ಮಾಜಿ ಸಿಎಂ ಕುಟುಂಬಗಳ ನಡುವೆ ಫೈಟ್.. – ಅದೃಷ್ಟ ರಾಘವೇಂದ್ರಗೋ.. ಗೀತಾಗೋ?

ಮಾಜಿ ಸಿಎಂ ಕುಟುಂಬಗಳ ನಡುವೆ ಫೈಟ್.. – ಅದೃಷ್ಟ ರಾಘವೇಂದ್ರಗೋ.. ಗೀತಾಗೋ?

ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕ ಬಿ.ಎಸ್ ಯಡಿಯೂರಪ್ಪರ ತವರು ಕ್ಷೇತ್ರ ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣಾ ಅಖಾಡ ರಂಗೇರಿದೆ. ಬಿಎಸ್ ವೈ ಪುತ್ರ ಬಿ.ವೈ ರಾಘವೇಂದ್ರ ಮತ್ತೊಮ್ಮೆ ಸಂಸದರಾಗೋಕೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್​ನಿಂದ ಗೀತಾ ಶಿವರಾಜ್​ಕುಮಾರ್​ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಆದ್ರೆ ರಾಘವೇಂದ್ರ ಎದುರು ಗೀತಾ ಹೆಸ್ರು ಅಷ್ಟೇನು ಚಾಲ್ತಿಗೆ ಬರದಿದ್ರೂ ಈಗ ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೆಸ್ರು ಭಾರೀ ಸದ್ದು ಮಾಡ್ತಿದೆ. ಬಿಎಸ್​ವೈ ಕುಟುಂಬದ ವಿರುದ್ಧವೇ ಸಿಡಿದೆದ್ದಿರೋ ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಬಿಜೆಪಿಯಲ್ಲೇ ಮತಗಳು ಇಬ್ಭಾಗ ಆಗುವ ಆತಂಕ ಎದುರಾಗಿದ್ದು ಗೀತಾ ಕಮಾಲ್ ಮಾಡ್ತಾರಾ ಅನ್ನೋಚ ರ್ಚೆ ನಡೀತಿದೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳ ಕುಟುಂಬಸ್ಥರ ನಡುವೆ ನಡೆಯುತ್ತಿರೋ ಕದನ ಭಾರೀ ಪೈಪೋಟಿಗೆ ಕಾರಣವಾಗಿದೆ.

ಇದನ್ನೂ ಓದಿ: ಬಿಜೆಪಿ ನಾಯಕರ ವಿರೋಧಿ ಅಲೆಯಲ್ಲಿ ಹಾಸನವನ್ನೂ ಕಳೆದುಕೊಳ್ಳುತ್ತಾ ಜೆಡಿಎಸ್?

ಮಾಜಿ ಸಿಎಂಗಳ ಫ್ಯಾಮಿಲಿ ಫೈಟ್! 

