ಹೇಗಿದೆ ಭಾರತದ ಬ್ರಹ್ಮೋಸ್ ಶಕ್ತಿ ವೈರಿ ಎದೆಯಲ್ಲಿ ನಡುಕ ಹುಟ್ಟಿಸುತ್ತೆ
ವೆಚ್ಚವೆಷ್ಟು? ಹೇಗಿದೆ ತಂತ್ರಜ್ಞಾನ?

ಭಾರತದ ಬ್ರಹ್ಮೋಸ್’ ಶಕ್ತಿಗೆ ‘ಪಾಪಿಗಳು ನಿದ್ದೆಯಲ್ಲೂ ಬೇವತುಕೊಳ್ಳುತ್ತಿದ್ದಾರೆ. ಭಾರತದ ಈ ಸೂಪರ್ ಸಾನಿಕ್ ಕ್ಷಿಪಣಿ ಕಡೆ ಇಡೀ ವಿಶ್ವನೇ ತಿರುಗಿ ನೋಡುತ್ತಿದೆ. ಅಡಗಿ ಕುಳಿತ ಉಗ್ರರ ವಿರುದ್ಧ ಭಾರತ ನಡೆಸಿದ್ದ ಆಪರೇಶನ್ ಸಿಂಧೂರದಲ್ಲಿ ಈ ಬ್ರಹ್ಮೋಸ್ ಕ್ಷಿಪಣಿ ತನ್ನ ತಾಕತ್ತು ತೋರಿಸಿದೆ. ಬ್ರಹ್ಮೋಸ್ ಕ್ಷಿಪಣಿ ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ. ಈ ಕ್ಷಿಪಣಿಯು ಭೂಮಿಯ ಮೇಲಿನ ಅತ್ಯಂತ ವೇಗದ ಕ್ರೂಸ್ ಕ್ಷಿಪಣಿ ಎಂಬ ಖ್ಯಾತಿ ಪಡೆದಿದೆ. ಇದು ಭೂಮಿ, ಸಮುದ್ರ, ವಾಯು ಮತ್ತು ಜಲಾಂತರ್ಗಾಮಿ ವೇದಿಕೆಗಳಿಂದ ನಿಖರವಾದ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಬ್ರಹ್ಮೋಸ್ ಹೆಸರು ಹೇಗೆ ಬಂತು?
ಭಾರತದ ಬ್ರಹ್ಮಪುತ್ರ ನದಿ ಮತ್ತು ರಷ್ಯಾದ ಮಾಸ್ಕವಾ ನದಿಗಳ ಹೆಸರಿನಿಂದ ಇದಕ್ಕೆ ಬ್ರಹ್ಮೋಸ್ ಅಂತ ಹೆಸರಿಡಲಾಗಿದ್ದು, ಇದು ಭಾರತ ಹಾಗೂ ರಷ್ಯಾದ ಸ್ನೇಹಸಂಬಂಧಕ್ಕೆ ಉದಾಹರಣೆಯಾಗಿದೆ. ಈ ಕ್ಷಿಪಣಿಯ ಪರಿಕಲ್ಪನೆಯು 1990ರ ದಶಕದಲ್ಲಿ ರೂಪಗೊಂಡಿತು. ಭಾರತಕ್ಕೆ ಒಂದು ಬಹುಮುಖ, ಸೂಪರ್‌ಸಾನಿಕ್ ಕ್ಷಿಪಣಿಯ ಅಗತ್ಯವಿತ್ತು. ಈ ಯೋಜನೆಯು DRDO ಮತ್ತು ರಷ್ಯಾದ NPOM ನಡುವಿನ ಜಂಟಿ ಒಪ್ಪಂದದ ಫಲವಾಗಿದೆ.
