ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಅಗ್ನಿ ಅವಘಡ ಪ್ರಕರಣ -ಗಾಯಗೊಂಡಿದ್ದ ಮುಖ್ಯ ಎಂಜಿನಿಯರ್ ಶಿವಕುಮಾರ್ ಸ್ಥಿತಿ ಗಂಭೀರ

ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಅಗ್ನಿ ಅವಘಡ ಪ್ರಕರಣ -ಗಾಯಗೊಂಡಿದ್ದ ಮುಖ್ಯ ಎಂಜಿನಿಯರ್ ಶಿವಕುಮಾರ್ ಸ್ಥಿತಿ ಗಂಭೀರ

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಅಗ್ನಿ ಅವಘಡ ಸಂಭವಿಸಿ ಒಂದು ವಾರ ಕಳೆದಿದೆ. ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕ್ವಾಲಿಟಿ ಕಂಟ್ರೋಲ್ ವಿಭಾಗದ ಮುಖ್ಯ ಇಂಜಿನಿಯರ್ ಶಿವಕುಮಾರ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಇತರೆ ಗಾಯಾಳುಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಹೆಚ್ಚಿನ ಗಾಯಾಳುಗಳಿಗೆ ಮುಖ ಹಾಗೂ ಕೈಗಳಿಗೆ ಸುಟ್ಟ ಗಾಯಾಗಳಾಗಿವೆ. ಅವರ ಸ್ಥಿತಿ ಸ್ಥಿರವಾಗಿದೆ. ಆಹಾರ ಸೇವನೆ ಮಾಡುತ್ತಿದ್ದಾರೆ. ಆದರೆ, ಶಿವಕುಮಾರ್ ಅವರ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ ಅಳವಡಿಸಲಾಗಿದೆ. ಲ್ಯಾಬ್ ಆಪರೇಟರ್ ಜ್ಯೋತಿಯವರಿಗೆ ಮೂಗಿನ ಕ್ಯಾತಿಟರ್ ಅಳವಡಿಸಲಾಗಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಡೀನ್ ಮತ್ತು ನಿರ್ದೇಶಕ ಡಾ. ರಮೇಶ್ ಕೃಷ್ಣ ಕೂಡ ಶಿವಕುಮಾರ್  ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮೆಜೆಸ್ಟಿಕ್‍ಗೆ ಆಗಮಿಸಿದ್ದ ರೈಲಿನಲ್ಲಿ ಬೆಂಕಿ – 2 ಬೋಗಿಗಳು ಸಂಪೂರ್ಣ ಭಸ್ಮ

ಸುಟ್ಟ ಗಾಯಗಳಾಗಿರುವುದರಿಂದ, ಗಾಯಗಳ ಸ್ವರೂಪವು ವಿಭಿನ್ನವಾಗಿರುತ್ತದೆ. ಆಳವಾಗಿ ಗಾಯಗಳಾಗಿವೆ. ಗುಣಮುಖರಾಗಲು ಸಮಯ ಬೇಕಾಗುತ್ತದೆ.  ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ತೀವ್ರವಾದ ಗಾಯಗಳಿಗೊಳಗಾದವರಿಗೆ ಚರ್ಮದ ಕಸಿ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ.

ಘಟನೆಯ ನಂತರ ಪ್ರಕರಣ ದಾಖಲಿಸಿಕೊಂಡಿರುವ ಹಲಸೂರು ಗೇಟ್ ಪೊಲೀಸರು ಬಿಬಿಎಂಪಿ ಇಂಜಿನಿಯರ್-ಇನ್-ಚೀಫ್ ಬಿ.ಎಸ್.ಪ್ರಹ್ಲಾದ್ ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ. ಲ್ಯಾಬ್‌ನಲ್ಲಿನ ಸುರಕ್ಷತಾ ಕ್ರಮಗಳು, ಸಿಬ್ಬಂದಿ ಸಾಮರ್ಥ್ಯ, ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ವಿವರಗಳ ಬಗ್ಗೆ ಮಾಹಿತಿ ಕೋರಿ ಪ್ರಹ್ಲಾದ್‌ ಅವರಿಗೆ ಪೊಲೀಸರು ಕೆಲವು ದಿನಗಳ ಹಿಂದೆ ನೋಟಿಸ್ ಜಾರಿ ಮಾಡಿದ್ದರು. ಇದರಂತೆ ಪ್ರಹ್ಲಾದ್ ಅವರು ತನಿಖಾಧಿಕಾರಿ ಮುಂದೆ ಹಾಜರಾಗಬೇಕಿದೆ.

ಪ್ರಕರಣ ಸಂಬಂಧ ಉನ್ನತಾಧಿಕಾರಿಗಳಿಗೆ ಯಾವುದೇ ಸಮಸ್ಯೆಗಳಾಗದಿರಬಹುದು. ಆದರೆ, ಇತರರ ವಿರುದ್ಧ ಕ್ರಮಗಳಾಗುವ ಸಾಧ್ಯತೆಗಳಿವೆ. ಅವರೆಲ್ಲರಿಗೂ ಸಮನ್ಸ್ ಜಾರಿಯಾಗಿದೆ. ಕೆಲವರು ಬಂಧನಕ್ಕೊಳಗಾಗಿದ್ದು, ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ನಿರ್ಲಕ್ಷ್ಯತನ ಕುರಿತು ಅವರ ಪಾತ್ರ ಇರುವುದು ಖಚಿತವಾಗಿದ್ದೇ ಆದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗಳಾದ ಆನಂದ್ ಮತ್ತು ಸ್ವಾಮಿ, ಗ್ರೂಪ್ ಡಿ ಉದ್ಯೋಗಿ ಸುರೇಶ್ ಅವರು ದುರಂತ ಸಂಭವಿಸಿದ ಸಂದರ್ಭದಲ್ಲಿ ರಸ್ತೆ ಡಾಂಬರು ವಸ್ತುಗಳನ್ನು ಪರೀಕ್ಷೆ ನಡೆಸುತ್ತಿದ್ದರು. ಇದಕ್ಕಾಗಿ ಹೆಚ್ಚಿನ ರಾಸಾಯನಿಕ ಅಂಶ ಬಳಕೆ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಇವರ ವಿರುದ್ಧ ಕ್ರಮಗಳ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

suddiyaana