ಈದ್-ಎ-ಮಿಲಾದ್ ಮೆರವಣಿಗೆಯಲ್ಲಿ ಪಾಕ್ ಪರ ಘೋಷಣೆ – ಭದ್ರಾವತಿಯಲ್ಲಿ ಭುಗಿಲೆದ್ದ ಆಕ್ರೋಶ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ಈದ್-ಎ-ಮಿಲಾದ್ ಆಚರಣೆಯ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆಗಳು ಮೊಳಗಿವೆ ಅನ್ನೋ ಬಗ್ಗೆ ವರದಿಯಾಗಿದೆ. ಈದ್ ಮಿಲಾದ್ ಹಬ್ಬದ ಮೆರವಣಿಗೆ ವೇಳೆ ಗಾಂಧಿವೃತ್ತದಲ್ಲಿ ಸಂಜೆ 7:30 ರ ವೇಳೆಗೆ ಕೆಲವು ಕಿಡಿಗೇಡಿಗಳು ಪಾಕಿಸ್ತಾನ್ ಜಿಂದಾಬಾದ್ ಎಂದು ದೇಶವಿರೋಧಿ ಘೋಷಣೆಯನ್ನು ಕೂಗಿದ್ದಾರೆ. ಇದರಿಂದ ಭದ್ರಾವತಿ ನಗರದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವರ ವಿರುದ್ಧ ಕ್ರಮ ಜರುಗಿಸುವಂತೆ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದೆ. ಮಾಧವಾಚಾರ್ಯ ವೃತ್ತದ ಬಳಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ದೇಶದ್ರೋಹಿ ಘೋಷಣೆ ಕೂಗಿದವರನ್ನು ಬಂಧಿಸಬೇಕೆಂದು ಆಗ್ರಹ ಮಾಡಿದ್ದಾರೆ. ನಿನ್ನೆ ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಮೆರವಣಿಗೆ ಸಾಗುತ್ತಿತ್ತು. ಆ ವೇಳೆ ಪಾಕಿಸ್ತಾನ್ ಪರ ಘೋಷಣೆ ಕೂಗಿರುವ ವಿಡಿಯೋ ಕೂಡಾ ವೈರಲ್ ಆಗಿದೆ.
ವಿಡಿಯೊ ಸಂಬಂಧ ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ವಿಡಿಯೊದ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ. ಅದು ಎಲ್ಲಿ ಹಾಗೂ ಯಾವಾಗ ಚಿತ್ರೀಕರಣಗೊಂಡಿದೆ. ನೈಜತೆ ದೃಢಪಟ್ಟರೆ ಘೋಷಣೆ ಕೂಗಿದವರು ಯಾರು ಎಂಬುದರ ಬಗ್ಗೆಯೂ ತನಿಖೆ ನಡೆಸಿದ್ದೇವೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ಮೂವರು ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಎಸ್ಪಿ ಹೇಳಿದರು. ನಮ್ಮಲ್ಲಿ ಡ್ರೋನ್ಗಳಿಂದ ಚಿತ್ರೀಕರಿಸಿದ ದೃಶ್ಯಗಳು, ಸಿಸಿಟಿವಿಗಳು ಮತ್ತು ನಮ್ಮ ವೀಡಿಯೊ ತಂಡವು ತೆಗೆದ ವೀಡಿಯೊಗಳಿವೆ ಎಂದು ಎಸ್ಪಿ ತಿಳಿಸಿದ್ದಾರೆ.

ನೋಡಿರಿ

