ಮಳೆ ಆರ್ಭಟ ಜೋರಾದ ಮೇಲೆ ರಸ್ತೆಯಲ್ಲಿ ಬ್ಯಾರಿಕೇಡ್ – ಕೊಡಗಿನಲ್ಲಿ ಹೆದ್ದಾರಿ ಕುಸಿಯದಂತೆ ತಡೆಯಲು ಇಷ್ಟು ಮಾಡಿದರೆ ಸಾಕಾ?

ಮಳೆ ಆರ್ಭಟ ಜೋರಾದ ಮೇಲೆ ರಸ್ತೆಯಲ್ಲಿ ಬ್ಯಾರಿಕೇಡ್ – ಕೊಡಗಿನಲ್ಲಿ ಹೆದ್ದಾರಿ ಕುಸಿಯದಂತೆ ತಡೆಯಲು ಇಷ್ಟು ಮಾಡಿದರೆ ಸಾಕಾ?

ಕಳೆದ ಕೆಲದಿನಗಳಿಂದ ಮಳೆಯ ಆರ್ಭಟ ಜೋರಾಗಿದೆ. ಮಳೆ ಜೋರಾಗುತ್ತಿದ್ದಂತೆ ಕೊಡಗು-ಸಂಪಾಜೆ ಗ್ರಾಮದ ಕೊಯನಾಡು ಅರಣ್ಯ ಇಲಾಖೆ ಕಚೇರಿ ಬಳಿ ಹೆದ್ದಾರಿ ಕುಸಿಯುವ ಭೀತಿ ಎದುರಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಲಾಗಿದೆ. ಮುಖ್ಯ ರಸ್ತೆಯ ಬದಿಯಲ್ಲಿ ಕಳೆದ ಬಾರಿ ನಿರ್ಮಾಣ ಮಾಡಿದ್ದ ತಾತ್ಕಾಲಿಕ ರಸ್ತೆ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿವರ್ಷವೂ ಮಳೆಗಾಲ ಬರುತ್ತದೆ. ರಸ್ತೆ ಕುಸಿಯುವ ಭೀತಿಯೂ ಎದುರಾಗುತ್ತದೆ. ಆದರೆ, ಸರಿಯಾದ ಕ್ರಮ ಮಾತ್ರ ಕೈಗೊಳ್ಳಲು ಇನ್ನೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಮಯ ಸಿಕ್ಕಿಲ್ಲ ಅನ್ನೋ ಆಕ್ರೋಶವೂ ಕೇಳಿಬರುತ್ತಿದೆ.

ಇದನ್ನೂ ಓದಿ: ರಾಜ್ಯದ ಹಲವೆಡೆ ಭಾರಿ ಮಳೆ – ಶಾಲಾ ಕಾಲೇಜುಗಳಲ್ಲಿ ರಜೆ ಘೋಷಣೆ

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಕೊಡಗಿನ ಗಡಿಭಾಗದಲ್ಲೂ ಮಳೆ ಬಿರುಸು ಪಡೆದಿದೆ. ಕಳೆದ ವರ್ಷದ ಮಳೆಗಾಲದಲ್ಲೂ ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿ 275 ಕೊಯನಾಡು ಬಳಿ ರಸ್ತೆ ಬಿರುಕು ಬಿಟ್ಟಿತ್ತು. ಆ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ರಸ್ತೆ ಬದಿಯಲ್ಲೇ ಮತ್ತೊಂದು ರಸ್ತೆಯನ್ನು ಮಾಡಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಈ ತಾತ್ಕಾಲಿಕ ರಸ್ತೆಯಲ್ಲಿಯೇ ಕಳೆದೊಂದು ವರ್ಷದಿಂದ ವಾಹನ ಸಂಚಾರ ನಡೆಯುತ್ತಿತ್ತು. ಆದರೆ ಎರಡು ತಿಂಗಳ ಬಳಿಕ ಮುಖ್ಯ ರಸ್ತೆಗೆ ಇರಿಸಿದ್ದ ಬ್ಯಾರಿಕೇಡ್ ತೆಗೆದಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರು ವಾಣಿಜ್ಯ ಸಂಬಂಧಿಸಿದಂತೆ ಭಾರೀ ವಾಹನಗಳು ಹಾಗೂ ಸರ್ಕಾರಿ ಬಸ್ಸುಗಳು ಹೆದ್ದಾರಿಯಲ್ಲಿ ಸಂಚಾರ ನಡೆಸುತ್ತಿದ್ದವು. ಇದೀಗ ಮತ್ತೆ ಮುಖ್ಯ ರಸ್ತೆ ಬಂದ್ ಮಾಡಲಾಗಿದ್ದು, ತಾತ್ಕಾಲಿಕ ರಸ್ತೆಯಲ್ಲಿ ವಾಹನ ಸಂಚಾರ ನಡೆಯುತ್ತಿದೆ.

ಜೋರಾಗಿ ಮಳೆ ಬಂದರೆ ಮಾತ್ರ ರಸ್ತೆ ಕುಸಿಯುವ ಭೀತಿ ಅಧಿಕಾರಿಗಳ ಅನುಭವಕ್ಕೆ ಬರುತ್ತಿದೆ. ಇಷ್ಟು ದಿನಗಳವರೆಗೆ ಅಧಿಕಾರಿಗಳು ಎಲ್ಲಿ ಹೋಗಿದ್ದರು. ಅಂದರೆ, ಮಳೆ ಬಂದರೆ ಬ್ಯಾರಿಕೇಡ್ ಹಾಕಿದರೆ ಸಾಕಾ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

suddiyaana