ಇಟ್ಟ ಟಾರ್ಗೆಟ್ ಮಿಸ್ ಆಗಲ್ಲ
ಶತ್ರುವಿನ ಗುರಿಗಳನ್ನು ಅಂದರೆ ಭೂಮಿ ಅಥವಾ ಸಮುದ್ರದಲ್ಲಿ ಹೆಚ್ಚಿನ ವೇಗ, ನಿಖರತೆ ಮತ್ತು ವಿನಾಶಕಾರಿ ಶಕ್ತಿಯೊಂದಿಗೆ ತಲುಪಿಸುವ ಸಾಮರ್ಥ್ಯ ಇದಕ್ಕಿದೆ. ಇದು “ಫೈರ್ ಅಂಡ್ ಫರ್ಗೆಟ್” ಕ್ಷಿಪಣಿಯಾಗಿದ್ದು, ಒಮ್ಮೆ ಉಡಾವಣೆಗೊಂಡರೆ ಸ್ವತಂತ್ರವಾಗಿ ಗುರಿಯನ್ನು ತಲುಪುತ್ತದೆ. ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತ-ರಷ್ಯಾದ ಜಂಟಿ ಉದ್ಯಮವಾದ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ತಯಾರಿಸುತ್ತಿದ್ದು, ಇದನ್ನು 1998ರಲ್ಲಿ ಸ್ಥಾಪಿಸಲಾಯಿತು. 2005ರಲ್ಲಿ ಭಾರತೀಯ ನೌಕಾಪಡೆ, 2007ರಲ್ಲಿ ಭಾರತೀಯ ಸೇನೆ ಹಾಗೂ 2019ರಲ್ಲಿ ಭಾರತೀಯ ವಾಯುಪಡೆಯ Su-30MKI ವಿಮಾನದೊಂದಿಗೆ ಸೇರಿಸಲಾಯ್ತು.
ನಮ್ಮ ದೇಶದಲ್ಲೇ ಬ್ರಹ್ಮೋಸ್ ತಯಾರಿ
ಹೈದರಾಬಾದ್, ನಾಗ್ಪುರದಲ್ಲಿ ಈಗಾಗಲೇ ಬ್ರಹ್ಮೋಸ್ ತಯಾರಿಕಾ ಘಟಕ ಇವೆ. ಇದೀಗ ಉತ್ತರ ಪ್ರದೇಶದ ಲಕ್ನೋದಲ್ಲಿ ತಯಾರಿಕಾ ಘಟಕ ಶುರು ಆಗಲಿದೆ. ಅತ್ತ ರಷ್ಯಾದಲ್ಲಿ ಕೆಲವು ಪ್ರಮುಖ ಘಟಕಗಳನ್ನು ಒದಗಿಸುತ್ತದೆ, ಆದರೆ ಭಾರತದಲ್ಲಿ ಸ್ಥಳೀಯ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. ಭಾರತದ “ಮೇಕ್ ಇನ್ ಇಂಡಿಯಾ” ಉಪಕ್ರಮದ ಅಡಿಯಲ್ಲಿ, ಬ್ರಹ್ಮೋಸ್ ಕ್ಷಿಪಣಿಯ ಶೇ.70ಕ್ಕಿಂತ ಹೆಚ್ಚು ಘಟಕಗಳನ್ನು ಭಾರತದಲ್ಲೇ ತಯಾರಿಸಲಾಗುತ್ತಿದೆ. ಲಕ್ನೋ ಘಟಕವು ವಾರ್ಷಿಕವಾಗಿ 100 ಕ್ಷಿಪಣಿಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಇದು ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುತ್ತದೆ.
ಶಬ್ದದ ವೇಗಕ್ಕಿಂತ 2.8 ಹೆಚ್ಚು ಪಟ್ಟು ವೇಗ
ಬ್ರಹ್ಮೋಸ್ ಕ್ಷಿಪಣಿಯು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತ್ತದೆ, ಇದು ವಿಶ್ವದ ಅತ್ಯಂತ ಪರಿಣಾಮಕಾರಿ ಕ್ಷಿಪಣಿಗಳಲ್ಲಿ ಒಂದಾಗಿದೆ. ಇದರ ವೇಗ 2.8 ಮ್ಯಾಕ್‌ನಷ್ಟಿದೆ. ಅಂದರೆ ಶಬ್ದದ ವೇಗಕ್ಕಿಂತ 2.8 ಪಟ್ಟು ವೇಗವಾಗಿ ಇದು ಚಲಿಸುತ್ತದೆ. 450ರಿಂದ 800 ಕಿಮೀ ಚಲಿಸುತ್ತವೆ. ಇದರೊಳಗೆ ಇನರ್ಶಿಯಲ್ ನಾವಿಗೇಷನ್ ಸಿಸ್ಟಮ್ (INS), ಸ್ಯಾಟಲೈಟ್ ನಾವಿಗೇಷನ್, ರಾಡಾರ್ ಮತ್ತು ಇಮೇಜಿಂಗ್ ಸೀಕರ್‌ಗಳನ್ನು ಬಳಸಿಕೊಂಡು ನಿಖರವಾದ ಗುರಿ ತಲುಪುವ ಇಂಜಿನ್ ಇವೆ.
