ಕಾಂಗ್ರೆಸ್‌ ವಿರುದ್ಧ ಪೆನ್‍ಡ್ರೈವ್ ಬಾಂಬ್ – ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ದೂರು ದಾಖಲು

ಕಾಂಗ್ರೆಸ್‌ ವಿರುದ್ಧ ಪೆನ್‍ಡ್ರೈವ್ ಬಾಂಬ್ – ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ದೂರು ದಾಖಲು

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದರು. ಕಾಂಗ್ರೆಸ್‌ ಸರ್ಕಾರ ಹಲವು ಯೋಜನೆಗಳಿಂದ ಕಮಿಷನ್‌ ಪಡೆಯುತ್ತಿದೆ ಅಂತಾ ಗಂಭೀರ ಆರೋಪ ಮಾಡಿದ್ದರು. ಇಲ್ಲಿಯವರೆಗೆ ಯಾವುದೇ ದಾಖಲೆ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಹೆಚ್‌ಡಿಕೆ ವಿರುದ್ಧ ದೂರು ದಾಖಲಾಗಿದೆ.

ಮಾಜಿ ಸಿಎಂ ಕುಮಾರಸ್ವಾಮಿ ಅವರು ಕಾಂಗ್ರೆಸ್​ ಸರ್ಕಾರ ಹಲವು ಇಲಾಖೆಗಳಲ್ಲಿ ಕಮಿಷನ್ ಪಡೆಯುತ್ತಿರುವ ಬಗ್ಗೆ ಆರೋಪಿಸಿ, ಈ ಕುರಿತು ಪೆನ್​ಡ್ರೈವ್ ನನ್ನ ಬಳಿ ಇದೆ ಎಂದಿದ್ದರು. ಆದರೆ, ಇಲ್ಲಿಯವರೆಗೂ ದಾಖಲೆ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ವಕೀಲ ಅಮೃತೇಶ್ ಎಂಬುವವರು ಹೆಚ್​ಡಿಕೆ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಉಸಿರಾಡುವ ಗಾಳಿಯೇ ಜೀವಕ್ಕೆ ಮಾರಕ! – ಕಳಪೆ ಮಟ್ಟಕ್ಕೆ ಇಳಿಯುತ್ತಿದೆ ರಾಜ್ಯ ರಾಜಧಾನಿ ವಾಯುಗುಣಮಟ್ಟ!

ಕುಮಾರಸ್ವಾಮಿ ಅವರು ಪೆನ್​ಡ್ರೈವ್ ತೋರಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಅವರಿಗೆ ಲೀಗಲ್ ನೋಟಿಸ್ ನೀಡಲಾಗಿತ್ತು. ಆದರೆ, ಇದ್ಯಾವುದಕ್ಕೂ ಉತ್ತರ ಬಂದಿಲ್ಲ. ಪೆನ್ ಡ್ರೈವ್​ನ್ನ ಸ್ಪೀಕರ್​ಗೆ ಅಥವಾ ಪೊಲೀಸರಿಗೆ ಆಗಲಿ ಇನ್ನೂ ನೀಡಿಲ್ಲ. ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿದ್ದವರು. ಈ ರೀತಿ ಮಾಡಿರುವುದು ಸರಿಯಲ್ಲ. ಈ ಹಿನ್ನಲೆ ಕುಮಾರಸ್ವಾಮಿ ವಿರುದ್ದ ಬ್ಲಾಕ್ ಮೇಲ್, ಬೆದರಿಕೆ, ಅಪರಾಧಿಕ ಸಂಚು ಹಾಗೂ ಎಕ್ಸ್ ಟಾರ್ಷನ್ ಆರೋಪದಡಿ ಕ್ರಮ ತೆಗೆದುಕೊಂಡು, ಜೊತೆಗೆ ಕುಮಾರಸ್ವಾಮಿಯವರ ಬಳಿ ಇರುವ ಪೆನ್ ಡ್ರೈವ್ ಸೀಜ್ ಮಾಡಬೇಕು ಮತ್ತು ಅವರ ವಿರುದ್ಧ ಕ್ರಮತೆಗದುಕೊಳ್ಳುವಂತೆ ವಕೀಲ ಅಮೃತೇಶ್ ಅವರಿಂದ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ.

ಇನ್ನು ಈ  ಪೆನ್​ಡ್ರೈವ್  ಆರೋಪ ಮಾಡಿದ ಬಳಿಕ ಹೆಚ್ ಡಿ ಕುಮಾರಸ್ವಾಮಿಯವರ ಕುಟುಂಬದೊಂದಿಗೆ ಯುರೋಪ್ ಪ್ರವಾಸಕ್ಕೆ ಹೋಗಿ ಬಳಿಕ ರಾಜ್ಯ ರಾಜಧಾನಿಗೆ ಹಿಂತಿರುಗಿದ್ದರು. ಈ ವೇಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ, ಪತ್ರಕರ್ತರೊಬ್ಬರು ಸರ್ ಎಲ್ಲಿ ಪೆನ್ ಡ್ರೈವ್ ಎಂದು ಕೇಳಿದಾಗ ‘ಅಯ್ಯೋ ರಾಮ!’ ಎಂದು ಹಣೆ ಚಚ್ಚಿಕೊಂಡಿದ್ದರು. ಜೊತೆಗೆ ಅದನ್ನು ರಿಲೀಸ್ ಮಾಡುವ ಸಮಯ ಇನ್ನೂ ಬಂದಿಲ್ಲ, ಕಾಂಗ್ರೆಸ್ ಪರ ತೀರ್ಪು ನೀಡಿದ ಜನತೆಗೆ ಮುಂದೆ ಇನ್ನಷ್ಟು ಆಘಾತಗಳು ಕಾದಿವೆ, ಅವರಿಗೆ ತಮ್ಮ ತಪ್ಪಿನ ಅರಿವಾಗಬೇಕು, ಸೂಕ್ತ ಸಮಯದಲ್ಲಿ ಅದನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು.

Shwetha M