ಶಿವಮೊಗ್ಗ ಲೋಕಸಭಾ ಕಣದಲ್ಲಿ ಇಬ್ಬರು ಮಾಜಿ ಸಿಎಂಗಳ ಮಕ್ಕಳು ಸ್ಪರ್ಧಿಸುತ್ತಿದ್ದು, ಕ್ಷೇತ್ರದಲ್ಲಿ ಈಗಾಗಲೇ ಮಿಂಚಿನ ಪ್ರಚಾರ ಆರಂಭವಾಗಿದೆ. ಬಂಗಾರಪ್ಪ ಪುತ್ರಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಕೊಲ್ಲೂರು ಮೂಕಾಂಬಿಕೆಗೆ ಕೈ ಮುಗಿಯುವ ಮೂಲಕ ಪ್ರಚಾರ ಆರಂಭಿಸಿದ್ದಾರೆ. ಇನ್ನೊಂದೆಡೆ ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ತಮ್ಮ ಹೇಳಿಕೆಗಳ ಮೂಲಕವೇ ಎದುರಾಳಿಗೆ ಟಕ್ಕರ್ ನೀಡುತ್ತಿದ್ದಾರೆ. ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ಮಾಜಿ ಶಾಸಕ ಬಿ.ಎಂ ಸುಕುಮಾರಶೆಟ್ಟಿ ಕಾಂಗ್ರೆಸ್ ಸೇರ್ಪಡೆಗೊಂಡಿರುವುದರಿಂದ, ಪಕ್ಷಕ್ಕೆ ಬೈಂದೂರಿನಲ್ಲಿ ಆನೆ ಬಲ ಬಂದಂತಾಗಿದೆ. ಇನ್ನೊಂದೆಡೆ ಹ್ಯಾಟ್ರಿಕ್ ಹೀರೋ ಶಿವಣ್ಣ, ಪ್ರಚಾರ ಕಾರ್ಯದಲ್ಲಿ ಪತ್ನಿಗೆ ಸಾಥ್‌ ನೀಡುತ್ತಿದ್ದಾರೆ. ಇತ್ತ ಹಾಲಿ ಸಂಸದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಕೂಡ ಹೊಸ ಹುಮ್ಮಸಿನೊಂದಿಗೆ ಕಣಕ್ಕಿಳಿದಿದ್ದಾರೆ. ಪ್ರಧಾನಿ ಮೋದಿ ಅವರೇ ಬಂದು ತನ್ನ ಪರ ಪ್ರಚಾರ ಕೈಗೊಂಡಿರುವುದರಿಂದ, ಮೋದಿ ಶ್ರೀರಕ್ಷೆಯಲ್ಲಿ ಚುನಾವಣೆ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಈ ಬಾರಿ ಬಿಜೆಪಿಗೂ ಸ್ಪಲ್ಪ ಕಷ್ಟವಾಗಬಹುದು. ಯಾಕಂದ್ರೆ ಕಳೆದ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರ 75,000ಕ್ಕೂ ಅಧಿಕ ಮತಗಳ ಲೀಡ್ ನೀಡುವ ಮೂಲಕ ಬಿಜೆಪಿಯ ಕೈ ಹಿಡಿದಿತ್ತು. ಆದರೆ ಈ ಬಾರಿ ಪ್ರಬಲ ನಾಯಕರ ಪಕ್ಷಾಂತರದಿಂದ ಬಿಜೆಪಿ ಲೆಕ್ಕಾಚಾರ ತಪ್ಪುವ ಸಾಧ್ಯತೆ ಇದೆ. ಮತ್ತೊಂದೆಡೆ ಈಶ್ವರಪ್ಪ ಕೂಡ ಬಂಡಾಯವೆದ್ದಿದ್ದಾರೆ. ರಾಜ್ಯದ ಪ್ರತಿಷ್ಠಿತ ಕಣವಾಗಿರುವ ಶಿವಮೊಗ್ಗದಲ್ಲಿ, ಈಶ್ವರಪ್ಪ ಸ್ಪರ್ಧಿಸಿದರೆ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ. ಇದರಿಂದ ಬಿಜೆಪಿಗೆ ಮತ್ತಷ್ಟು ಹೊಡೆತ ಬಿದ್ದಂತಾಗುತ್ತದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಚುನಾವಣಾ ಲೆಕ್ಕಾಚಾರಗಳು ಏನಾಗಬಹುದು ಅನ್ನುವ ಕುತೂಹಲ ಮತದಾರರಲ್ಲಿದೆ.

ಪ್ಲಸ್, ಮೈನಸ್ ಏನು? 

ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಬಲಾಬಲ ನೋಡೋದಾದ್ರೆ ಕ್ಷೇತ್ರಾಭಿವೃದ್ಧಿಯ ವಿಚಾರದಲ್ಲಿ ರಾಜ್ಯದ ಸಂಸದರಲ್ಲಿ ಬಿ.ವೈ ರಾಘವೇಂದ್ರ ಮುಂಚೂಣಿಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಶಿವಮೊಗ್ಗಕ್ಕೆ ಭೇಟಿ ಕೊಟ್ಟಿದ್ದ ಕಾಂಗ್ರೆಸ್‌ನ ಪ್ರಮುಖ ನಾಯಕರೇ ರಾಘವೇಂದ್ರ ಅವರನ್ನು ಹಾಡಿ ಹೊಗಳಿದ್ದರು. ಬಿಎಸ್‌ ಯಡಿಯೂರಪ್ಪ ಅವರ ಮಗ ಎಂಬುದರ ಹೊರತಾಗಿಯೂ ಕ್ಷೇತ್ರದಲ್ಲಿ ರಾಘವೇಂದ್ರ ವಿಶೇಷವಾದ ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ಪಕ್ಷದ ಎಲ್ಲ ಮುಖಂಡರು, ಕೇಡರ್‌ನೊಂದಿಗೂ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅವರು ಹೊರಹೊಮ್ಮಿರುವುದು ಸಹಜ ಆಯ್ಕೆ ಎನಿಸಿದೆ. ಆದ್ರೆ ಮಾಜಿ ಮುಖ್ಯಮಂತ್ರಿ ಎಸ್‌ ಬಂಗಾರಪ್ಪ ಅವರ ಯುಗಾಂತ್ಯದ ಬಳಿಕ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಳಲಿ ಬೆಂಡಾಗಿದೆ. ಬಂಗಾರಪ್ಪ ಕುಟುಂಬದವರು ರಾಜಕಾರಣದಲ್ಲಿ ಸಕ್ರಿಯರಾಗಿದ್ದರೂ ಜಿಲ್ಲೆಯಲ್ಲಿ ಬಿಎಸ್‌ವೈ ಕುಟುಂಬದ ಹಿಡಿತವಿದೆ. ಹಾಲಿ ಕಾಂಗ್ರೆಸ್‌ ಸರಕಾರದಲ್ಲಿ ಸಚಿವರಾಗಿರುವ ಮಧು ಬಂಗಾರಪ್ಪ ಈ ಬಾರಿ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಯಾಕಂದ್ರೆ ಅವರ ಸಹೋದರಿ ಗೀತಾ ಶಿವರಾಜ್‌ಕುಮಾರ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ.

ಸದ್ಯ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ, ಬಂಡಾಯವಾಗಿ ಸ್ಪರ್ಧಿಸಿದ್ರೆ ಕೆ.ಎಸ್ ಈಶ್ವರಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್​ ಕುಮಾರ್ ನಡುವೆಯೇ ನೇರ ಪೈಪೋಟಿ ನಡೆಯಲಿದೆ. ರಾಘವೇಂದ್ರ ಅವ್ರು ಕ್ಷೇತ್ರದ ಅಭಿವೃದ್ಧಿಗೆ ಗರಿಷ್ಠ ಕೊಡುಗೆ ನೀಡಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದ್ರೆ ಈಶ್ವರಪ್ಪ ಬಂಡಾಯದಿಂದ ಮತ ವಿಭಜನೆ ಆತಂಕ ಎದುರಾಗಿದೆ. ಮಾಜಿ ಸಿಎಂ ಎಸ್. ಬಂಗಾರಪ್ಪ ಕುಟುಂಬದ ಹಿನ್ನೆಲೆ ಹೊಂದಿರೋದೇ ಗೀತಾ ಶಿವರಾಜ್‌ಕುಮಾರ್‌ ಅವ್ರಿಗೆ ಇರುವ ಪ್ಲಸ್ ಪಾಯಿಂಟ್. ಮೈನಸ್‌ ಏನು ಅಂದ್ರೆ ಅನನುಭವಿ. ಕ್ಷೇತ್ರಕ್ಕೆ ಕನೆಕ್ಟ್ ಇಲ್ಲ ಎನ್ನುವ ಆರೋಪ ಇದೆ. ಇನ್ನು ಕೆ.ಎಸ್‌.ಈಶ್ವರಪ್ಪಗೆ ಬೆಂಬಲಿಗರ ಸಹಾನುಭೂತಿ ಮತ್ತು ಹಿಂದುತ್ವದ ಮುಖ ವರ್ಕೌಟ್ ಆಗಬಹುದು. ಆದ್ರೆ ಹಾಲಿ ಸಂಸದರ ಎದುರು ಅದ್ರಲ್ಲೂ ಬಿಜೆಪಿಯ ಘಟಾನುಘಟಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಗೆಲ್ಲುವುದು ಅಷ್ಟು ಸುಲಭವಿಲ್ಲ.

Shwetha M