‘ವೆಟ್ಟುವಮ್’ ತಮಿಳು ಸಿನಿಮಾ ಶೂಟಿಂಗ್ ವೇಳೆ ಸ್ಟಂಟ್ಮೆನ್ ಸಾ*ವು- ನಿರ್ದೇಶಕ ಪ.ರಂಜಿತ್ ಸೇರಿ ನಾಲ್ವರ ವಿರುದ್ಧ ಎಫ್ಐಆರ್

ವೆಟ್ಟುವಮ್ ತಮಿಳು ಸಿನಿಮಾ ಶೂಟಿಂಗ್ ವೇಳೆ ಕಾರಿನಲ್ಲಿ ಸ್ಟಂಟ್ ಮಾಡುವಾಗ ಸ್ಟಂಟ್‌ಮೆನ್ ಮೃತಪಟ್ಟ ಕೇಸ್ ಸಂಬಂಧ ಪೊಲೀಸರು ನಿರ್ದೇಶಕ ಪ.ರಂಜಿತ್ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಕಾಲಿವುಡ್‌ನ ಸಾಹಸ ಕಲಾವಿದ ಮೋಹನ್ ರಾಜು ಮೃತ ಸ್ಟಂಟ್‌ಮ್ಯಾನ್. ಪ.ರಂಜಿತ್ ನಿರ್ದೇಶನದಲ್ಲಿ ತಮಿಳು ನಟ ಆರ್ಯ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ವೆಟ್ಟುವಂ ಸಿನಿಮಾ ಶೂಟಿಂಗ್ ವೇಳೆ ಈ ಅವಘಡ ಸಂಭವಿಸಿತ್ತು. ಸದ್ಯ ಪೊಲೀಸರು ಸಿನಿಮಾ ನಿರ್ದೇಶಕ ಪ.ರಂಜಿತ್ ಸೇರಿ ನಾಲ್ವರ ವಿರುದ್ಧ ಬಿಎನ್‌ಎಸ್ 289, 125 ಮತ್ತು 106(1) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ನಿರ್ದೇಶಕ ಪ.ರಂಜಿತ್ ಮಾತನಾಡಿ, ಸಿನಿಮಾ ಶೂಟಿಂಗ್ ವೇಳೆ ಪಾಲೀಸಬೇಕಾದ ಎಲ್ಲಾ ನಿಯಮಗಳನ್ನು ನಾವು ಪಾಲಿಸಿದ್ದೇವೆ. ಕಾರ್ ಸ್ಟಂಟ್ ವೇಳೆ ಯಾವುದೇ ಅಪಘಾತವಾಗದಂತೆ ನಾವು ಎಲ್ಲಾ ರೀತಿ ಮುನ್ನೆಚ್ಚರಿಕೆಗಳನ್ನು ಅನುಸರಿಸಿದ್ದೇವು. ಆದರೆ ಇದೆಲ್ಲದರ ನಡುವೆ ನಾವು ಅನುಭವಿ ಸ್ಟಂಟ್‌ಮೆನ್‌ನ್ನು ಕಳೆದುಕೊಂಡಿದ್ದೇವೆ. ಈ ಸಾವು ಅತೀವ ನೋವನ್ನು ತಂದಿದ್ದು, ಮೋಹನ್ ರಾಜ್ ಅವರ ಅಣ್ಣ, ಪತ್ನಿಗೆ ದೇವರು ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ. ನಮ್ಮ ನೆನಪಿನಲ್ಲಿ ಸದಾ ಅಮರರಾಗಿರುತ್ತಾರೆ ಎಂದರು.
ಘಟನೆ ನಡೆದಿದ್ದು ಹೇಗೆ?
ಶೂಟಿಂಗ್ ವೇಳೆ ಕಾರು ಪಲ್ಟಿಯಾಗುವ ಅವಘಡದ ವಿಡಿಯೋ ಅಲ್ಲಿಯೇ ಇದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಅವರು ಎಸ್‌ಯುವಿಯನ್ನು ಓಡಿಸುತ್ತಾ, ರ‍್ಯಾಂಪ್ ಮೇಲೆ ಹೋಗುತ್ತಾರೆ. ಅಲ್ಲಿ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿತ್ತು. ಈ ವೇಳೆ, ಅವರು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ನೋಡಿರಿ

