ಮೈಸೂರು ದಸರಾ ಸಿಡಿಮದ್ದು ತಾಲೀಮು ಶುರು – ಸಿಡಿಮದ್ದಿನ ಶಬ್ದಕ್ಕೆ ವಿಚಲಿತಗೊಂಡ ಗಜಪಡೆ, ಕುದುರೆಗಳು!

ನಾಡಹಬ್ಬ ಮೈಸೂರು ದಸರಾಗೆ ಕೌಂಟ್‌ಡೌನ್ ಶುರುವಾಗಿದೆ. ದಸರಾ ಹಿನ್ನೆಲೆ ಜಂಬೂಸವಾರಿಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಗಜಪಡೆಗೆ ತಾಲೀಮು, ಭಾರ ಹೊರುವ ತಾಲೀಮು ನಡೆದಿದೆ . ಇಂದು ಸಿಡಿಮದ್ದು ತಾಲೀಮು ನಡೆಸಲಾಯಿತು. ಈ ವೇಳೆ ಕುದುರೆಗಳು, ಹಾಗೂ ಆನೆಗಳು ಸ್ವಲ್ಪ ವಿಚಲಿತಗೊಂಡವು.
ಇದನ್ನೂ ಓದಿ: ಹೂವಿನ ಬಾಣದಂತೆ ಹಾಡಿಗೆ ಸ್ಟಾರ್ಸ್ ಕಮೆಂಟ್! – ಮೂವಿ ಸೀನ್‌ಗಳಲ್ಲೂ ನಿತ್ಯಾಶ್ರೀ ಹವಾ!
ಮೈಸೂರಿನಲ್ಲಿ ನಾಡಹಬ್ಬ ದಸರಾಗೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಇಂದು ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಅಶ್ವರೋಹಿ ದಳ ಹಾಗೂ ಆನೆಗಳಿಗೆ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸಮ್ಮುಖದಲ್ಲಿ ಸಿಡಿಮದ್ದು ತಾಲೀಮು ನಡೆಸಲಾಯಿತು. ಈ ವೇಳೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಅಭಿಮನ್ಯು, ಭೀಮ, ಮಹೇಂದ್ರ, ಧನಂಜಯ, ಕಂಜನ್, ಏಕಲವ್ಯ, ಗೋಪಿ, ಸುಗ್ರೀವಾ, ಶ್ರೀಕಂಠ, ಪ್ರಶಾಂತ, ಕಾವೇರಿ, ಲಕ್ಷ್ಮಿ, ಹೇಮಾವತಿ ಹಾಗೂ ರೂಪ ಒಟ್ಟು 14 ಆನೆಗಳು ಹಾಗೂ ಅಶ್ವರೋಹಿ ದಳದ 30 ಕುದುರೆಗಳು ಭಾಗಿಯಾಗಿದ್ದವು. ಸಿಡಿಮದ್ದು ತಾಲೀಮು ವೇಳೆ ಸಶಸ್ತ್ರ ಮೀಸಲು ಪಡೆ ಪೊಲೀಸರು 21 ಭಾರಿ ಕುಶಾಲತೋಪು ಸಿಡಿಸಿದರು. ಸಿಡಿಮದ್ದಿನ ಶಬ್ದಕ್ಕೆ ಕುದುರೆಗಳು ಚದುರಿದವು ಹಾಗೂ ಶ್ರೀಕಂಠ, ಹೇಮಾವತಿ ಆನೆಗಳು ಸ್ವಲ್ಪ ವಿಚಲಿತಗೊಂಡವು.
ಸಿಡಿಮದ್ದು ತಾಲೀಮಿನಲ್ಲಿ ಅಭಿಮನ್ಯು ನೇತೃತ್ವದ 14 ಆನೆಗಳು ಹಾಗೂ ಅಶ್ವದಳ ಭಾಗವಹಿಸಿವೆ. ಮೊದಲ ಹಂತದ ತಾಲೀಮಿನ ನಂತರ ಎರಡು ಮತ್ತು ಮೂರನೇ ಹಂತದ ತಾಲೀಮು ನಡೆಸಿ ಗಜಪಡೆಯನ್ನು ಸಿದ್ಧಗೊಳಿಸಲಾಗುತ್ತಿದೆ. ಇದಕ್ಕೂ ಮುನ್ನ, ತಾಲೀಮಿಗಾಗಿ ವಸ್ತು ಪ್ರದರ್ಶನದ ಆವರಣಕ್ಕೆ ಆಗಮಿಸಿದ ಗಜಪಡೆಯನ್ನು ಅರಣ್ಯ ಇಲಾಖೆಯ ವತಿಯಿಂದ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು. ಫಿರಂಗಿ ದಳ ಹಾಗೂ 7 ಫಿರಂಗಿಗಳನ್ನು ತಾಲೀಮಿನಲ್ಲಿ ಬಳಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೋಡಿರಿ

