HDK, ನಿಖಿಲ್‌ಗೆ FIR ಸಂಕಷ್ಟ – ಏನಿದು ಕೇಸ್, ಎಷ್ಟು ಸ್ಟ್ರಾಂಗ್?
ನಿಖಿಲ್ ಭವಿಷ್ಯಕ್ಕೆ ಕಂಟಕವಾಗುತ್ತಾ?
ಹೆಚ್‌ಡಿ ಕುಮಾರಸ್ವಾಮಿ ಬಿಗ್ ಶಾಕ್ ಎದುರಾಗಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ನಿಖಿಲ್‌ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಲೋಕಾಯುಕ್ತ ಪೊಲೀಸ್ ಎಡಿಜಿಪಿ ಚಂದ್ರಶೇಖರ್ ಅವರು ನೀಡಿದ ದೂರಿನ ಮೇರೆಗೆ ಸಂಜಯ್‌ನಗರ ಪೊಲೀಸ್ ಠಾಣೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು ವಿರುದ್ಧ ಪೊಲೀಸರು ಭಾರತೀಯ ನೀತಿ ಸಂಹಿತೆ ಸೆಕ್ಷನ್ 224ರಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಹಾಗಿದ್ರೆ ಇದು ಏನ್ ಕೇಸ್..? ಎಫ್‌ಐಆರ್ ಯಾಕೆ ದಾಖಲಾಯ್ತು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: IPL ಹರಾಜಿಗೆ ಹಾಲಿ ಕ್ಯಾಪ್ಟನ್ಸ್ – ರಾಹುಲ್, ಪಂತ್, ಅಯ್ಯರ್, ಶಮಿ!
ಲೋಕಾಯುಕ್ತ ಎಸ್‌ಐಟಿ ವಿಭಾಗದ ಮುಖ್ಯಸ್ಥ ಎಡಿಜಿಪಿ ಅವರು ಈ ಮೂವರ ವಿರುದ್ಧ ಸುಳ್ಳು ಆರೋಪ ಮತ್ತು ಬೆದರಿಕೆ ಸಂಬಂಧ ಈ ಹಿಂದೆ ದೂರು ನೀಡಿದ್ದರು. ಆಗ ಪೊಲೀಸರು ಎನ್‌ಸಿಆರ್ ದಾಖಲಿಸಿದ್ದರು. ಈಗ 42ನೇ ಎಸಿಎಂಎಂ ನ್ಯಾಯಾಲಯದ ಆದೇಶದ ಮೇರೆಗೆ ಎಫ್‌ಐಆರ್ ದಾಖಲಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಈ ಎಫ್‌ಐಆರ್ ದಾಖಲಾಗಿದ್ದು, ಎಫ್‌ಐಆರ್‌ನಲ್ಲಿ ಕುಮಾರಸ್ವಾಮಿ A1 ಆಗಿದ್ದರೆ, ನಿಖಿಲ್ ಕುಮಾರಸ್ವಾಮಿ A2 ಆಗಿದ್ದಾರೆ. ಇನ್ನೂ ಸುರೇಶ್‌ಬಾಬು ಅವರನ್ನು 3ನೇ ಆರೋಪಿಯನ್ನಾಗಿಸಲಾಗಿದೆ.
ಜಂತ್‌ಕಲ್ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಎಡಿಜಿಪಿ ಚಂದ್ರಶೇಖರ್ ನಡುವ ಕೆಲ ದಿನಗಳ ಹಿಂದೆ ಮುಸುಕಿನ ಗುದ್ದಾಟ ನಡೆದಿತ್ತು. ಕುಮಾರಸ್ವಾಮಿ ಅವರು ಚಂದ್ರಶೇಖರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಆರೋಪಗಳು ಸುಳ್ಳು ಎಂದು ಚಂದ್ರಶೇಖರ್ ನ್ಯಾಯಾಲಯಕ್ಕೆ ದೂರು ನೀಡಿ ಎಫ್‌ಐಆರ್ ದಾಖಲಿಗೆ ಕೋರಿದ್ದರು. ಅದರಂತೆ ನ್ಯಾಯಾಲಯ ಮೂವರ ವಿರುದ್ಧ ಎಫ್‌ಐಆರ್‌ಗೆ ಆದೇಶಿಸಿದ್ದು ಈಗ ಎಫ್‌ಐಆರ್ ದಾಖಲಾಗಿದೆ.
ಈ ಮೊದಲು ಎಡಿಜಿಪಿ ಚಂದ್ರಶೇಖರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಇತರರು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿ, ತಮಗೆ ಭಯ ಹುಟ್ಟಿಸುವ ಪ್ರಯತ್ನ ನಡೆಸಿದ್ದಾರೆ ಎಂದು ದೂರು ನೀಡಿದ್ದರು. ಈ ಬಗ್ಗೆ ಎನ್‌ಸಿಆರ್ ದಾಖಲು ಮಾಡಿಕೊಳ್ಳಲಾಗಿದ್ದು, ಈಗ ನ್ಯಾಯಾಲಯದ ಆದೇಶದಂತೆ ಎಫ್‌ಐಆರ್ ದಾಖಲಾಗಿದೆ.
