ಫಸ್ಟ್ ಟೈಮ್.. TIMED OUT! – ಒಂದೂ ಎಸೆತ ಎದುರಿಸಿದೇ ಔಟ್ ಆದ ಮೊದಲ ಕ್ರಿಕೆಟಿಗ..!

ಫಸ್ಟ್ ಟೈಮ್.. TIMED OUT! – ಒಂದೂ ಎಸೆತ ಎದುರಿಸಿದೇ ಔಟ್ ಆದ ಮೊದಲ ಕ್ರಿಕೆಟಿಗ..!

ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಐತಿಹಾಸಿಕ ಘಟನೆಯೊಂದು ನಡೆದಿದೆ. ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಟ ರೀತಿಯಲ್ಲಿ ಔಟಾದ ಮೊದಲ ಕ್ರಿಕೆಟಿಗ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ನಿರಂತರ 8 ಪಂದ್ಯಗಳನ್ನು ಗೆದ್ದು ಬೀಗಿದ ಭಾರತ – ವರ್ಲ್ಡ್‌ಕಪ್ ಕ್ಲೀನ್‌ಸ್ವೀಪ್ ಮಾಡುತ್ತಾ ಟೀಮ್ ಇಂಡಿಯಾ?

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಶ್ರೀಲಂಕಾದ ಏಂಜಲೋ ಮಾಥ್ಯೂಸ್ ಒಂದು ಎಸೆತ ಎದುರಿಸದೇ ಟೈಮ್ಡ್‌ ಔಟ್‌ಗೆ ಬಲಿಯಾದ ವಿಶ್ವದ ಮೊದಲ ಬ್ಯಾಟರ್‌ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದಾರೆ. ಲಂಕಾ ಇನ್ನಿಂಗ್ಸ್‌ನ 25ನೇ ಓವರ್ನ ಎರಡನೇ ಎಸೆತದಲ್ಲಿ ಸದಿರ ಸಮರವಿಕ್ರಮ ವಿಕೆಟ್ ಪತನವಾಯಿತು. ಆ ಬಳಿಕ ಕ್ರೀಸ್‌ಗಿಳಿದ ಮ್ಯಾಥ್ಯೂಸ್ ಚೆಂಡನ್ನು ಎದುರಿಸಲು ಸಾಕಷ್ಟು ಸಮಯ ತೆಗೆದುಕೊಂಡರು. ಇದನ್ನು ಗಮನಿಸಿದ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್, ಮ್ಯಾಥ್ಯೂಸ್ ವಿರುದ್ಧ ಅಂಪೈರ್ ಬಳಿ ಟೈಮ್ ಔಟ್ ಮನವಿ ಮಾಡಿದರು. ಬಾಂಗ್ಲಾ ನಾಯಕನ ಮನವಿ ಪುರಸ್ಕರಿಸಿದ ಆನ್ಪೀಲ್ಡ್ ಅಂಪೈರ್, ಮ್ಯಾಥ್ಯೂಸ್ ಔಟ್ ಎಂದು ತೀರ್ಪು ನೀಡಿದರು. ಕೆಲ ಸಮಯ ಅಂಪೈರ್ ಜತೆ ವಾಗ್ವಾದಕ್ಕಿಳಿದ ಮ್ಯಾಥ್ಯೂಸ್ ಅಸಹಾಯಕರಾಗಿ ಪೆವಿಲಿಯನ್‌ಗೆ ಮರಳಬೇಕಾಯಿತು. ಮ್ಯಾಥ್ಯೂಸ್ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಟೈಮ್ ಔಟ್ ಆದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಮ್ಯಾಥ್ಯೂಸ್‌ಗೆ ಮೊದಲು ಯಾವುದೇ ಬ್ಯಾಟ್ಸ್ಮನ್ ಈ ರೀತಿ ಔಟಾಗಿರಲಿಲ್ಲ.

