ಸೌತ್ ವೇಲ್ಸ್ ಸರ್ಕಾರ ತಿಳಿಸಿದೆ. ನದಿಯಲ್ಲಿ ನೀರಿನ ಮಟ್ಟದ ಕಡಿಮೆ ಹಾಗು ಅಧಿಕ ತಾಪಮಾನದಿಂದಾಗಿ ಲಕ್ಷಗಟ್ಟಲೆ ಮೀನುಗಳು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ತಾಪಮಾನ ಹೆಚ್ಚಳದಿಂದಾಗಿ ಸಮುದ್ರಮಟ್ಟದಲ್ಲಿ ಬಿಸಿಗಾಳಿ, ಆಮ್ಲಜನಕ, ನೀರಿನ ಮಟ್ಟ ಕಡಿಮೆ, ವಿಷಕಾರಿ ಪಾಚಿಗಳಿಂದಾಗಿ ಮೀನುಗಳ ಸಾವು ಸಂಭವಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 2018ರಿಂದೀಚೆಗೆ ಈ ಪ್ರದೇಶದಲ್ಲಿ ಸಂಭವಿಸಿದ ಮೂರನೆ ಘಟನೆಯಿದು. ಹಿಂದೆಂದೂ ಇಷ್ಟೊಂದು ಸಂಖ್ಯೆಯ ಮೀನುಗಳು ಸಾವನ್ನಪ್ಪಿರಲಿಲ್ಲ ಜೊತೆಗೆ ಪ್ರವಾಹ ಉಂಟಾದಾಗ ಹೆರಿಂಗ್ ಮತ್ತು ಕಾರ್ಪ್ನಂತಹ ಮೀನುಗಳ ಸಂಖ್ಯೆ ನದಿಯಲ್ಲಿ ಹೆಚ್ಚಿತ್ತು. ಆದರೆ, ಈಗ ಪ್ರವಾಹದ ನೀರು ಕಡಿಮೆಯಾದಂತೆ ದೊಡ್ಡ ಸಂಖ್ಯೆಯಲ್ಲಿ ಮೀನುಗಳು ಸಾಯುತ್ತಿವೆ. ಇದು ನಿಜವಾಗಿಯೂ ಭಯಾನಕವಾಗಿದೆ. ಕಣ್ಣು ಹಾಯಿಸಿದಷ್ಟು ನದಿ ಉದ್ದಕ್ಕು ಸತ್ತ ಮೀನುಗಳೇ ಕಾಣುತ್ತವೆ ಎಂದು ಮೆನಿಂಡಿ ಸ್ಥಳೀಯರಾದ ಗ್ರೇಮ್ ಮೆಕ್ಕ್ರಾಬ್ ಮಾಧ್ಯಮಗಳಿಗೆ ತಿಳಿಸಿದರು. ಮತ್ತಷ್ಟು ತಾಪಮಾನ ಹೆಚ್ಚಾಗುವ ನೀರಿಕ್ಷೆಯಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮೀನುಗಳು ಸಾಯುವ ಅಪಾಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತೀವ್ರವಾದ ಬರಗಾಲ, ಕುಲುಷಿತ ನೀರು, ಮಾಲಿನ್ಯವೇ ಇದಕ್ಕೆ ಕಾರಣ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ವಾತವರಣದಲ್ಲಿ ಬಿಸಿಯ ಪ್ರಮಾಣ ಹೆಚ್ಚಿದಾಗ, ಬೆಚ್ಚಗಿನ ನೀರು ತಣ್ಣೀರಿಗಿಂತ ಕಡಿಮೆ ಆಮ್ಲಜನಕವನ್ನು ಹೊಂದಿರುತ್ತದೆ ಮತ್ತು ಮೀನುಗಳಿಗೆ ಬೆಚ್ಚಗಿನ ತಾಪಮಾನದಲ್ಲಿ ಹೆಚ್ಚಿನ ಆಮ್ಲಜನಕದ ಅಗತ್ಯವಿರುತ್ತದೆ. ನದಿ, ಸಮುದ್ರತೀರಗಳಲ್ಲಿ ತಾಪಮಾನ ಏರಿಕೆಯಾಗಿ ಬಿಸಿಗಾಳಿ ಬೀಸಿದಾಗ ಕ್ರಮೇಣ ಆಮ್ಲಜನಕ ಕಡಿಮೆಯಾಗಿ ಮೀನುಗಳು ಹಠಾತ್ತನೆ ಸಾವನ್ನಪ್ಪುವ ಸಂಭವವಿರುತ್ತದೆ ಎನ್ನಲಾಗ್ತಿದೆ.

suddiyaana