ಇದರೊಳಗಿರುವ ರಾಮ್‌ಜೆಟ್ ಎಂಜಿನ್ ಇದ್ದು, ಇದು ಸೂಪರ್‌ಸಾನಿಕ್ ವೇಗವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. 200ರಿಂದ 300 ಕೆಜಿ ತೂಕದ ಸಾಂಪ್ರದಾಯಿಕ ಅಥವಾ ಪರಮಾಣು ಯುದ್ಧತಲೆಯನ್ನು ಸಾಗಿಸಬಹುದು. ಭೂಮಿ, ಸಮುದ್ರ, ಜಲಾಂತರ್ಗಾಮಿ, ಮತ್ತು ವಾಯುವಿನಿಂದ ಉಡಾವಣೆಗೊಳ್ಳಬಹುದು.
ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತೀಯ ಸಶಸ್ತ್ರ ಪಡೆಗಳ ಮೂರು ವಿಭಾಗಗಳಲ್ಲಿ ಬಳಸಲಾಗುತ್ತದೆ. ಭೂಮಿಯಿಂದ ಉಡಾವಣೆಗೊಳ್ಳುವ ಮೊಬೈಲ್ ಲಾಂಚರ್‌ಗಳ ಮೂಲಕ ನಿಯೋಜಿಸಲಾಗಿದೆ. ಇನ್ನು ಬ್ರಹ್ಮೋಸ್ ರೆಜಿಮೆಂಟ್‌ಗಳನ್ನು ಗಡಿಯ ಸಮೀಪದ ಸ್ಥಳಗಳಲ್ಲಿ ಅಂದರೆ ಅರುಣಾಚಲ ಪ್ರದೇಶ ಸೇರಿದಂತೆ ಕೆಲವೆಡೆ ನಿಯೋಜಿಸಲಾಗಿದೆ.
ಬ್ರಹ್ಮೋಸ್ ವೆಚ್ಚ ಎಷ್ಟು ಗೊತ್ತಾ?
ಬ್ರಹ್ಮೋಸ್ ಯೋಜನೆಯ ಒಟ್ಟು ಅಭಿವೃದ್ಧಿ ವೆಚ್ಚವು ಸುಮಾರು $2.5 ಬಿಲಿಯನ್ ಎಂದು ಅಂದಾಜಿಸಲಾಗಿದೆ, ಇದನ್ನು ಭಾರತ ಮತ್ತು ರಷ್ಯಾ ಜಂಟಿಯಾಗಿ ಭರಿಸಿವೆ. ಒಂದು ಬ್ರಹ್ಮೋಸ್ ಕ್ಷಿಪಣಿಯ ವೆಚ್ಚವು ಸುಮಾರು $3-5 ಮಿಲಿಯನ್ ಅಂದರೆ 25ರಿಂದ 40 ಕೋಟಿ ರೂಪಾಯಿ ಆಗಿದೆ. ಸದ್ಯ ಲಕ್ನೋದ ಘಟಕವು ₹400 ಕೋಟಿಗಿಂತ ಹೆಚ್ಚಿನ ಬಂಡವಾಳದೊಂದಿಗೆ ಸ್ಥಾಪಿಸಲ್ಪಟ್ಟಿದೆ, ಇದು ದೀರ್ಘಕಾಲೀನ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲಿದೆ. ಒಟ್ನಲ್ಲಿ ಭಾರತ ಜೊತೆ ಬ್ರಹ್ಮೋಸ್ ಬಲವಿದ್ದು, ನಮ್ಮ ದೇಶಕ್ಕೆ ದೊಡ್ಡ ಶಕ್ತಿ ಅಂತಾನೆ ಹೇಳಬಹುದು.