ಕಡಲನಗರಿ ಮಂಗಳೂರಿನಲ್ಲಿ ಜಲಕ್ಷಾಮದ ಭೀತಿ – ತುಂಬೆ ಡ್ಯಾಂನಲ್ಲಿದೆ 20 ದಿನಕ್ಕಾಗುವಷ್ಟು ನೀರು..!

ಕಡಲನಗರಿ ಮಂಗಳೂರಿನಲ್ಲಿ ಜಲಕ್ಷಾಮದ ಭೀತಿ – ತುಂಬೆ ಡ್ಯಾಂನಲ್ಲಿದೆ 20 ದಿನಕ್ಕಾಗುವಷ್ಟು ನೀರು..!

ನೇತ್ರಾವತಿಯ ಒಡಲು ಖಾಲಿ ಖಾಲಿಯಾಗಿದೆ. ತುಂಬೆ ಡ್ಯಾಮ್‌ನಲ್ಲಿ ಜೀವಜಲ ಬತ್ತುತ್ತಿದೆ. ಇನ್ನು ಹೆಚ್ಚೆಂದರೆ ಕೇವಲ 20 ದಿನ ನೀರು ಸಿಕ್ಕಿದರೆ ಸಿಗಬಹುದು. ಕಡಲನಗರಿಯಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಜಲಕ್ಷಾಮ ಕಟ್ಟಿಟ್ಟ ಬುತ್ತಿ. ಉತ್ತರ ಕರ್ನಾಟಕದ ಮಂದಿ ಕುಡಿಯುವ ನೀರಿಗಾಗಿ ಪರದಾಡುತ್ತಿರುವಂತೆ, ಕಡಲನಗರಿ ಮಂಗಳೂರಿನ ಜನ ಕೂಡಾ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿಗೆ ಇನ್ನೊಂದೇ ಹೆಜ್ಜೆ ಬಾಕಿಯಿದೆ.  ಮಂಗಳೂರು ಮಹಾನಗರ ಪಾಲಿಕೆ ಪ್ರಕಾರ ಎರಡು ದಿನಕ್ಕೊಮ್ಮೆ ರೇಶನಿಂಗ್ ಪದ್ಧತಿಯಲ್ಲಿ ನೀರು ಕೊಡುತ್ತಿದ್ದರೂ, ಸಮಸ್ಯೆ ಜಟಿಲವಾಗುತ್ತಿದೆ. ನೀರು ಮನೆ ತಲುಪಲು ಮೂರು ನಾಲ್ಕು ದಿನಗಳು ಹಿಡಿಯುತ್ತಿದೆ.

ಇದನ್ನೂ ಓದಿ: ಜಲಾಶಯಗಳಲ್ಲಿ ಕುಸಿಯುತ್ತಿದೆ ನೀರಿನ ಮಟ್ಟ – ರಾಜ್ಯಕ್ಕೆ ಎದುರಾಗಲಿದ್ಯಾ ನೀರಿನ ಅಭಾವ?

ಮಂಗಳೂರು ಮಹಾನಗರ ನೀರಿಗಾಗಿ ಆಶ್ರಯಿಸಿರುವುದು ನೇತ್ರಾವತಿ ನದಿಗೆ ಅಡ್ಡಲಾಗಿ ಬಂಟ್ವಾಳದಲ್ಲಿ ಕಟ್ಟಲಾದ ತುಂಬೆ ಜಲಾಶಯವನ್ನು. ಸದ್ಯ ತುಂಬೆ ಡ್ಯಾಂ ನೀರು ದಿನದಿಂದ ದಿನಕ್ಕೆ ಬರಿದಾಗುತ್ತಿದೆ. ನೇತ್ರಾವತಿ ಬತ್ತಿ ಹೋಗಿರುವುದರಿಂದ ಒಳ ಹರಿವು ಸಂಪೂರ್ಣ ನಿಂತಿದ್ದು, ತುಂಬೆ ಜಲಾಶಯ ಡ್ಯಾಂ ಬದಲಿಗೆ ನೀರಿನ ಸಣ್ಣ ಕೊಳದಂತೆ ಭಾಸವಾಗುತ್ತಿದೆ. ಇನ್ನು ಶಂಭೂರಿನಲ್ಲಿರುವ ಎಎಂಆರ್ ಡ್ಯಾಂ ನೀರನ್ನು ಕೂಡಾ ಸಂಪೂರ್ಣವಾಗಿ ತುಂಬೆಗೆ ವರ್ಗಾಯಿಸಲಾಗಿದೆ. ಆದ್ರೆ ಮಹಾನಗರ ಮಂಗಳೂರಿಗೆ ಈ ನೀರು ಸಾಕಾಗುವುದು ಅನುಮಾನವಾಗಿದೆ. ನೇತ್ರಾವತಿ ನದಿಯಲ್ಲಿ  ನೀರಿನ ಪ್ರಮಾಣ ತೀವ್ರ ಕುಸಿತ ಕಂಡಿರುವುದರಿಂದ ಮಂಗಳೂರು ನಗರದಲ್ಲಿ ರೇಷನಿಂಗ್ ನಿಯಮದಂತೆ ನೀರು ಪೂರೈಕೆ ಮಾಡಲು ದಕ್ಷಿಣ ಕನ್ನಡ ಜಿಲ್ಲಾಡಳಿತವು ನಿರ್ಧರಿಸಿದೆ. ಈ ಕುರಿತು ಸಭೆ ನಡೆಸಿರುವ ಜಿಲ್ಲಾಡಳಿತವು, ತಕ್ಷಣದಿಂದಲೇ ರೇಷನಿಂಗ್ ನಿಯಮದಂತೆ ಒಂದು ದಿನ ಬಿಟ್ಟು ಒಂದು ದಿನ ನೀರು ಪೂರೈಸಲು ನಿರ್ಧರಿಸಿದೆ. ರೇಷನಿಂಗ್ ನಿಯಮವನ್ನು ತತ್ಕ್ಷಣದಿಂದಲೇ ಜಾರಿಗೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಮುಂದಾಗಿದೆ. ಮೇ 4 ಅಥವಾ 5 ರಂದು ರೇಷನಿಂಗ್ ನಿಯಮ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ರೇಷನಿಂಗ್ ನಿಯಮ ಅನುಸರಿಸಿದರೂ ಕೂಡಾ ಸದ್ಯದ ಪರಿಸ್ಥಿತಿಯಲ್ಲಿ ತುಂಬೆ ಡ್ಯಾಂ ನಲ್ಲಿ ಹತ್ತು ದಿನಗಳಿಗಾಗುವಷ್ಟೇ ನೀರು ಇರುವುದಾಗಿ ಅಂದಾಜಿಸಲಾಗಿದೆ. ಇನ್ನು ಜಿಲ್ಲಾಡಳಿತ ಅಧಿಕೃತ ರೇಷನಿಂಗ್ ಆರಂಭಿಸಿದ್ದಲ್ಲಿ, ಕೈಗಾರಿಕೆ, ಕಟ್ಟಡಗಳಿಗೆ ನೀರು ಪೂರೈಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

suddiyaana