ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆ ಎಂ. ಫಾತಿಮಾ ನಿಧನ

ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆ ಹಾಗೂ ತಮಿಳುನಾಡಿನ ಮಾಜಿ ರಾಜ್ಯಪಾಲರಾದ ಎಂ. ಫಾತಿಮಾ ಬೀವಿ ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.
ಎಂ ಫಾತಿಮಾ ಬೀವಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕೇರಳ ಕೊಲ್ಲಂನ ಖಾಸಗಿ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಗುರುವಾರ ಫಾತಿಮಾ ಬೀವಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ರಾಜಕಾರಣ ಮನೆತನಕ್ಕೆ ಮಾತ್ರ ಸೀಮಿತವಲ್ಲ.. ಡಿ.6ರ ಬಳಿಕ ಎಲ್ಲ ವಿಚಾರ ತಿಳಿಸುತ್ತೇನೆ ಎಂದ ವಿ ಸೋಮಣ್ಣ
ಫಾತಿಮಾ ಬೀವಿ ಅವರು 1927 ರಲ್ಲಿ ಪತ್ತನಂತಿಟ್ಟದ ಅಣ್ಣಾವೀಟ್‌ನಲ್ಲಿ ಜನಿಸಿದ್ದಾರೆ. ಮೀರಾ ಸಾಹಿಬ್ ಮತ್ತು ಖದೀಜಾ ಬೀವಿಯವರ ಮಗಳಾಗಿ ಜನಿಸಿದ ಅವರು ಪತ್ತನಂತಿಟ್ಟ ಕ್ಯಾಥೋಲಿಕ್ ಹೈಸ್ಕೂಲ್‌ನಲ್ಲಿ ಓದಿದ ನಂತರ ತಿರುವನಂತಪುರಂ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದರು. ತಿರುವನಂತಪುರಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನೂ ಪಡೆದರು. 1950 ರಲ್ಲಿ ವಕೀಲರಾಗಿ ದಾಖಲಾದ ಫಾತಿಮಾ ಬೀವಿ 1958 ರಲ್ಲಿ ಮುನ್ಸಿಫ್ ನ್ಯಾಯಾಧೀಶರಾಗಿ ನೇಮಕಗೊಂಡರು. ಅವರು 1968 ರಲ್ಲಿ ಉಪ ನ್ಯಾಯಾಧೀಶರಾಗಿ ಮತ್ತು 1972 ರಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆಗಿ ಬಡ್ತಿ ಪಡೆದರು.
1974ರಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದರು. 1983ರಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾದರು. 1989 ರಲ್ಲಿ, ಅವರು ಸುಪ್ರೀಂಕೋರ್ಟ್‌ನಲ್ಲಿ ದೇಶದ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಮೂರು ವರ್ಷಗಳ ನಂತರ ಅವರು ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾದರು.
ಫಾತಿಮಾ ಬೀವಿ 1997 ರಿಂದ 2001 ರವರೆಗೆ ತಮಿಳುನಾಡಿನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಈ ವರ್ಷ ಕೇರಳ ಸರ್ಕಾರವು ಫಾತಿಮಾ ಬೇವಿ ಅವರಿಗೆ ‘ಕೇರಳ ಪ್ರಭ’ ಪ್ರಶಸ್ತಿ ನೀಡಿ ಗೌರವಿಸಿದೆ. ಸಾಮಾಜಿಕ ಮತ್ತು ನಾಗರಿಕ ಸೇವಾ ಕ್ಷೇತ್ರದಲ್ಲಿನ ಕೊಡುಗೆಗಾಗಿ ಫಾತಿಮಾ ಬೀವಿ ಅವರಿಗೆ ‘ಕೇರಳಪ್ರಭಾ’ ಪ್ರಶಸ್ತಿಯನ್ನು ನೀಡಲಾಯಿತು.