ಏನಿದು HDK ವಿವಾದ ?
ನಿಯಮ ಉಲ್ಲಂಘನೆ ಮಾಡಿ ಸಾಯಿ ಮಿನರಲ್ಸ್ ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪದ ಮೇಲೆ ಹೆಚ್‌ಡಿ ಕುಮಾರಸ್ವಾಮಿ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ಲೋಕಾಯುಕ್ತ ಎಸ್‌ಐಟಿ ಎಡಿಜಿಪಿ ಚಂದ್ರಶೇಖರ್ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಇದಕ್ಕೆ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಹೇಗಾದರೂ ಮಾಡಿ ಒಮ್ಮೆಯಾದರೂ ನನ್ನನ್ನು ಜೈಲಿಗೆ ಕಳುಹಿಸಬೇಕು ಎಂದು ಸಂಚು ಹೂಡಿದ್ದಾರೆ. ಎಡಿಜಿಪಿ ಚಂದ್ರಶೇಖರ್ ಯಾವ ಹಿನ್ನೆಲೆಯಿಂದ ಬಂದವರು? ಅಕ್ರಮ ಹಣ ಸಂಪಾದನೆ ಮಾಡುವವರಿಗೆ ರಕ್ಷಣೆ ಕೊಡಿ ಎಂದು ನಿಮ್ಮನ್ನು ಐಪಿಎಸ್ ಆಫೀಸರ್ ಮಾಡಿದ್ದಾರಾ? ನಾನು ಬೇಲ್ ತಗೊಂಡೆ, ತನಿಖೆಗೆ ಮಾಡಬೇಡಿ ಎಂದು ಹೇಳಿಲ್ಲ. ನೀವು ಏನ್ ಮಾಡಿದ್ದೀರಿ? ನಿಮ್ಮ ವಿರುದ್ಧವೇ ಕೇಸ್ ಇದೆ, ಆರೋಪಿ ನಂಬರ್ 2. ಹೈಕೋರ್ಟ್ನಲ್ಲಿ ಅಧಿಕಾರಿ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದರು. ಈ ಬಳಿಕ ಎಡಿಜಿಪಿ ಚಂದ್ರಶೇಖರ್ ತಮ್ಮ ಸಿಬ್ಬಂದಿಗೆ ಪತ್ರ ಬರೆದು, ಹೆಚ್ ಡಿ ಕುಮಾರಸ್ವಾಮಿ ಅವರು ನನ್ನ ಮೇಲೆ ಸಾಕಷ್ಟು ಸುಳ್ಳು ಆರೋಪ ಮಾಡಿದ್ದಾರೆ. ನಮ್ಮನ್ನು ಕುಗ್ಗಿಸುವ ಪ್ರಯತ್ನ ಮತ್ತು ಭಯ ಹುಟ್ಟಿಸುವ ಉದ್ದೇಶ ಹೊಂದಿದ್ದಾರೆ. ಅವರು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಅವರೊಬ್ಬ ಆರೋಪಿ. ಇಂತಹ ಆರೋಪ ಮತ್ತು ಬೆದರಿಕೆಗಳಿಗೆ ನಾವು ನಿರಾಶೆಗೊಳ್ಳಬಾರದರು ಎಂದು ಪತ್ರದಲ್ಲಿ ಬರೆದಿದ್ದರು. ಹಂದಿಗಳೊಂದಿಗೆ ಎಂದಿಗೂ ಜಗಳಕ್ಕೆ ಇಳಿಯಬೇಡಿ. ಹಂದಿಗಳ ಜೊತೆಗೆ ಜಗಳಕ್ಕೆ ಇಳಿದರೆ ನಾವು ಕೊಳಕಾಗುತ್ತೀವಿ. ಯಾಕೆಂದರೆ ಹಂದಿಗಳು ಕೊಳಕನ್ನೇ ಇಷ್ಟಪಡುತ್ತವೆ ಎಂದು ಪತ್ರದಲ್ಲಿ ಜಾರ್ಜ್ ಬರ್ನಾಡ್ ಶಾ ಅವರ ಹೇಳಿಕೆ ಉಲ್ಲೇಖಿಸಿದ್ದರು.
ಇದಾದ ಮೇಲೆ ಎಡಿಜಿಪಿ ಚಂದ್ರಶೇಖರ್ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ನಡುವೆ ಮಾತಿನ ಜಟಾಪಟಿ ನಡೆದಿತ್ತು. ಇದಾದ ಬಳಿಕ ಚಂದ್ರಶೇಖ್, ಕುಮಾರಸ್ವಾಮಿ ಅವರು ತಮ್ಮ ಮೇಲೆ ಸುಳ್ಳು ಆರೋಪ ಮಾಡಿ ತಮ್ಮನ್ನು ಕುಗ್ಗಿಸುವ, ಭಯ ಹುಟ್ಟಿಸುವ ಪ್ರಯತ್ನ ನಡೆಸಿದ್ದಾರೆ ಎಂದು ದೂರು ನೀಡಿದ್ದರು. ಈಗ ನ್ಯಾಯಾಲಯದ ಆದೇಶದಂತೆ ಎಫ್‌ಐಆರ್ ದಾಖಲಿಸಲಾಗಿದೆ.