ಮ್ಯಾಥ್ಯೂಸ್ ಬ್ಯಾಟಿಂಗ್‌ಗೆ ಬಂದಾಗ ಅವರ ಹೆಲ್ಮೆಟ್ ಗೆ ಕಟ್ಟಿದ್ದ ಪಟ್ಟಿ ಹರಿದಿತ್ತು. ಇದನ್ನು ಗಮನಿಸಿದ ಮ್ಯಾಥ್ಯೂಸ್, ಬೇರೆ ಹೆಲ್ಮೆಟ್ ತರುವಂತೆ ಡಗೌಟ್‌ಗೆ ಸನ್ನೆ ಮಾಡಿದರು. ಆದರೆ ಆ ವೇಳೆಗಾಗಲೇ ಮ್ಯಾಥ್ಯೂಸ್ ಮೈದಾನಕ್ಕೆ ಬಂದು 2 ನಿಮಿಷಕ್ಕೂ ಹೆಚ್ಚು ಸಮಯ ಕಳೆದಿತ್ತು. ಇದನ್ನು ಗಮನಿಸಿದ ಬಾಂಗ್ಲಾದೇಶ ನಾಯಕ ಹಸನ್, ಮ್ಯಾಥ್ಯೂಸ್ ವಿರುದ್ಧ ಟೈಮ್ ಔಟ್ ಮನವಿ ಮಾಡಿದರು. ನಿಯಮಗಳ ಪ್ರಕಾರ, ಒಬ್ಬ ಬ್ಯಾಟರ್ ಔಟಾದ ಬಳಿಕ ಹೊಸ ಬ್ಯಾಟ್ಸ್ಮನ್ ಎರಡು ನಿಮಿಷಗಳಲ್ಲಿ ಚೆಂಡನ್ನು ಎದುರಿಸಲು ಸಿದ್ಧರಾಗಿರಬೇಕು. ಆದರೆ ಮ್ಯಾಥ್ಯೂಸ್‌ಗೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂಪೈರ್ ಔಟ್ ನೀಡಬೇಕಾಯಿತು. ಒಂದು ವೇಳೆ ಬಾಂಗ್ಲಾದೇಶದ ನಾಯಕ ಹಸನ್, ಇಲ್ಲಿ ಮ್ಯಾಥ್ಯೂಸ್ ಔಟ್‌ಗೆ ಮನವಿ ಮಾಡದಿದ್ದರೆ ಮ್ಯಾಥ್ಯೂಸ್ ಔಟಾಗುತ್ತಿರಲಿಲ್ಲ. ಬಾಂಗ್ಲಾದೇಶದ ಮನವಿಯ ನಂತರ, ಮ್ಯಾಥ್ಯೂಸ್ ದೀರ್ಘಕಾಲದವರೆಗೆ ಅಂಪೈರ್‌ಗಳೊಂದಿಗೆ ಚರ್ಚೆ ನಡೆಸಿದರು. ಆದರೆ ಅಂಪೈರ್ ಒಪ್ಪಲಿಲ್ಲ. ನಂತರ ಮ್ಯಾಥ್ಯೂಸ್ ಬಾಂಗ್ಲಾದೇಶ ತಂಡದೊಂದಿಗೆ ಮಾತನಾಡಿದ್ದರು. ಆದರೆ ಆ ತಂಡವೂ ಒಪ್ಪಲಿಲ್ಲ. ಬಾಂಗ್ಲಾ ನಾಯಕ ಹಸನ್, ಐಸಿಸಿ ನಿಯಮಗಳ ಪ್ರಕಾರ ನಾವು ಮನವಿ ಮಾಡಿದ್ದೇವೆ ಎಂಬುದನ್ನು ಮ್ಯಾಥ್ಯೂಸ್ ಗಮನಕ್ಕೆ ತಂದರು.

ಆ ಬಳಿಕ ಮೈದಾನದಿಂದ ಹೊರಹೋದ ಮ್ಯಾಥ್ಯೂಸ್ ಕೋಪದಿಂದ, ಬೌಂಡರಿ ದಾಟಿದ ತಕ್ಷಣ ತಮ್ಮ ಹೆಲ್ಮೆಟ್ ಅನ್ನು ನೆಲಕ್ಕೆ ಜೋರಾಗಿ ಎಸೆದರು. ಐಸಿಸಿ ನಿಯಮಗಳ ಪ್ರಕಾರ ಯಾವುದೇ ಆಟಗಾರ ಇಂತಹ ಕೆಲಸಗಳನ್ನು ಮಾಡುವಂತಿಲ್ಲ. ಅಂದರೆ ಅವರು ಈ ರೀತಿ ಕ್ರಿಕೆಟ್ ಸಾಮಗ್ರಿಗಳನ್ನು ಎಸೆಯುವಂತಿಲ್ಲ. ಒಂದು ವೇಳೆ ಆಟಗಾರ ಈ ರೀತಿಯಾಗಿ ನಿಯಮ ಉಲ್ಲಂಘನೆ ಮಾಡಿದರೆ, ಆತನಿಗೆ ಐಸಿಸಿ ಶಿಕ್ಷೆ ರೂಪದಲ್ಲಿ ದಂಡವನ್ನು ವಿಧಿಸುತ್ತದೆ.

ಕ್ರಿಕೆಟ್ ನಲ್ಲಿ 10 ರೀತಿಯ ಔಟ್‌ಗಳಿವೆ. ಇಲ್ಲಿಯವರೆಗೆ ಅನೇಕ ಬ್ಯಾಟ್ಸ್ಮನ್ಗಳು ಒಂಬತ್ತು ರೀತಿಯಲ್ಲಿ ಔಟಾಗಿದ್ದಾರೆ. ಆದರೆ ಯಾರೂ ಸಹ ಟೈಮ್ ಔಟ್ ಆಗಿರಲಿಲ್ಲ. ಭಾರತದ ಶ್ರೇಷ್ಠ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ 2006-07ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ನ್ಯೂಲ್ಯಾಂಡ್ಸ್ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಕೊಂಚ ತಡವಾಗಿ ಕ್ರೀಸ್‌ಗೆ ಬಂದಿದ್ದರು. ಆದರೆ ಆ ಸಮಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಗ್ರೇಮ್ ಸ್ಮಿತ್ ಅವರ ವಿರುದ್ಧ ಮೇಲ್ಮನವಿ ಸಲ್ಲಿಸಲಿಲ್ಲ, ಆದ್ದರಿಂದ ಅವರಿಗೆ ಔಟ್ ನೀಡಲಿಲ್ಲ.

Sulekha