ಕೋಡಿಬೆಂಗ್ರೆ ಬೀಚ್‌ನಲ್ಲಿ ಮೀನಿನ ಸುಗ್ಗಿ – ಸಮುದ್ರದ ದಡದಲ್ಲಿ ನಿಂತು ಹಾಕಿದ ಬಲೆಗೆ ಬಿತ್ತು ಟನ್‌ಗಟ್ಟಲೆ ಮೀನು
ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಆಳಸಮುದ್ರ ಮೀನುಗಾರಿಕೆಗೆ ಸೆಪ್ಟೆಂಬರ್‌ವರೆಗೆ ನಿಷೇಧ ಹೇರಲಾಗಿದೆ. ಹೀಗಾಗಿ ಹತ್ತಾರು ಮೀನುಗಾರರು ಸಮುದ್ರ ದಡದಲ್ಲಿ ನಿಂತು ಕೈರಂಪಣಿ ಬಲೆ ಬೀಸಿ ಮೀನು ಹಿಡಿಯುತ್ತಿದ್ದಾರೆ. ಇದೀಗ ಉಡುಪಿ ಜಿಲ್ಲೆಯ ಕೋಡಿಬೆಂಗ್ರೆ ಬೀಚ್‌ನಲ್ಲಿ ಮೀನುಗಾರರಿಗೆ ಸುದ್ದಿಯೋ ಸುಗ್ಗಿ. ಸಮುದ್ರಕ್ಕೆ ಬಲೆ ಬೀಸಿದ್ದ ಮೀನುಗಾರರಿಗೆ ಬಂಪರ್ ಲಾಟರಿ ಹೊಡೆದಿದೆ.
ಜಿಲ್ಲೆಯಲ್ಲಿ ಮಳೆ ಪ್ರಮಾಣ ತಗ್ಗಿರುವ ಹಿನ್ನೆಲೆ ಹತ್ತಾರು ಮೀನುಗಾರರು ಸಮುದ್ರದ ದಡದಲ್ಲಿ ನಿಂತು ಕೈರಂಪಣಿ ಬಲೆ ಬೀಸಿ ಮೀನು ಹಿಡಿಯುತ್ತಿದ್ದಾರೆ. ಈ ರೀತಿ ಮೀನುಗಾರರು ಕೋಡಿಬೆಂಗ್ರೆಯಲ್ಲಿ ಬೀಸಿದ್ದ ಕೈರಂಪಣಿ ಬಲೆಗೆ ಟನ್ನುಗಟ್ಟಲೇ ಮೀನುಗಳು ಬಿದ್ದಿವೆ. ಸಮುದ್ರಕ್ಕೆ ಬೀಸಿದ್ದ ಬಲೆಯನ್ನು ಮೀನುಗಾರರು ಕಷ್ಟಪಟ್ಟು ಎಳೆದಾಗ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಬೂತಾಯಿ, ಬುಂಗುಡೆ ಇತ್ಯಾದಿ ರಾಶಿರಾಶಿ ಮೀನುಗಳು ದೊರಕಿವೆ.
ಇದನ್ನೂ ಓದಿ: ದೇವರ ನಾಡಲ್ಲಿ ದರ್ಶನ ಕೊಟ್ಟ ಮಹಾಬಲಿ – ವರ್ಷಕ್ಕೆ ಒಂದು ಬಾರಿ ಮಾತ್ರ ಕಾಣಿಸಿಕೊಳ್ಳುತ್ತೆ ಈ ಕಪ್ಪೆ!
ಸಾಮಾನ್ಯವಾಗಿ ಸಮುದ್ರದ ದಡದಲ್ಲೇ ಬಲೆ ಹಾಕುವುದರಿಂದ ಸಾಧಾರಣವಾಗಿ ಕೈರಂಪಣಿ ಬಲೆಗೆ ಸಿಗುವ ಮೀನುಗಳ ಸಂಖ್ಯೆ ಬಹಳ ಕಡಿಮೆ. ಆದರೆ ಈ ಬಾರಿ ಮೀನುಗಾರರಿಗೆ ಟನ್ ಗಟ್ಟಲೇ ಮೀನು ಸಿಕ್ಕಿರುವುದರಿಂದಾಗಿ ಮೀನುಗಾರರು ಫುಲ್ ಖುಷ್ ಆಗಿದ್ದಾರೆ.
ಮಳೆಗಾಲದಲ್ಲಿ ಆಹಾರ ಹುಡುಕುತ್ತಾ ಮೀನುಗಳು ಗುಂಪುಗುಂಪಾಗಿ ಸಮುದ್ರ ತೀರಕ್ಕೆ ಬರುತ್ತವೆ. ಅಂಥ ಮೀನಿನ ಗುಂಪು ಆಕಸ್ಮಿಕವಾಗಿ ಬಲೆಗೆ ಬೀಳುತ್ತವೆ ಎನ್ನುತ್ತಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಕೋಡಿಬೆಂಗ್ರೆ ಬೀಚಿಗೆ ಧಾವಿಸಿ ಬಂದಿದ್ದಾರೆ. ಕೆಲವರು ರಾಶಿರಾಶಿ ಮೀನುಗಳನ್ನು ನೋಡಿ ಅಚ್ಚರಿಗೊಂಡರೆ, ಇನ್ನು ಕೆಲವರು ಬಲೆಯಿಂದ ಹಾರಿ ಹೊರಗೆ ಬಿದ್ದ ತಾಜಾ ಮೀನುಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ. ನಂತರ ಬಲೆ ಬೀಸಿದ ಮೀನುಗಾರರು ಬುಟ್ಟಿಯಲ್ಲಿ ತುಂಬಿ ಮಾರುಕಟ್ಟೆಗೆ ಕಳುಹಿಸಿದರು.