ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ – ಮಿರಾಕಲ್ ಡ್ರಿಂಕ್ಸ್ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ – ಮಿರಾಕಲ್ ಡ್ರಿಂಕ್ಸ್ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅಗ್ನಿ ಅವಘಡ ಹೆಚ್ಚಾಗುತ್ತಲೇ ಇದೆ. ಇದೀಗ ಮತ್ತೊಂದು ಬೆಂಕಿ ಅವಘಡ ವರದಿಯಾಗಿದೆ. ಶುಕ್ರವಾರ ಬೆಂಗಳೂರಿನಲ್ಲಿರುವ ಖಾಸಗಿ ಕಂಪನಿಯ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: ತಪ್ಪಾಗಿ ಖರೀದಿಸಿದ್ದ ಆಟಗಾರನೇ ಪಂಜಾಬ್ ಗೆಲ್ಲಿಸಿದ ಹೀರೋ! – ಇನ್ನಾದ್ರೂ ಪಾಠ ಕಲಿಯುತ್ತಾ RCB?

ಆರ್ ಟಿ ನಗರ ರಸ್ತೆಯಲ್ಲಿರೋ ಮಿರಾಕಲ್ ಡ್ರಿಂಕ್ಸ್ ಕಂಪನಿಯ ಕಟ್ಟಡದಲ್ಲಿ ಈ ಅವಘಡ ಸಂಭವಿಸಿದೆ. IDS next business solutions pvt ltd ಮತ್ತು ಮಿರಾಕಲ್ ಡ್ರಿಂಕ್ಸ್ ಕಂಪನಿ ಈ ಎರಡು ಕಂಪನಿಗಳು ವೆಡ್ ಎಲಿಕ್ಸಿರ್ ಗ್ಲೋಬಲ್ ಪ್ರೈ.ಲಿ. ಕಟ್ಟಡದಲ್ಲಿ ಇದ್ದವು. ಈ ಕಟ್ಟಡದಲ್ಲಿ ಸುಮಾರು 60 ಕ್ಕೂ ಹೆಚ್ಚು ಸಿಬ್ಬಂದಿ ಇದ್ದರು. ನೆಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಸಿಬ್ಬಂದಿ ಟೆರೆಸ್ ಗೆ ಓಡಿ ಹೋಗಿದ್ದಾರೆ. ದಟ್ಟ ಹೊಗೆಯ ಮಧ್ಯೆ ಸಿಬ್ಬಂದಿ ಮರದಿಂದ, ಬಿಲ್ಡಿಂಗ್ ಟೆರಸ್ ಗೆ ಏಣಿ ಇಟ್ಟು ಈ ಏಣಿಯ ಮೂಲಕ ಇಳಿದಿದ್ದಾರೆ.

ಘಟನೆಯಲ್ಲಿ ಹೊಗೆ, ಬೆಂಕಿಯ ಮಧ್ಯೆ ಸಿಲುಕಿದ್ದ ಯುವಕನೊಬ್ಬ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆತನನ್ನು ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತಿದೆ.

ಅಗ್ನಿ ಅವಘಡ ಸಂಭವಿಸುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ನಿರತರಾದರು. ರಕ್ಷಣಾ ಕಾರ್ಯ ಮುಂದುವರಿದಿದೆ. ದಟ್ಟವಾದ ಹೊಗೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ಮೋಕ್ ಎಕ್ಸಾಸ್ಟರ್ (ಹೊಗೆ ಹೊರ ಎಳೆಯುವ ಯಂತ್ರ) ಅಳವಡಿಕೆ ಮಾಡಲಾಗುತ್ತಿದೆ.

Shwetha M